ಹಿರಿತನ, ಕ್ಷೇತ್ರದ ಹಿಂದುಳಿದ ಸ್ಥಿತಿಯನ್ನು ಪರಿಗಣಿಸಿ ನನಗೆ ಸಚಿವ ಸ್ಥಾನ ದೊರೆಯುವ ವಿಶ್ವಾಸವಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜು.15ರೊಳಗೆ ತಾನು ರಾಜ್ಯ ಸಚಿವ ಸಂಪುಟಕ್ಕೆ ಸೇರುವುದು ಖಚಿತ ಎಂಬ ವಿಶ್ವಾಸವನ್ನು ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿ, ಜಿಲ್ಲೆಯಲ್ಲಿ ಮೂರು ಬಾರಿ ಪಕ್ಷವನ್ನು ಪ್ರತಿನಿಧಿಸಿ ಶಾಸಕರಾಗಿರುವವರ ಪೈಕಿ ಅತ್ಯಂತ ಹಿರಿಯ ಶಾಸಕನಾಗಿದ್ದೇನೆ. ಬಾಗೇಪಲ್ಲಿ ಕ್ಷೇತ್ರಕ್ಕೆ ಈವರೆಗೆ ಸಚಿವ ಸ್ಥಾನ ಒಮ್ಮೆಯೂ ಸಿಕ್ಕಿಲ್ಲ. ಹೀಗಾಗಿ ಹಿರಿತನ ಮತ್ತು ಕ್ಷೇತ್ರದ ಹಿಂದುಳಿದ ಸ್ಥಿತಿಯನ್ನು ಪರಿಗಣಿಸಿ ನನಗೆ ಸಚಿವ ಸ್ಥಾನ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.

ಪ್ರತಿಯೊಬ್ಬ ಶಾಸಕರಿಗೂ ಸಚಿವರಾಗುವ ಆಸೆ ಇರುತ್ತದೆ. ಆದರೆ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹಾಗೂ ಶಾಸಕರಾಗಿ ಕೆಲಸ ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ಆದ್ದರಿಂದ ಈ ಬಾರಿ ನನಗೆ ಅವಕಾಶ ಸಿಗುವ ಭರವಸೆ ಇದೆ. ಈ ಸಂಬಂಧ ಈಗಾಗಲೇ ಚಿಂತಾಮಣಿ ಶಾಸಕ ಎಂ.ಸಿ. ಸುಧಾಕರ್ ಅವರಿಗೆ ಮನವಿ ಮಾಡಿದ್ದು, ನೀವು ಮೂರು ವರ್ಷ ಸಚಿವರಾಗಿದ್ದೀರಿ. ಈ ಬಾರಿ ನನಗೆ ಅವಕಾಶ ಮಾಡಿಕೊಡಿ ಕೇಳಿಕೊಂಡಿದ್ದೇನೆ.


ಇನ್ನು ಶಾಸಕ ಪ್ರದೀಪ್ ಈಶ್ವರ್ ಅವರಿಗೂ ನೀವು ಯುವಕರಾಗಿದ್ದು, ಮುಂದಿನ ದಿನಗಳಲ್ಲಿ ಸಾಕಷ್ಟು ಅವಕಾಶಗಳಿವೆ, ಈ ಬಾರಿ ನನಗೆ ಬಿಟ್ಟುಕೊಡಿ ಎಂದು ಕೇಳಿದ್ದೇನೆ. ಅಂತಿಮವಾಗಿ ಸಚಿವ ಸ್ಥಾನ ನೀಡುವುದು ಅಥವಾ ನೀಡದಿರುವುದು ಪಕ್ಷದ ಹೈಕಮಾಂಡ್ ನಿರ್ಧಾರ. ಯಾರಿಗೆ ಅವಕಾಶ ನೀಡಿದರೂ ಅದನ್ನು ಸ್ವಾಗತಿಸುತ್ತೇನೆ. ಒಂದು ವೇಳೆ ನನಗೆ ಸಚಿವ ಸ್ಥಾನ ಸಿಕ್ಕರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಯಾವುದೇ ರೀತಿಯ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.

ಸಚಿವ ಸ್ಥಾನಕ್ಕಾಗಿ ತಾವು ಯಾವುದೇ ಲಾಬಿ ನಡೆಸಿಲ್ಲ. ಒಮ್ಮೆ ಮಾತ್ರ ದೆಹಲಿಗೆ ತೆರಳಿ ಪಕ್ಷದ ವರಿಷ್ಠರಾದ ವೇಣು ಗೋಪಾಲ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ತಮ್ಮ ಹಕ್ಕೊತ್ತಾಯ ಮಂಡಿಸಿದ್ದೇನೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಪ್ರಯತ್ನ ಮಾಡಿಲ್ಲ ಎಂದರು.

ಬಾಗೇಪಲ್ಲಿ ಕ್ಷೇತ್ರದಲ್ಲಿ 10ರಿಂದ 15 ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ಇದೆ. ಮಳೆ ಕೊರತೆ ಯಿಂದ ರೈತರು ಬಿತ್ತನೆ ಮಾಡಿದ ಬೆಳೆ ಹಾಳಾಗುವ ಆತಂಕ ಎದುರಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೆಂಪೇಗೌಡ ಜಯಂತಿ ವೇಳೆ ನಡೆದ ಗದ್ದಲದ ಕುರಿತು ಪ್ರತಿಕ್ರಿಯಿಸಿದ ಅವರು, ಆ ಘಟನೆ ನಡೆಯಬಾರದಿತ್ತು. ಎರಡೂ ಕಡೆಯವರು ಸಂಯಮದಿಂದ ವರ್ತಿಸಬೇಕಿತ್ತು. ಕಾರ್ಯ ಕ್ರಮದ ಅಧ್ಯಕ್ಷರಾಗಿದ್ದ ಶಾಸಕರನ್ನು ಕೆಳಗಿಳಿಯಲು ಒತ್ತಾಯಿಸಿದ್ದು ತಪ್ಪು. ಕಾರ್ಯಕ್ರಮದ ಬಳಿಕ ಶಾಸಕ ಪ್ರದೀಪ್ ಈಶ್ವರ್ ತೋರಿದ ವರ್ತನೆಯೂ ತಪ್ಪೇ. ಈ ವಿಚಾರದಲ್ಲಿ ಇಬ್ಬರಲ್ಲೂ ತಪ್ಪಿದೆ ಎಂದು ಹೇಳಿದರು.

ಸಿಕೆಬಿ-3 ಸುದ್ದಿಗಾರರೊಂದಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿದರು.