ದೊಡ್ಡಸ್ತಿಕೆ ಎನ್ನುವುದು ಹಣ, ಆಸ್ತಿ ಸಂಪಾದಿಸುವುದಲ್ಲ: ಎಸಿ ಶ್ರೀನಿವಾಸ್

| Published : Nov 03 2025, 01:30 AM IST

ದೊಡ್ಡಸ್ತಿಕೆ ಎನ್ನುವುದು ಹಣ, ಆಸ್ತಿ ಸಂಪಾದಿಸುವುದಲ್ಲ: ಎಸಿ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡನಾಡು ವಿಜಯನಗರ ಅರಸರ ಕಾಲದಿಂದಲೂ ಒಳ್ಳೆತನವನ್ನು ಮೈಗೂಡಿಸಿಕೊಂಡು ಬಂದಿರುವುದು ನಮ್ಮ ಪರಂಪರೆಯಲ್ಲಿದೆ. ನಮ್ಮ ಮಕ್ಕಳಿಗೆ ಆಸ್ತಿ ಸಂಪಾದನೆ ಮಾಡುವುದಕ್ಕಿಂತ ಒಳ್ಳೆಯ ಗುಣಗಳನ್ನು ಮೈಗೂಡಿಸಿ ಅವರನ್ನೇ ಆಸ್ತಿಯಾಗಿ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ದೊಡ್ಡಸ್ತಿಕೆ ಎನ್ನುವುದು ಹಣ, ಆಸ್ತಿ ಸಂಪಾದಿಸುವುದಲ್ಲ. ಒಳ್ಳೆಯ ಗುಣ, ನಡವಳಿಕೆ ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದಾಗಿದೆ ಎಂದು ಉಪವಿಭಾಗಾಧಿಕಾರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ತಾಲೂಕ ಕಸಾಪದಿಂದ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕನ್ನಡನಾಡು ವಿಜಯನಗರ ಅರಸರ ಕಾಲದಿಂದಲೂ ಒಳ್ಳೆತನವನ್ನು ಮೈಗೂಡಿಸಿಕೊಂಡು ಬಂದಿರುವುದು ನಮ್ಮ ಪರಂಪರೆಯಲ್ಲಿದೆ. ನಮ್ಮ ಮಕ್ಕಳಿಗೆ ಆಸ್ತಿ ಸಂಪಾದನೆ ಮಾಡುವುದಕ್ಕಿಂತ ಒಳ್ಳೆಯ ಗುಣಗಳನ್ನು ಮೈಗೂಡಿಸಿ ಅವರನ್ನೇ ಆಸ್ತಿಯಾಗಿ ಮಾಡಬೇಕು ಎಂದರು.

ರಾಜಧಾನಿ ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ಕನ್ನಡಿಗರೆ ಅಲ್ಪಸಂಖ್ಯಾತರ ರೀತಿ ಬದುಕು ನಡೆಸುತ್ತಿದ್ದಾರೆ. ಭಾಷೆಯನ್ನು ಕಡೆಗಣಿಲಾಗುತ್ತಿದೆ. ನಾಡು-ನುಡಿ ಭಾಷೆ ವಿಚಾರದಲ್ಲಿ ನಾವೆಲ್ಲರೂ ಒಗ್ಗೂಡಬೇಕು, ಕನ್ನಡ ಸಾಹಿತ್ಯ ನಮ್ಮಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸುತ್ತದೆ ಎಂದರು.

ಮಕ್ಕಳಿಗೆ ಪುಸ್ತಕ ಓದು ಹವ್ಯಾಸ ಬೆಳೆಸಬೇಕು. ನಾವು ಮೊಬೈಲ್, ಟಿವಿ ನೋಡುವುದನ್ನು ನಿಲ್ಲಿಸಿ ಪುಸ್ತಕ ಓದಲು ಮುಂದಾದರೆ ಮಕ್ಕಳು ಸಹ ಪಾಲಿಸುತ್ತಾರೆ ಎಂದು ಸಲಹೆ ನೀಡಿದರು.

ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ಮಾತನಾಡಿ, ಸಮಾಜದಲ್ಲಿ ಹಲವು ಕುಲಕಸುಬುಗಳು ಕಣ್ಮರೆಯಾಗುತ್ತಿವೆ. ಆ ಕುಲ ಕಸುಬುಗಳನ್ನು ಇಂದಿನ ಯುವ ಪೀಳಿಗೆಗೆ ಕಲಿಸುವ ಕೆಲಸ ಮಾಡಬೇಕು, ರಾಜ್ಯದ ಗಡಿಭಾಗಗಳಲ್ಲಿ ಕನ್ನಡ ಭಾಷೆ ರಕ್ಷಣೆ ಮಾಡಬೇಕಾಗಿದೆ ಎಂದರು.

ಬೇಬಿ ಬೆಟ್ಟದ ಶ್ರೀಶಿವಬಸವ ಸ್ವಾಮೀಜಿ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ನಿಜಕ್ಕೂ ವಿಷಾಧನೀಯ. ಶಾಸಕರು, ಮಂತ್ರಿಗಳು ಶಾಲೆ ತೆರೆದು ಇಂಗ್ಲಿಷ್ ಮಾಧ್ಯಮಗಳಲ್ಲಿ ನಡೆಸುವ ಮೂಲಕ ಕನ್ನಡ ಶಾಲೆಗಳ ಅಳಿಯಲು ಕಾರಣರಾಗಿದ್ದಾರೆ. ಇದಕ್ಕೆ ರಾಜಕಾರಣಿಗಳೇ ಪ್ರಮುಖ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತರಾದ ಪತ್ರಕರ್ತ ಚನ್ನಮಾದೇಗೌಡ ಚಿಕ್ಕಮರಳಿ, ಪರಿಸರ ಪ್ರೇಮಿ ಲವಕುಮಾರ್ ಅವರನ್ನು ಅಭಿನಂದಿಸಲಾಯಿತು.

ತಾಲೂಕು ಕಸಾಪದಿಂದ ಸಮಾಜ ಸೇವಕ ಹೆಗ್ಗಡಹಳ್ಳಿ ರಾಮಕೃಷ್ಣ, ಉದ್ಯಮಿ ಸುಂಕಾತೊಣ್ಣೂರು ಶಿವಕುಮಾರ್, ರೆವಿನ್ಯೂ ಇನ್ಸ್ ಪೆಕ್ಟರ್ ಟಿ.ಪಿ.ರೇವಣ್ಣ, ಕ್ರೀಡಾಪಟು ಧುಧುವನ್ ಗೌಡ, ಕೆಂಪ ಸೇರಿದಂತೆ ಅನೇಕ ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಗಾಯಕ ನಾಗಲಿಂಗೇಗೌಡ, ಸಾಹಿತಿ ಸಿದ್ದಲಿಂಗಯ್ಯ, ಅ.ಸಿ.ಸಿದ್ದೇಗೌಡ, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ, ಶಿಕ್ಷಕ ಜಯರಾಮ್, ಚಿಕ್ಕಾಡೆ ಶ್ರೀನಿವಾಸ್, ಚಂದ್ರಶೇಖರ್ ದೇವೇಗೌಡನಕೊಪ್ಪಲು, ಸೇರಿದಂತೆ ಹಲವರು ಇದ್ದರು.