ಅಡಕೆ ತೋಟಗಳನ್ನು ವಿನಾಶದ ಅಂಚಿಗೆ ತಳ್ಳುವ ವಿದ್ಯುತ್‌ ಮಾರ್ಗಕ್ಕೆ ತಡೆ ಒಡ್ಡುವಂತೆ ಸಂಸದ ಗೋವಿಂದ ಎಂ.ಕಾರಜೋಳ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಭೀಮಸಮುದ್ರದ ಆಸುಪಾಸಿನಲ್ಲಿ ಸಮೃದ್ಧ ಅಡಿಕೆ ಬೆಳೆಗೆ ಹೆಸರುವಾಸಿಯಾಗಿರುವ ಹುಲ್ಲೂರು, ಸಿಂಗಾಪುರ, ಬೆನಕನಹಳ್ಳಿ ಹಾಗೂ ಸುತ್ತಲಿನ ಅಡಿಕೆ ತೋಟಗಳ ಮೇಲೆ ಈಗ ಕರಿಛಾಯೆ ಮೂಡಿದಂತಿದೆ. ಎಲ್ಲಿಂದಲೋ ತಂದು ಮತ್ತೆಲ್ಲಿಗೋ ಕೊಂಡೊಯ್ಯುವ ಉದ್ದೇಶಿತ ವಿದ್ಯುತ್‌ ಮಾರ್ಗಕ್ಕೆ ಈ ಅಡಿಕೆ ತೋಟಗಳು ಇನ್ನೇನು ಬಲಿಯಾಗಿಬಿಡುತ್ತವೇನೋ ಎಂಬ ಸಹಜ ಆತಂಕ ಅಡಿಕೆ ಬೆಳೆಗಾರರಲ್ಲಿ ಮನೆಮಾಡಿದೆ.

ಮಂಡ್ಯ ಜಿಲ್ಲೆಯ ಹಂಪಾಪುರದ ಸಮೀಪ ಗಾಳಿ ಯಂತ್ರಗಳ ಮೂಲಕ ಉತ್ಪಾದಿಸುವ 400 ಕೆವಿ ವಿದ್ಯುತ್ತನ್ನು ಜಗಳೂರು ತಾಲೂಕಿನ ಹತ್ತಿರ ಇರುವ ಹಿರೇಮಲ್ಲನಹೊಳೆ ಕೆಪಿಟಿಸಿಎಲ್‌ಗೆ ಸೇರಿಸುವ ಯೋಜನೆ ಯಾರ ಕಿವಿಗೂ ಬೀಳದಂತೆ ಗುಪ್ತವಾಗಿ ನಡೆದಿರುವುದು ಇದೀಗ ರೈತ ಸಮುದಾಯದ ಕಿವಿಗೆ ಬಿದ್ದಿದೆ. ರಾಷ್ಟ್ರೀಯ ವಿದ್ಯುತ್‌ ಕಾರಿಡಾರ್‌ ಯೋಜನೆಯ ಹೆಸರಿನಲ್ಲಿ ಇದು ಜಾರಿಯಾಗುತ್ತಿದೆ ಎಂದು ಹೇಳಲಾಗಿದೆ. ವಿದ್ಯುತ್‌ ಸಂಪರ್ಕ ಕಾಮಗಾರಿ ಮುಗಿಸಲು ಅಗತ್ಯವಾದ ಜಾಗ ಪರೀಕ್ಷಿಸಲು ಗುಪ್ತವಾಗಿ ಸರ್ವೇ ಕಾರ್ಯವೂ ಮುಗಿದಿದೆ. ಸಂಪರ್ಕ ಕಲ್ಪಿಸುವ 400 ಕೆ.ವಿ. ವಿದ್ಯುತ್‌ ಕಾರಿಡಾರ್‌ ಯೋಜನೆಯಿಂದ ಹುಲ್ಲೂರು, ಸಿಂಗಾಪುರ, ಬೆನಕನಹಳ್ಳಿ ಸುತ್ತಲಿನ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಭೀಮಸಮುದ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಕೃಷಿಕರು ಅತಿ ಹೆಚ್ಚು ಅಡಿಕೆ ಬೆಳೆ ಬೆಳೆಯುತ್ತಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 75 ವರ್ಷಗಳಿಂದಲೂ ಅಡಿಕೆ ಬೆಳೆಯುವ ಪ್ರಸಿದ್ಧಿ ಈ ಭಾಗಕ್ಕಿದೆ. ಸಾವಿರಾರು ಎಕರೆ ವಿಸ್ತೀರ್ಣದ ಭುಮಿಯಲ್ಲಿ ಅಡಿಕೆಯ ತೋಟಗಳು ಬೆಳೆದು ನಿಂತಿವೆ. ಅವುಗಳನ್ನೇ ನಂಬಿ ಲಕ್ಷಾಂತರ ಜನರು ಬದುಕು ಕಟ್ಟಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅಡಿಕೆ ಸಿಗುತ್ತಿರುವ ಬೆಲೆಯಿಂದ ಉತ್ತೇಜಿತರಾಗಿ ರೈತರು ಕೃಷಿಯನ್ನು ಮತ್ತುಷ್ಟು ವಿಸ್ತರಿಸಿಕೊಂಡಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ ಭಾಗದಲ್ಲಿ ಬೆಳೆಯುವ ಅಡಿಕೆಗಿಂತ ಗುಣಮಟ್ಟದ ಅಡಿಕೆ ಬೆಳೆಯುವ ಪ್ರದೇಶ ಇದು ಎಂದು ಗುರುತಿಸಲಾಗಿದೆ.

ವಾಣಿಜ್ಯ ವ್ಯವಹಾರಗಳಿಗೆ ಅಗತ್ಯವಾದ ಭೂಮಿಯನ್ನು ಗುರುತಿಸುವಾಗ ಆಯಾ ಪ್ರದೇಶದಲ್ಲಿನ ಬಂಜರು ಭೂಮಿ ಇಲ್ಲವೇ ಕೃಷಿಗೆ ಅನುಪಯುಕ್ತವಾದ ಭೂಮಿಯನ್ನು ಗುರುತಿಸಿ ವಾಣಿಜ್ಯ ವ್ಯವಹಾರಗಳನ್ನು ವಿಸ್ತರಿಸುವ ಕೆಲಸ ಆಗಬೇಕು. ದುರ್ದೈವ ಎನ್ನುವಂತೆ ನಮ್ಮನ್ನಾಳುವವರ ವಿವೇಚನಾರಹಿತ ತೀರ್ಮಾನಗಳಿಂದ ರೈತರ ಬದುಕು ವಿನಾಶದತ್ತ ಸಾಗುತ್ತಿದೆ.

ಈ ಯೋಜನೆಯಿಂದ ಆಗುವ ದುಷ್ಪರಿಣಾಮಗಳಿಂದ ಎಚ್ಚೆತ್ತಿರುವ ರೈತ ಮುಖಂಡರುಗಳು ಲೋಕಸಭಾ ಸದಸ್ಯ ಗೋವಿಂದ ಎಂ. ಕಾರಜೋಳ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರಲ್ಲದೆ ಈ ಯೋಜನೆಯನ್ನು ಕೂಡಲೇ ಕೈಬಿಡುವಂತೆ ಒತ್ತಾಯಿಸಿದ್ದಾರೆ.

ಹಠಮಾರಿತನಕ್ಕೆ ಬಿದ್ದು ಈ ಯೋಜನೆಯನ್ನು ಮುಂದುವರೆಸಿದರೆ ಕೃಷಿಕರ ಬದುಕು ಮಾರಣ ಹೋಮ ಆಗುವುದರಿಂದ ರೈತರು ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ. ಅದಕ್ಕಾಗಿ ಈಗಾಗಲೇ ರೂಪುರೇಷೆಗಳನ್ನು ಸಿದ್ದಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಸಂಸದರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಅಡಿಕೆ ಬೆಳೆಗಾರರಾದ ಶಶಿಧರ್, ಗಂಗಾಧರಪ್ಪ, ಕಲ್ಲೇಶ್, ದಿನೇಶ್, ರಾಜು, ಸಂದೀಪ್, ಮಲ್ಲಿಕಾರ್ಜುನ್, ನಾರಪ್ಪ, ನಾಗರಾಜ್ ಮುಂತಾದವರು ಇದ್ದರು.