ಪಟ್ಟಣದ ಹೊರವಲಯದ ಗೌಡನಕೆರೆ ಪಕ್ಕದ ರೈತರ ಜಮೀನುಗಳಲ್ಲಿ ಬೆಳ್ಳಂಬೆಳಗ್ಗೆ ಪ್ರತ್ಯಕ್ಷವಾಗಿದ್ದ ಕರಡಿಯೊಂದು ರಕ್ಷಣಾ ಕಾರ್ಯಾಚರಣೆ ವೇಳೆ ಸಾವನ್ನಪಿದ ಘಟನೆ ಶುಕ್ರವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆಪಟ್ಟಣದ ಹೊರವಲಯದ ಗೌಡನಕೆರೆ ಪಕ್ಕದ ರೈತರ ಜಮೀನುಗಳಲ್ಲಿ ಬೆಳ್ಳಂಬೆಳಗ್ಗೆ ಪ್ರತ್ಯಕ್ಷವಾಗಿದ್ದ ಕರಡಿಯೊಂದು ರಕ್ಷಣಾ ಕಾರ್ಯಾಚರಣೆ ವೇಳೆ ಸಾವನ್ನಪಿದ ಘಟನೆ ಶುಕ್ರವಾರ ನಡೆದಿದೆ. ಬೆಳಗ್ಗೆ ಸುಮಾರು ೬ ಗಂಟೆ ಸಮಯದಲ್ಲಿ ಎಂದಿನಂತೆ ಜಮೀನಿಗೆ ತೆರಳಿದ್ದ ರೈತರು ಕರಡಿಯನ್ನು ಕಂಡು ಗಾಬರಿಗೊಂಡು, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳ ವಾಹನದಲ್ಲಿ ಆಗಮಿಸುವಾಗಲೇ ವಾಹನದ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿತ್ತು. ವಾಹನದ ಮೇಲೆ ಹಾರಿದ ಕರಡಿ, ತನ್ನ ಚೂಪಾದ ಉಗುರುಗಳು ಹಾಗೂ ಬಾಯಿಂದ ವಾಹನದ ಮೂರು ಟೈರ್‌ಗಳನ್ನು ಕಿತ್ತು ಹಾಕಲು ಪ್ರಯತ್ನಿಸಿದೆ. ಈ ಸಂದರ್ಭ ವಾಹನದಲ್ಲೇ ಕುಳಿತಿದ್ದ ಸಿಬ್ಬಂದಿ ನಂತರ ಕರಡಿ ಹೋದ ಬಳಿಕ ಸುರಕ್ಷಿತವಾಗಿ ಹೊರಬಂದು ರಕ್ಷಣಾ ಕಾರ್ಯ ನಡೆಸಿದರು. ಕೊನೆಗೂ ಸಮೀಪದ ಶೆಡ್ ಒಂದರಲ್ಲಿ ಕರಡಿಯನ್ನು ಕೂಡಿಹಾಕುವಲ್ಲಿ ಯಶಸ್ವಿಯಾದರು. ಬಳಿಕ ಅರವಳಿಕೆ ತಜ್ಞರು ಚುಚ್ಚುಮದ್ದು ನೀಡಿ ಶಾಂತಗೊಳಿಸಲು ಮುಂದಾದರು. ಆದರೆ, ಚುಚ್ಚುಮದ್ದು ನೀಡಿದ ನಂತರ ಸುಮಾರು ಹತ್ತು ನಿಮಿಷಗಳಲ್ಲಿ ಪರಿಶೀಲಿಸಿದಾಗ ಕರಡಿ ಸಾವನ್ನಪ್ಪಿತ್ತು. ಈ ವೇಳೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು ಮರಣ ಪರೀಕ್ಷೆಯ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಮಂಜುನಾಥ್ ಸೇರಿದಂತೆ ಅರಣ್ಯ ಇಲಾಖೆಯ ಡಿಎಫ್‌ಒ ಶಶಿಧರ್, ಎಸಿಎಫ್ ಮಲ್ಲಿಕಾರ್ಜುನ್, ಮಧುಗಿರಿ ಆರ್ ಎಫ್ ಒ ಸುರೇಶ್, ಕೊರಟಗೆರೆ ಆರ್‌ಎಫ್‌ಒ ಹನುಮಂತರಾಜು, ಉಪವಲಯ ಅರಣ್ಯ ಅಧಿಕಾರಿ ದಿಲೀಪ್‌ಕುಮಾರ್, ಅರಣ್ಯಪಾಲಕ ಮಂಜುನಾಥ್, ರಾಜಣ್ಣ, ನರಸರಾಜು ಗಂಗರಾಜು, ನರಸಿಂಹಮೂರ್ತಿ, ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.