ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿ

| Published : Nov 03 2025, 01:30 AM IST

ಸಾರಾಂಶ

ಕನ್ನಡ ಭಾಷೆಯಷ್ಟು ಶ್ರೀಮಂತ ಭಾಷೆ ಇಡೀ ವಿಶ್ವದಲ್ಲಿಯೇ ಇಲ್ಲ. ಕನ್ನಡವನ್ನು ಮತ್ತಷ್ಟು ಶ್ರೀಮಂತಗೊಳಿಸಲು ಯುವಜನತೆ ಮುಂದಾಗಬೇಕು ಎಂದು ಶಾಸಕ ಸಿಮೆಂಟ್ ಮಂಜುನಾಥ್ ತಿಳಿಸಿದರು. ಕನ್ನಡವನ್ನು ಬಳಸುವ ಮೂಲಕ ಕನ್ನಡವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ, ಸರ್ಕಾರ ಕನ್ನಡ ಶಾಲೆಗಳನ್ನು ಉಳಿಸಲು ಹೆಚ್ಚು ಅನುದಾನಗಳನ್ನು ನೀಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ಪ್ರತಿಯೊಬ್ಬರು ಹೆಜ್ಜೆ ಇಡುವ ಮೂಲಕ ಕನ್ನಡಕ್ಕೆ ಗೌರವವನ್ನು ನೀಡುವಂತೆ ತಿಳಿಸಿದರು. ತಹಸೀಲ್ದಾರ್‌ ಮಲ್ಲಿಕಾರ್ಜುನ್ ಧ್ವಜ ಸಂದೇಶ ನೀಡಿದರು.

ಕನ್ನಡಪ್ರಭ ವಾರ್ತೆ ಆಲೂರು

ಕನ್ನಡ ಭಾಷೆಯಷ್ಟು ಶ್ರೀಮಂತ ಭಾಷೆ ಇಡೀ ವಿಶ್ವದಲ್ಲಿಯೇ ಇಲ್ಲ. ಕನ್ನಡವನ್ನು ಮತ್ತಷ್ಟು ಶ್ರೀಮಂತಗೊಳಿಸಲು ಯುವಜನತೆ ಮುಂದಾಗಬೇಕು ಎಂದು ಶಾಸಕ ಸಿಮೆಂಟ್ ಮಂಜುನಾಥ್ ತಿಳಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕ ರಾಜ್ಯ ದೇಶದ ಸಂಪತ್ಭರಿತ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಸೌಂದರ್ಯ, ಸಂಸ್ಕೃತಿ, ಇತಿಹಾಸ, ಶಿಲ್ಪಕಲೆ ಸೇರಿದಂತೆ ಅನೇಕ ರಾಜರು, ಕವಿಗಳು, ಸಾಹಿತಿಗಳು, ಲೇಖಕರನ್ನು ಕೊಡುಗೆಯಾಗಿ ನೀಡಿದ ರಾಜ್ಯವಾಗಿದೆ. ಕನ್ನಡ ನಾಡನ್ನು ಕಟ್ಟಲು ಅನೇಕ ಮಹನೀಯರ ತ್ಯಾಗ, ಬಲಿದಾನ ಕಾರಣವಾಗಿದೆ. ಪ್ರಸ್ತುತ ಯುವ ಜನತೆ ಆಂಗ್ಲಭಾಷೆಯ ವ್ಯಾಮೋಹದಿಂದಾಗಿ ಕನ್ನಡ ಭಾಷೆಯನ್ನು ಮಾತನಾಡಲು ಹಿಂಜರಿಯುತ್ತಿದ್ದಾರೆ. ಕನ್ನಡವನ್ನು ಬಳಸುವ ಮೂಲಕ ಕನ್ನಡವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ, ಸರ್ಕಾರ ಕನ್ನಡ ಶಾಲೆಗಳನ್ನು ಉಳಿಸಲು ಹೆಚ್ಚು ಅನುದಾನಗಳನ್ನು ನೀಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ಪ್ರತಿಯೊಬ್ಬರು ಹೆಜ್ಜೆ ಇಡುವ ಮೂಲಕ ಕನ್ನಡಕ್ಕೆ ಗೌರವವನ್ನು ನೀಡುವಂತೆ ತಿಳಿಸಿದರು. ತಹಸೀಲ್ದಾರ್‌ ಮಲ್ಲಿಕಾರ್ಜುನ್ ಧ್ವಜ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲೂಕಿನ ಗಣ್ಯರಾದ ಪತ್ರಿಕಾ ಕ್ಷೇತ್ರದಿಂದ - ಆದಿಲ್, ಸಮಾಜ ಸೇವೆ - ಅಬ್ದುಲ್ ಖುದ್ದೂಸ್, ಕಲಾ ಕ್ಷೇತ್ರ - ಯೋಗೇಶ್ ಕಲ್ಲಹಳ್ಳಿ, ಸಾಹಿತ್ಯ ಕ್ಷೇತ್ರ - ಶಿಕ್ಷಕಿ, ಸಾಹಿತಿ ಪೂರ್ಣಿಮಾ, ಸಾರ್ವಜನಿಕ ಕ್ಷೇತ್ರ - ಶಿಕ್ಷಕ ಬೂಪಾಲಯ್ಯ, ಕನ್ನಡ ನಾಡು ನುಡಿ ಸೇವೆ ಮಗ್ಗೆ ಹೋಬಳಿ ಕರವೇ ಅಧ್ಯಕ್ಷ ರಮೇಶ್ ಸೇರಿದಂತೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜುನಾಥ್, ಪಟ್ಟಣ ಪಂಚಾಯತಿ ತಾಹೇರಾ ಬೇಗಂ, ಸದಸ್ಯರಾದ ಹರೀಶ್, ಸಂತೋಷ್ , ಧರ್ಮ, ಸಂದೇಶ್, ಗ್ರಾಪಂ ಸದಸ್ಯ ಮೋಹನ್, ತಹಸೀಲ್ದಾರ್ ಮಲ್ಲಿಕಾರ್ಜುನ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಸುಬ್ರಮಣ್ಯ ಶರ್ಮ, ಪಪಂ ಮುಖ್ಯಾಧಿಕಾರಿ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಕೃಷ್ಣ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ ಎಂ ವರದರಾಜು, ಕರವೇ ತಾಲೂಕು ಅಧ್ಯಕ್ಷ ನಟರಾಜ್, ಡಾ ಜಯರಾಜ್, ಮುಖ್ಯ ಭಾಷಣಕಾರ ಕಾಮತಿ ಶಾಲೆ ಶಿಕ್ಷಕ ಮೋಹನ್ ಕುಮಾರ್ ಸೇರಿದಂತೆ ಎಲ್ಲಾ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.