ಮುಂಗಾರು ಮಳೆ ಬಾರದೆ ಕಂಗಾಲಾಗಿರುವ ಈ ಸಂದರ್ಭದಲ್ಲಿ ಮಲೆ ದೇವರ ಮೊರೆ ಹೋಗುತ್ತಿರುವ ರೈತರು, ಸಾಮಾನ್ಯ ಜನ ಹಲವಾರು ಪೂಜೆ, ಪುನಸ್ಕಾರಗಳ ಮೊರೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಅದಾಗಲೇ ಅನೇಕ ಗ್ರಾಮಗಳಲ್ಲಿ ಭಜನೆ, ಪ್ರಾರ್ಥನೆ ನಡೆದಿದ್ದರೂ ಆಳಂದದಲ್ಲಿ ಹಳ್ಳಿ ಸಲಗರದಲ್ಲಿ ಕತ್ತೆಗಳ ಮದುವೆ ಮಾಡಿ ಮೆರವಣಿಗೆ ನಡೆಸಿ ವರುಣನ ಆಕರ್ಷಿಸುವತ್ತ ರೈತರು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಮುಂಗಾರು ಮಳೆ ಬಾರದೆ ಕಂಗಾಲಾಗಿರುವ ಈ ಸಂದರ್ಭದಲ್ಲಿ ಮಲೆ ದೇವರ ಮೊರೆ ಹೋಗುತ್ತಿರುವ ರೈತರು, ಸಾಮಾನ್ಯ ಜನ ಹಲವಾರು ಪೂಜೆ, ಪುನಸ್ಕಾರಗಳ ಮೊರೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಅದಾಗಲೇ ಅನೇಕ ಗ್ರಾಮಗಳಲ್ಲಿ ಭಜನೆ, ಪ್ರಾರ್ಥನೆ ನಡೆದಿದ್ದರೂ ಆಳಂದದಲ್ಲಿ ಹಳ್ಳಿ ಸಲಗರದಲ್ಲಿ ಕತ್ತೆಗಳ ಮದುವೆ ಮಾಡಿ ಮೆರವಣಿಗೆ ನಡೆಸಿ ವರುಣನ ಆಕರ್ಷಿಸುವತ್ತ ರೈತರು ಮುಂದಾಗಿದ್ದಾರೆ.

ಇನ್ನು ಚಿಂಚೋಳಿಯಲ್ಲಿ ಬುಟ್ಟಿ ಜಾತ್ರೆ ಮಾಡಿ ಲಂಬಾಣಿ ಸಮುದಾಯದ ರೈತರು, ಸಾರ್ವಜನಿಕರು ಮಳೆ ದೇವರಿಗೆ ಒಲಿಸುವ ಪೂಜೆ ಮಾಡುತ್ತಿದ್ದಾರೆ. ಇತ್ತ ಕಲಬುರಗಿಯಲ್ಲಿರುವ ಬ್ರಹ್ಮಪೂರ ಉತ್ತರಾದಿ ಮಠದಲ್ಲಿ ಮಹಾಭಾರತ ವಿರಾಟ ಪರ್ವ ಉಪನ್ಯಾಸ, ಪರ್ಜನ್ಯ ಜಪ, ಹೋಮಾದಿಗಳನ್ನು ಮಾಡುತ್ತ ವರುಣ ದೇವರಿಗೆ ಒಲಿಸುವ ಪ್ರಯತ್ನಗಳು ಸಾಗಿವೆ.

ಪರ್ಜನ್ಯ ಜಪ, ವಿರಾಟ ಪರ್ವ ಉಪನ್ಯಾಸ, ಸಾಮೂಹಿಕ ಪಾರಾಯಣ

ಮಳೆ ದೇವರಾದ ವರುಣನನ್ನು ಒಲಿಸಲು ಹಾಗೂ ಊತ್ತಮ ಮಳೆಗಾಗಿ ಪ್ರಾರ್ಥಿಸಿ ಬ್ರಹ್ಮಪೂರ ಉತ್ತರಾದಿ ಮಠ ರುಕ್ಮಿಣಿ ಪಾಂಡುರಂಗ ಮಂದಿರದಲ್ಲಿ ಕಳೆದೊಂದು ವಾರದಿಂದ ಮಮ್ಣೂರಿನ ವೇದೇಶತೀರ್ಥ ವಿದ್ಯಾಪೀಠದ ಕುಲಪತಿ ಅನಂತಾಚಾರ್ಯ ಅಕಮಂಚಿ ಇವರ ನೇತೃತ್ವದಲ್ಲಿ ವಿರಾಟ ಪರ್ವ ಉಪನ್ಯಾಸ ಸಾಗಿದೆ. ವಿಶ್ವ ಮಧ್ವ ಮಹಾ ಪರಿಷತ್ತಿನವರು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಗಳ ಅಣತಿಯಂತೆ ಈ ಉಪನ್ಯಾಸ ಹಾಗೂ ಹೋಮ ಹವನದ ಸಮಾರಂಭ ಆಯೋಜಿಸಿದ್ದಾರೆ.

ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥರ ಆಜ್ಞಾನುಸಾರವಾಗಿ ವಿರಾಟ ಪರ್ವ ಉಪನ್ಯಾಸ ಹಾಗೂ ಪರ್ಜನ್ಯ ಜಪ, ಹೋಮಾದಿಗಳನ್ನು ವಾರಕಾಲ ನಡೆಸಲಾಗುತ್ತಿದೆ. ಮಳೆಗಾಗಿ, ಲೋಕ ಕಲ್ಯಾಣಕ್ಕಾಗಿ ಇವೆಲ್ಲವೂ ಕೈಗೊಳ್ಳಲಾಗುತ್ತಿದೆ. ಇದರಿಂದ ಉತ್ತಮ ಮಳೆಯ ಪ್ರಾರ್ಥನೆ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಬೇಗ ಮಳೆರಾಯ ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿ ಸೇರಿದಂತೆ ಇಡೀ ಕರುನಾಡಿಗೆ ಕರುಣೆ ತೋರಲಿ ಎಂಬುದೇ ಪ್ರಾರ್ಥನೆ ಎಂದು ಉತ್ತರಾದಿ ಮಠಾಧಿಕಾರಿ ಘಂಟಿ ರಾಮಾಚಾರ್ಯ, ವ್ಯವಸ್ಥಾಪಕರಾದ ವಿನೋದಾಚಾರ್ಯ ಗಲಗಲಿ ಹೇಳಿದ್ದಾರೆ. ಜು. 6 ರ ಸೋಮವಾರ ವಿರಾಟ ಪರ್ವ ಉಪನ್ಯಾಸದ ಮಹಾ ಮಂಗಲೋತ್ಸವ ನಡೆಯಲಿದೆ.

ಉತ್ತಮ ವರ್ಷಧಾರೆಗೆ ಆಳಂದದಲ್ಲಿ ಕತ್ತೆ ಮದುವೆ

ಉತ್ತಮ ಮಳೆಯಾಗಲಿ, ರೈತರ ಬೆಳೆ ಸಮೃದ್ಧಿಯಾಗಲಿ ಎಂಬ ಆಶಯದೊಂದಿಗೆ ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಕತ್ತೆಗಳ ಮದುವೆ ನೆರವೇರಿಸಿ ವರುಣದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗ್ರಾಮೀಣ ಭಾಗದಲ್ಲಿ ತಲೆಮಾರಿನಿಂದ ನಡೆದುಕೊಂಡು ಬಂದಿರುವ ಈ ವಿಶಿಷ್ಟ ಆಚರಣೆ ಭಕ್ತಿ, ಸಂಪ್ರದಾಯ ಹಾಗೂ ಜನಪದ ಸಂಸ್ಕøತಿಯ ಪ್ರತೀಕವಾಗಿ ಗಮನ ಸೆಳೆಯಿತು.

ಮಳೆಯ ಕೊರತೆಯಿಂದ ರೈತರು ಆತಂಕಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರಾಚೀನರ ಬಲವಾದ ನಂಬಿಕೆಯನ್ನು ಯಂತೆ ಕತ್ತೆಗಳ ಜೋಡಿ ಕುರಿಗಳ ಮೂಲಕ ಸ್ವಾಗತಿಸಿ ಪ್ರಮುಖ ಸ್ಥಳದಲ್ಲಿ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.

ನಂತರ ಕಳಸಗಿತ್ತೆಯರು ಹೆಣ್ಣು ಹಾಗೂ ಗಂಡು ಕತ್ತೆಗಳಿಗೆ ಅರಿಶಿಣ–ಕುಂಕುಮ ಹಚ್ಚಿ, ಸುರಗಿ ಸುತ್ತಿ, ಸಂಪ್ರದಾಯಬದ್ಧವಾಗಿ "ಕಂಚೆಣ್ಣೆ–ಮಿಂಚೆಣ್ಣೆ " ಹಾಡುಗಳನ್ನು ಹಾಡುತ್ತ ಎಣ್ಣೆ ಎರೆಯುವ ವಿಧಿ ನೆರವೇರಿಸಿದರು. ಹೊಸ ಬಟ್ಟೆಗಳನ್ನು ಹೊದಿಸಿ, ಬಾಸಿಂಗ ಕಟ್ಟಿ ಮದುಮಗ–ಮದುಮಗಳಂತೆ ಅಲಂಕರಿಸಲಾಯಿತು. ನೆರೆದಿದ್ದ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಅಕ್ಷತೆ ಹಾಕಿ ವರುಣದೇವರು ಕೃಪೆ ತೋರಿ ಉತ್ತಮ ಮಳೆ ಸುರಿಸಲಿ ಎಂದು ಪ್ರಾರ್ಥಿಸಿದರು. ವಿವಾಹದ ಬಳಿಕ ಕತ್ತೆಗಳನ್ನು ಅಲಂಕರಿಸಿದ ರಥದಂತೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ವರುಣ ಕೃಪಡೆಗಾಗಿ ಶಿವನ ಭಜನೆ

ಹಳ್ಳಿ ಸಲಗರ ಗ್ರಾಮದ ಭಜನಾ ಸಂಘದ ಸದಸ್ಯರು "ಓಂ ನಮಃ ಶಿವಾಯ " ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುತ್ತ ಭಕ್ತಿಭಾವದಿಂದ ಗ್ರಾಮದ ಸುತ್ತ ಪ್ರದಕ್ಷಿಣೆ ಹಾಕಿದರು. ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಈ ಕಾರ್ಯಕ್ರಮದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ವಿಶೇಷವಾಗಿದ್ದು, ರೈತ ಸಮುದಾಯ ಉತ್ತಮ ಮಳೆಯ ನಿರೀಕ್ಷೆಯಲ್ಲಿ ವರುಣದೇವರಲ್ಲಿ ಬೇಡಿಕೊಂಡರು.

ಚಿಂಚೋಳಿಯಲ್ಲಿ ಬುಟ್ಟಿ ಜಾತ್ರೆ, ಮೇಘರಾಜನಿಗೆ ಆಹ್ವಾನ

ಚಿಂಚೋಳಿ ತಾಲೂಕಿನಲ್ಲಿ ರೈತರು, ಮಳೆಗಾಗಿ ವಿಶೇಷ ಜಾತ್ರೆಯನ್ನೇ ಮಾಡಿದ್ದಾರೆ. ಚಂದಾಪೂರದ ಗಂಗೂನಾಯಕ ತಾಂಡಾದ ನಿವಾಸಿಗಳು ಬುಟ್ಟಿಜಾತ್ರೆ ಮಾಡಿ ಮರಿಯಮ್ಮ ದೇವಿಗೆ ಸ್ಮರಿಸಿದರು. ದೇವಿಗೆ ನೈವೇದ್ಯ ಬುಟ್ಟಿಯಲ್ಲಿ ತಗೆದುಕೊಂಡು ಹೋಗಿ ಅರ್ಪಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಗಂಗೂನಾಯಕ ತಾಂಡಾದ ಸುಮಂಗಲಿಯರು ಹಾಗೂ ಪುರುಷರು ಎಲ್ಲರೂ ಸೇರಿಕೊಂಡು ಮುಲ್ಲಾಮಾರಿ ನದಿಯಲ್ಲಿ ತೆಪ್ಪೋತ್ಸವ ನಡೆಸಿ ಮರಿಯಮ್ಮ ದೇವಿಗೆ ಪೂಜೆ ಸಲ್ಲಿಸಿದರು. ಮೇಘರಾಜ ಎಲ್ಲಿ ಹೋಗಿರುವೆ, ಎಲ್ಲಿರುವೆ ಬೇಗ ಬಾ... ಎಂದು ತಾಳಬದ್ಧವಾಗಿ ಭಜನೆ ನೆರವೇರಿಸಿ ಪ್ರಾರ್ಥಿಸಿದರು.