ಉಡುಪಿ: ಲಕ್ಷ್ಮೀ ವೆಂಕಟೇಶ ದೇವಾಲಯದ 125 ದಿನ ಆಹೋರಾತ್ರಿ ಭಜನೆಗೆ ಚಾಲನೆ

| Published : Feb 09 2025, 01:30 AM IST

ಉಡುಪಿ: ಲಕ್ಷ್ಮೀ ವೆಂಕಟೇಶ ದೇವಾಲಯದ 125 ದಿನ ಆಹೋರಾತ್ರಿ ಭಜನೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ತೆಂಕಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಶತಮಾನೋತ್ತರ ರಜತ ಮಹೋತ್ಸವ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವಕ್ಕೆ ಶ್ರೀ ಕಾಶಿಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಶತಮಾನೋತ್ತರ ರಜತ ಮಹೋತ್ಸವ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವಕ್ಕೆ ಶ್ರೀ ಕಾಶಿಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರು ಚಾಲನೆ ನೀಡಿದರು.ದೇವಳದ ವತಿಯಿಂದ ಶ್ರೀಗಳನ್ನು ಮಂಗಳವಾದ್ಯ ಹಾಗೂ ಪೂರ್ಣಕುಂಭಗಳೊಂದಿಗೆ ಸ್ವಾಗತಿಸಿ ಬರಮಾಡಿಕೊಂಡು ಪಾದಪೂಜೆ ಮಾಡಿ ಫಲಪುಷ್ಪ ಕಾಣಿಕೆ ನೀಡಿ ಗೌರವಿಸಲಾಯಿತು. ನಂತರ ಸ್ವಾಮೀಜಿ ದೇವಳದ ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ, ಭಜನಾ ಮಹೋತ್ಸವದ ಶ್ರೀ ವಿಠೋಬಾ ರುಖುಮಾಯಿ ದೇವರಿಗೆ ಆರತಿ ಬೆಳಗಿಸಿ ಭಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು.ನಂತರ ತಮ್ಮ ಅನುಗ್ರಹ ಸಂದೇಶದಲ್ಲಿ, ನಮ್ಮ ಹಿರಿಯರು ಒಂದಾಗಿ ಸಮಾಜದ ಅಭಿವೃದ್ಧಿಗೆ, ದೇವಾಲಯ ನಿರ್ಮಾಣ ಮಾಡಿ, ಗುರು ಆಶ್ರಯದಂತೆ ಭಜನಾ ತಂಡಗಳನ್ನು ಕಟ್ಟಿಕೊಂಡು 125 ವರ್ಷಗಳಿಂದ ಹರಿನಾಮ ಸಂಕೀರ್ತನೆ ನಡೆಸುತ್ತಿರುವುದು ಸಂತಸವಾಗಿದೆ. ನಮ್ಮ ಪೂಜ್ಯಗುರುಗಳಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಜನ್ಮಶತಮಾನೋತ್ಸವದ ಈ ಶುಭಸಂದರ್ಭದಲ್ಲಿ ಆಚರಣೆಯ ಸವಿನೆನಪಿಗಾಗಿ ಘರ್ ಘರ್ ಭಜನೆ ಆರಂಭಿಸಿ ನೂರಾರು ಮನೆಮನೆಗಳಲ್ಲಿ ಭಜನೆ ಆರಂಭಿಸಿ ಶ್ರೀಗುರುಗಳ ಆರಾಧನೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಗುರುಗಳ ಹಾಗೂ ಶ್ರೀ ದೇವರ ವಿಶೇಷ ಅನುಗ್ರಹ ನಿಮ್ಮಲ್ಲರ ಮೇಲೆ ಇರಲಿ ಎಂದು ಶುಭ ಹಾರೈಸಿದರು.125 ದಿನಗಳ ಕಾಲ ನಡೆಯುವ ಭಜನಾ ಮಹೋತ್ಸವಕ್ಕೆ ಪ್ರತಿ ಎರಡು ಗಂಟೆಗೆ ಒಂದೊಂದು ತಂಡ ರಚಿಸಿ ಸಮಯ ನಿಗದಿ ಪಡಿಸಲಾಗಿದೆ. ಸುಮಾರು 250ಕ್ಕೂ ಹೆಚ್ಚಿನ ಸಂಗೀತ ಕಲಾವಿದರು ಭಾಗವಹಿಸುವ ನಿರೀಕ್ಷೆ ಇದೆ. ಊರ ಪರವೂರಿನ ನೂರಾರು ಭಜನಾ ತಂಡಗಳು ಭಾಗವಹಿಸಲಿವೆ. ಪ್ರತಿ ಭಾನುವಾರ ಸಂಜೆ ನಗರ ಭಜನೆ ನಡೆಯಲಿದೆ ಎಂದು ಮಹೋತ್ಸವದ ಪ್ರಮುಖರಾದ ಮಟ್ಟಾರ್ ಸತೀಶ್ ಕಿಣಿ ತಿಳಿಸಿದರು.ದೇವಳದ ಪ್ರಧಾನ ಅರ್ಚಕ ದಯಾಘನ್ ಭಟ್, ವೇದಮೂರ್ತಿ ಚೇ೦ಪಿ ಶ್ರೀಕಾಂತ್ ಭಟ್ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ವಿಧಾನ ನೆರವೇರಿಸಿದರು. ವೇದಮೂರ್ತಿ ರಾಮಚಂದ್ರ ಭಟ್, ವಿನಾಯಕ್ ಭಟ್, ದೇವಳದ ಮುಕ್ತೇಸರ ಪಿ.ವಿ. ಶೆಣೈ, ಆಡಳಿತ ಮಂಡಳಿಯ ಸದಸ್ಯರಾದ ವಿಶ್ವನಾಥ್ ಭಟ್, ವಸಂತ್ ಕಿಣೆ, ಪುಂಡಲೀಕ್ ಕಾಮತ್, ಶಾಂತಾರಾಮ್ ಶೆಣೈ, ಗಣೇಶ್ ಕಿಣಿ, ಉಮೇಶ್ ಪೈ, ಕೈಲಾಸನಾಥ ಶೆಣೈ, ಪ್ರಮುಖರಾದ ವಿಶಾಲ್ ಶೆಣೈ, ವಿವೇಕ್ ಶಾನ್‌ಭಾಗ್, ಡಾ. ವಿನಾಯಕ್ ಶೆಣೈ ಹಾಗೂವಿವಿಧ ಭಜನಾ ಮಂಡಳಿಯ ಸದಸ್ಯರು, ಜಿ.ಎಸ್.ಬಿ. ಯುವಕ /ಮಹಿಳಾ ಮಂಡಳಿಯ ಸದಸ್ಯರು, ನೂರಾರು ಸಮಾಜ ಬಾಂದವರು ಉಪಸ್ಥಿತರಿದ್ದರು.