ಜಿಲ್ಲಾ ಮಾನವ ಅಭಿವೃದ್ಧಿ 2025ರ ವರದಿಯನ್ನು ನಿಖರವಾಗಿ ನೀಡಿದಾಗ ಮಾತ್ರ ಮುಂದಿನ ಅಭಿವೃದ್ಧಿಗೆ ದಿಕ್ಸೂಚಿಯಾಗಲಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾ ಮಾನವ ಅಭಿವೃದ್ಧಿ 2025ರ ವರದಿಯನ್ನು ನಿಖರವಾಗಿ ನೀಡಿದಾಗ ಮಾತ್ರ ಮುಂದಿನ ಅಭಿವೃದ್ಧಿಗೆ ದಿಕ್ಸೂಚಿಯಾಗಲಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.ಜಿಲ್ಲಾ ಪಂಚಾಯತಿ ನೂತನ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಠಿ ಯೋಜನೆ-2031ರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅಂಕಿ-ಅಂಶಗಳ ಆಧಾರದ ಮೇಲೆ ಮುಂದಿನ ಅಭಿವೃದ್ದಿಗೆ ಪೂರಕವಾಗಲಿದ್ದು, ನಿಖರವಾದ ವರದಿಯನ್ನು ಸಂಬಂಧಿಸಿದ ಇಲಾಖೆಗಳು ಒದಗಿಸಬೇಕು. ಇಲಾಖೆಗಳಿಗೆ ಬಿಡುಗಡೆಯಾದ ಅನುದಾನ ಯಾವುದೇ ರೀತಿಯಲ್ಲಿ ವ್ಯರ್ಥವಾಗಬಾರದು. ಸಂಪೂರ್ಣ ಅನುದಾನ ಸದ್ಬಳಕೆಯಾಗಬೇಕು ಎಂದು ಸೂಚನೆ ನೀಡಿದರು.ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಜಿಲ್ಲೆಯ ಪ್ರಸ್ತುತ ಸ್ಥಿತಿ ಹಾಗೂ ಮುಂದಿನ 5 ವರ್ಷಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ದತ್ತಾಂಶ ಸಂಗ್ರಹಿಸಬೇಕು. ಜಿಲ್ಲೆಯ ಸಾಮಾಜಿಕ ಶೈಕ್ಷಣಿಕ, ಆರೋಗ್ಯ, ಕೃಷಿ, ಕುಡಿಯುವ ನೀರು ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿ ವರದಿ ತಯಾರಿಸಿದರೇ ಮಾತ್ರ ಜನರ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ತಲಾ ಆದಾಯ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು. ಯೋಜನಾ ಇಲಾಖೆಯ ಮಾನವ ಅಭಿವೃದ್ಧಿ ವಿಭಾಗದ ಜಂಟಿ ಕಾರ್ಯದರ್ಶಿ ಮತ್ತು ಹಿರಿಯ ನಿರ್ದೇಶಕ ಬಸವರಾಜ.ಎಸ್ ಮಾತನಾಡಿ, ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ 2013 ವರದಿಗಾಗಿ 117 ಅಂಶಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸ್ಥಳೀಯ ಸಂಪನ್ಮೂಲಗಳ ಬಳಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆರ್ಥಿಕ ಬೆಳೆವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಮಾನವ ಅಭಿವೃದ್ಧಿ ವರದಿ ಆಧಾರದ ಮೇಲೆ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಅನುದಾನ ಹಂಚಿಕೆ ಆಗುತ್ತದೆ. ಅನುದಾನ ಸರಿಯಾಗಿ ಸದ್ಬಳಕೆಯಾಗಬೇಕು ಅಂದಾಗ ಮಾತ್ರ ಅಭಿವೃದ್ಧಿ ಸಾಧ್ಯ. ತಾಯಂದಿರ ಮರಣ, ಶಿಶು ಮರಣ, ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಇವುಗಳನ್ನು ನಿಖರವಾಗಿ ದಾಖಲಿಸಬೇಕು. ಗ್ರಾಪಂ ಮಟ್ಟದಲ್ಲಿ 17 ಮಾನದಂಡಗಳನ್ನು ಗುರುತಿಸಿ ನೀಡಲಾಗಿದೆ. ಅದರ ಆಧಾರದ ಮೇಲೆ ವರದಿ ತಯಾರಿಸಬೇಕು. ಜೀವನದ ಗುಣಮಟ್ಟ ಶಿಕ್ಷಣ ಮತ್ತು ಆರೋಗ್ಯವನ್ನು ಮೂಲ ಮಾನದಂಡವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಆಹೇರಿ, ಜಿಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ರಾಮೇಶ್ವರ ಉಕ್ಕಲಿ, ಮುಖ್ಯ ಯೋಜನಾಧಿಕಾರಿ ಎ.ಬಿ.ಅಲ್ಲಮಪ್ರಭು ಸೇರಿದಂತೆ ಇತರರು ಉಪಸ್ಥಿತರಿದ್ದರು.