ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಮೈಕ್ರೋ ಫೈನಾನ್ಸ್ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳ ಸಾಲದ ಕಿರುಕುಳ ತಪ್ಪಿಸಿಕೊಳ್ಳಲು ಸಹಕಾರಿ ಸಂಘಗಳಿಂದ ಸಾಲ ಪಡೆದು ಪ್ರತಿಯೊಬ್ಬರೂ ಆರ್ಥಿಕವಾಗಿ ಸಬಲರಾಗಬೇಕೆಂದು ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು. ತಾಲೂಕಿನ ಮಣೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಗೆ ಅನೇಕ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಸಾಲ ಸಿಗುತ್ತದೆ ಎಂದು ಯಥೇಚ್ಛವಾಗಿ ತೆಗೆದುಕೊಳ್ಳಬಾರದು. ನಾವುಗಳೇ ಸಾಲ ನೀಡುವಂತಾಗಬೇಕಿದೆ. ಈ ನಿಟ್ಟಿನಲ್ಲಿ ಸಹಕಾರಿಗಳು ಸಹಕಾರ ನೀಡುತ್ತವೆ. ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಯಲ್ಲಿ ₹ ೬೩ ಸಾವಿರ ಬಂಡವಾಳದೊಂದಿಗೆ ಆರಂಭವಾದ ಡಿಸಿಸಿ ಬ್ಯಾಂಕ್ ಇಂದು ₹ ೧೨ ಸಾವಿರ ಕೋಟಿ ಬಂಡವಾಳ ದುಡಿಯುತ್ತಿದೆ. ಆರಂಭದಲ್ಲಿ ಸಹಕಾರಿಗಳಿಂದ ರೈತರಿಗೆ ಕೇವಲ ₹ ೪ ರಿಂದ ₹ ೫ ಸಾವಿರ ಸಾಲ ನೀಡಲಾಗುತ್ತಿತ್ತು. ಹಿಂದೆ ₹ ೩೭ ಸಾವಿರ ರೈತರಿಗೆ ಸಾಲ ನೀಡಲಾಗಿತ್ತು. ಇಂದು ನಾಲ್ಕೂವರೆ ಲಕ್ಷ ರೈತರಿಗೆ ಸಾಲ ನೀಡಲಾಗಿದೆ. ಇಂದು ಕನಿಷ್ಠ ₹ ೬೫ ಸಾವಿರದಿಂದ ಗರಿಷ್ಠ ₹ ೩ ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಇದನ್ನು ರೈತರು ಅರಿತು ಸಹಕಾರಿ ಸಂಘಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.೨೦೦೬ರಲ್ಲಿ ಆರಂಭವಾದ ಮಣೂರ ಪಿಕೆಪಿಎಸ್ ಅಲ್ಪಾವಧಿಯಲ್ಲಿಯೇ ರೈತರಿಗೆ ಕಾಮಧೇನುವಾಗಿ ಬೆಳೆಯುತ್ತಿದೆ. ಜಿಲ್ಲೆಯಲ್ಲಿ ೨೭೨ ಪಿಕೆಪಿಎಸ್‌ಗಳಿವೆ. ಈ ಪೈಕಿ ೨೫೧ ಪಿಕೆಪಿಎಸ್ ಸ್ವಂತ ಕಟ್ಟಡ ಹೊಂದಲು ವ್ಹಿಡಿಸಿಸಿ ಬ್ಯಾಂಕ್ ನೆರವಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಬ್ಯಾಂಕ್‌ಗಳು ಸಹ ಸ್ವಂತ ಕಟ್ಟಡ ಹೊಂದಲು ನೆರವು ನೀಡಲಾಗುವುದು. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಬಿಜೆಪಿಯ ಒಬ್ಬ ನಾಯಕ ಅಡ್ಡಗಾಲು ಹಾಕಿದ್ದರಿಂದಲೇ ಇದು ನೆನಗುದಿಗೆ ಬಿದ್ದಿದೆ. ತಾವು ಮಾಡುವುದಿಲ್ಲ. ನಮಗೂ ಮಾಡಲು ಬಿಡುವುದಿಲ್ಲ. ಇವರು ಗೌಡರ ಕೋಣವಿದ್ದಂತೆ ಎಂದು ಟೀಕಿಸಿದರು.ಬಸವನಬಾಗೇವಾಡಿ ವ್ಹಿಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಇಲ್ಲಿನ ಬ್ಯಾಂಕ್‌ನಲ್ಲಿ ೧೮೦೦ ಸದಸ್ಯರಿದ್ದರೂ ಕೇವಲ ೭೮೦ ಸದಸ್ಯರು ಸಾಲ ಪಡೆದಿದ್ದಾರೆ. ಸಹಕಾರಿ ರಂಗದಲ್ಲಿ ಯಾವುದೇ ಜಾತಿ, ರಾಜಕೀಯ ಮಾಡದೇ ಸಹಕಾರಿ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಗೊಬ್ಬರ ಮಾರಾಟ ಮಾಡಲು ಸಂಘದಿಂದ ನೆರವು ನೀಡಲಾಗುವದು. ಈ ಗ್ರಾಮಕ್ಕೆ ಬರುವ ರಸ್ತೆಯನ್ನು ಶೀಘ್ರದಲ್ಲಿಯೇ ಸುಧಾರಿಸಲಾಗುವುದು ಎಂದರು.ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ವ್ಹಿಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ನ್ಯಾಯವಾದಿ ಬಿ.ಕೆ.ಕಲ್ಲೂರ ಮಾತನಾಡಿದರು. ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ, ಮಣೂರದ ಸಂಗಯ್ಯ ಹಿರೇಮಠ, ಜೈನಾಪೂರದ ಸಿದ್ದಲಿಂದ ಸ್ವಾಮೀಜಿ ವಹಿಸಿದ್ದರು.
ಬ್ಯಾಂಕಿನ ಅಧ್ಯಕ್ಷ ಬಸಪ್ಪ ಕಾರಜೋಳ, ಮುಖಂಡರಾದ ಸುರೇಶ ಹಾರಿವಾಳ, ನೀಲು ನಾಯಕ, ಜಗದೀಶ ಕೊಟ್ರಶೆಟ್ಟಿ, ಕಲ್ಲು ಸೊನ್ನದ, ಪಿ.ವೈ.ಡೆಂಗಿ, ಎಸ್.ಎಂ.ಹಂಗರಗಿ, ಎಸ್.ಬಿ.ಹೊಸಮನಿ, ಜಿ.ಎ.ಈಳಗೇರ, ಯಲ್ಲಪ್ಪ ತಳೇವಾಡ, ಸಿದ್ದಣ್ಣ ಜುಗತಿ, ಸುಭಾಸಗೌಡ ಪಾಟೀಲ, ರಾಮಣ್ಣ ಹೊಸಮನಿ, ಸಂತೋಷ ಲಮಾಣಿ, ರಾಘವೇಂದ್ರ ಲಮಾಣಿ, ಸಹಕಾರಿ ಸಂಘದ ಉಪಾಧ್ಯಕ್ಷ ಮಲ್ಲಪ್ಪ ಉಣ್ಣಿಭಾವಿ, ನಿರ್ದೇಶಕರಾದ ಮಲ್ಲಿಕಾರ್ಜುನ ಜುಗತಿ, ನಾಮದೇವ ಲಮಾಣಿ, ಹಣಮಂತ ಜುಗತಿ, ನಾನಪ್ಪ ಲಮಾಣಿ, ವಿಜಯಲಕ್ಷ್ಮೀ ಹಿರೇಮಠ, ರೇಣುಕಾ ಕಲಬುರ್ಕಿ ಇತರರು ಇದ್ದರು. ವೈ.ಸಿ.ಕಾರಜೋಳ ಸ್ವಾಗತಿಸಿದರು. ಎಚ್.ಬಿ.ಬಾರಿಕಾಯಿ ಪ್ರಾಸ್ತವಿಕವಾಗಿ ಮಾತನಾಡಿ, ನಿರೂಪಿಸಿದರು. ರಾಜು ಹೊಸಮನಿ ವಂದಿಸಿದರು.