ಶಿರಾ ನಗರಸಭಾ ವ್ಯಾಪ್ತಿಯ ಬೇಗಂ ಮೊಹಲ್ಲಾದಲ್ಲಿ ಸುಮಾರು ೫೦ ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳಿಗೆ ಶೀಘ್ರದಲ್ಲಿಯೇ ಹಕ್ಕುಪತ್ರಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ಶಿರಾ ನಗರಸಭಾ ವ್ಯಾಪ್ತಿಯ ಬೇಗಂ ಮೊಹಲ್ಲಾದಲ್ಲಿ ಸುಮಾರು ೫೦ ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳಿಗೆ ಶೀಘ್ರದಲ್ಲಿಯೇ ಹಕ್ಕುಪತ್ರಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ನಗರಸಭಾ ಸಭಾಂಗಣದಲ್ಲಿ ಬುಧವಾರ ನಡೆದ ತುರ್ತು ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಮೀನಿನ ಮಾರುಕಟ್ಟೆ ಮೌಲ್ಯವಾದ ೧.೪೯ ಕೋಟಿ ರು. ಹಣವನ್ನು ಸರಕಾರಕ್ಕೆ ನಗರಸಭೆಯಿಂದ ಪಾವತಿಸಲಾಗುವುದು. ನಂತರ ಅಲ್ಲಿ ವಾಸಿಸುವ ಪ್ರತಿ ನಿವಾಸಿಗಳು ೧೦೦೦೦ ರು. ನಗರಸಭೆಗೆ ಪಾವತಿಸಿ, ಆ ನಂತರ ಒಂದು ವರ್ಷದ ಕಂದಾಯ ಹಾಗೂ ಹಕ್ಕು ಪತ್ರದ ಶುಲ್ಕ ೨೦೦೦ ಪಾವತಿಸಿದ ನಂತರ ನಗರಸಭೆಯಿಂದ ಇ-ಖಾತೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಶಿರಾ ನಗರದ ನಾರಾಯಣ ಸ್ವಾಮಿ ಕಲ್ಯಾಣ ಮಂಟಪದ ಆವರಣದಲ್ಲಿ ನಗರಸಭೆಯಿಂದ ಗ್ಲಾಸ್ ಹೌಸ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದ್ದು, ಈ ಜಾಗ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದ್ದು, ಈ ಬಗ್ಗೆ ಇಲಾಖೆಯಿಂದ ಅನುಮತಿ ಪಡೆದು ನಂತರ ಕಾಮಗಾರಿ ಪ್ರಾರಂಭಿಸಲಾಗುವುದು. ಹಳೆಯ ಪುರಸಭಾ ಕಚೇರಿಗೆ ೧೦೦ ವರ್ಷ ತುಂಬಿದ್ದು, ಶಿಥಿಲಗೊಂಡಿದೆ. ಈ ಕಟ್ಟಡ ಮತ್ತು ಪಕ್ಕದಲ್ಲಿರುವ ವಾಣಿಜ್ಯ ಮಳಿಗೆಗಳನ್ನು ನೆಲಸಮಗೊಳಿಸಿ ಹೊಸ ಅತ್ಯಾಧುನಿಕ ವಾಣಿಜ್ಯ ಮಳಿಗೆ ಕಟ್ಟಡ ಕಟ್ಟುವ ಬಗ್ಗೆ ಚರ್ಚೆ ನಡೆಯಿತು. ಬಾಡಿಗೆ ಪಡೆದವರು ಬಾಡಿಗೆ ಹಣವನ್ನು ಸಂಪೂರ್ಣವಾಗಿ ಪಾವತಿಸಿಲ್ಲ. ಬಾಡಿಗೆ ಹಣವನ್ನು ಪಾವತಿಸಿದ ನಂತರ ಕಟ್ಟಡವನ್ನು ನೆಲಸಮಗೊಳಿಸಿ ಎಂದರು.ಶಿರಾ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದರ್ಗಾ ಸರ್ಕಲ್‌ನಲ್ಲಿರುವ ಕಾರಂಜಿಗಳನ್ನು ಟ್ರಾಫಿಕ್ ಸಿಗ್ನಲ್ ಅಳವಡಿಸುವ ಸಂಬಂಧ ತೆರವುಗೊಳಿಸಬೇಕೆಂದು ಪೊಲೀಸ್ ಇಲಾಖೆಯಿಂದ ಪತ್ರ ಬರೆದಿದ್ದು, ಈ ಕಾರಂಜಿಗಳನ್ನು ತೆರವುಗೊಳಿಸಬೇಕೆಂದು ನಗರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರೇಣುಕಾ ಯಾದವ್ ಸಭೆಯಲ್ಲಿ ತಿಳಿಸಿದರು. ಹಾಗೂ ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಅವರು ಕಾರಂಜಿಗಳು ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಇರುವುದರಿಂದ ಇಲ್ಲಿ ಪ್ರತಿ ನಿತ್ಯ ಹಲವು ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಕಾರಂಜಿಗಳನ್ನು ತೆರವುಗೊಳಿಸಬೇಕು ಎಂದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ನಗರಸಭೆ ಸದಸ್ಯರಾದ ಬಿ.ಅಂಜಿನಪ್ಪ ಅವರು ಕಾರಂಜಿಗಳು ನಗರದ ಸೌಂದರ್ಯದ ಕೇಂದ್ರ ಬಿಂದುಗಳಾಗಿವೆ. ಅವುಗಳನ್ನು ತೆರವುಗೊಳಿಸುವುದು ಬೇಡ. ಅವುಗಳನ್ನು ಉಳಿಸಿಕೊಂಡೇ ಟ್ರಾಫಿಕ್ ಸಿಗ್ನಲ್ ಅಳವಡಿಸಿ ಎಂದು ಒತ್ತಾಯಿಸಿದರು. ಇದಕ್ಕೆ ನಗರಸಭೆ ಸದಸ್ಯರಾದ ಉಮಾ ವಿಜಯರಾಜ್, ಸ್ವಾತಿ ಮಂಜೇಶ್ ಧ್ವನಿಗೂಡಿಸಿದರು.
ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮೂದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್‌ಕುಮಾರ್, ತಹಶೀಲ್ದಾರ್ ಆನಂದ ಕುಮಾರ್, ಪೌರಾಯುಕ್ತ ರುದ್ರೇಶ್, ನಗರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರೇಣುಕಾ ಯಾದವ್ ಸೇರಿದಂತೆ ನಗರಸಭೆ ಸದಸ್ಯರು ಹಾಜರಿದ್ದರು.