ಸಾರಾಂಶ
ಹರಕೆ ಹೊತ್ತು ಹುಲಿವೇಷ ಧರಿಸಿದ ಯುವಕರು । ಮುಸ್ಲಿಂ ಇಲ್ಲದಿದ್ದರೂ ಹಿಂದೂಗಳಿಂದಲೇ ಹಬ್ಬ ಆಚರಣೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲಾದ್ಯಂತ ಮೊಹರಂ ಹಬ್ಬ ಈಗಾಗಲೇ ಆರಂಭವಾಗಿದ್ದು, ಹಬ್ಬವನ್ನು ಹಿಂದೂ ಮುಸ್ಲಿಮರು ಏಕತೆಯಿಂದ, ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ.ಈಗಾಗಲೇ ಅಲಾಯಿ ದೇವರು ಸ್ಥಾಪನೆ ಆಗಿದ್ದು, ಸೋಮವಾರ ತಡರಾತ್ರಿ ಅಲಾಯಿ ದೇವರು ಸವಾರಿ ಮಾಡುತ್ತಾರೆ, ಅಂದರೆ ಗ್ರಾಮದಲ್ಲಿ ಅಲಾಯಿ ದೇವರು ಗ್ರಾಮ ಪರ್ಯಟನೆ ಮಾಡುತ್ತಾರೆ. ಭಕ್ತರ ಮನೆ ಮನೆಗೆ ತೆರಳಿ ಭಕ್ತರ ಹರಕೆ ತೀರಿಸುತ್ತಾರೆ. ಅಲ್ಲದೆ ಜಿಲ್ಲೆಯ ಕೆಲ ಭಾಗದಲ್ಲಿ ಮೊಹರಂ ಹಬ್ಬ ಅತ್ಯಂತ ವಿಶಿಷ್ಠತೆಯಿಂದ ಜರುಗುತ್ತಿದ್ದು, ಕೆಲವು ಗ್ರಾಮದಲ್ಲಿ ಮುಸ್ಲಿಂ ಇಲ್ಲದಿದ್ದರೂ ಸಹ ಹಿಂದೂಗಳೇ ಮೊಹರಂ ಹಬ್ಬ ಆಚರಿಸುತ್ತಾರೆ. ಅಲಾಯಿ ದೇವರ ಸ್ಥಾಪಿಸುತ್ತಾರೆ.
ಹುಲಿ ವೇಷಧಾರಣೆ:ಅಲಾಯಿ ಹಬ್ಬ ಬಂತೆಂದರೆ ಹುಲಿವೇಷಧಾರಿಗಳಾದ ಯುವಕರು, ಮಕ್ಕಳನ್ನು ಕಾಣಬಹುದು. ಅಲಾಯಿ ದೇವರಿಗೆ ಹರಕೆ ಹೊತ್ತುಕೊಂಡ ಜನರು ಹುಲಿವೇಷಧರಿಸಿ ತಮ್ಮ ಹರಕೆ ತೀರಿಸುತ್ತಾರೆ. ಇನ್ನೂ ಕೆಲವು ಕಡೆ ಸಂಪ್ರದಾಯದಿಂದ ಮೊಹರಂಗೆ ಹುಲಿವೇಷ ಧರಿಸಿ ಭಕ್ತಿ ಸಮರ್ಪಿಸುವ ಜನರೂ ಇದ್ದಾರೆ. ಇವರ ಮಧ್ಯೆ ಮನರಂಜನೆಗಾಗಿ ಹೊಟ್ಟೆಪಾಡಿಗಾಗಿ ಹುಲಿವೇಷ ಧರಿಸುವ ಕಲಾವಿದರೂ ಇದ್ದಾರೆ. ಹುಲಿವೇಷ ಧರಿಸಿದವರು ಬಿಸಿಲು, ಮಳೆ ಚಳಿಯಲ್ಲಿ ಬರಿಮೈಯಲ್ಲಿ ನಿಂತು ಕುಣಿದು ಕುಪ್ಪಳಿಸುತ್ತಾರೆ. ಚಿಕ್ಕ ಮಕ್ಕಳಿಗೆ ಹುಲಿವೇಷ ಧರಿಸಿದವರನ್ನು ಕಂಡರೆ ಎಲ್ಲಿಲ್ಲದ ಕುತೂಹಲ ಸಹ ಮೂಡುತ್ತದೆ.ಸಕ್ಕರೆ ನೈವೇದ್ಯ:ಇನ್ನೂ ಮಸೀದಿಯಲ್ಲಿ ಸ್ಥಾಪನೆಯಾದ ಅಲಾಯಿ ದೇವರಿಗೆ ಜನರು ಸಕ್ಕರೆ ನೈವೇದ್ಯ ಸಮರ್ಪಿಸಿ ಭಕ್ತಿ ಮೆರೆಯುತ್ತಾರೆ. ಹರಕೆ ಹೊತ್ತ ಜನರು ದೀಡ್ ನಮಸ್ಕಾರ ಹಾಕಿ ತಮ್ಮ ಹರಕೆ ತೀರಿಸುತ್ತಾರೆ. ಮೊಹರಂ ಪ್ರಯುಕ್ತ ಕೆಲವು ಕಡೆ ಅನ್ನಸಂತರ್ಪಣೆ ಹಾಗೂ ನಾನಾ ಕಾರ್ಯಕ್ರಮ ಸಹ ಜರುಗುತ್ತವೆ. ಕುಕನೂರು ತಾಲೂಕಿನ ಕುದರಿಮೋತಿಯ ಮೊಹರಂ ವಿಶಿಷ್ಠ ಆಗಿದ್ದು, ರಾಷ್ಟ್ರಾದ್ಯಂತ ತೆರಳಿರುವ ವೇಷಧಾರಿಗಳು ಮೊಹರಂಗೆ ಬರುವುದು ವಿಶೇಷ. ರಾತ್ರಿಯೀಡಿ ಸಂಭ್ರಮ:
ಅಲಾಯಿ ದೇವರುಗಳು ತಡರಾತ್ರಿ ಮಸೀದಿಯಿಂದ ಹೊರಗಡೆ ಬಂದು ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದು, ರಾತ್ರೀ ಜನರು ದೇವರು ಹೊರಗಡೆ ಬರುವುದನ್ನು ಕಾಯುತ್ತಾ ಇರುತ್ತಾರೆ. ಕೆಲವು ಕಡೆ ಅಲಾಯಿ ದೇವರು ಹೊರಗಡೆ ಬಂದ ನಂತರ ಬೆಂಕಿಯಲ್ಲಿ ಹಾರುವುದು, ಬೆಂಕಿ ಹೊತ್ತಿಸುವುದು ಹೀಗೆ ನಾನಾ ಪವಾಡಗಳು ಜರುಗುತ್ತವೆ. ಇನ್ನೂ ಕೆಲವು ಕಡೆ ಜನರು ಅಲಾಯಿ ದೇವರನ್ನು ತಮ್ಮ ಕಷ್ಟ, ನಷ್ಟಗಳಿಗೆ ಪರಿಹಾರ ಕೋರಿ ಹರಕೆ ಸಹ ಹೊರುತ್ತಾರೆ.