ಸಾರಾಂಶ
ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಬಳಿಕ ಇದೀಗ ಬೆಳಗಾವಿಗೂ ಪ್ಯಾಲೆಸ್ತೀನ್ ಧ್ವಜ ವಿವಾದ ಕಾಲಿಟ್ಟಿದೆ
ಬೆಳಗಾವಿ : ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಬಳಿಕ ಇದೀಗ ಬೆಳಗಾವಿಗೂ ಪ್ಯಾಲೆಸ್ತೀನ್ ಧ್ವಜ ವಿವಾದ ಕಾಲಿಟ್ಟಿದೆ. ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಬೆಳಗಾವಿಯ ದರ್ಬಾರ್ ಗಲ್ಲಿಯಲ್ಲಿ ಕಿಡಿಗೇಡಿಗಳು ಹಾಕಿದ್ದ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಶಾಮಿಯಾನವನ್ನು ಮಾರ್ಕೆಟ್ ಠಾಣೆ ಪೊಲೀಸರು ಶನಿವಾರ ತೆರವುಗೊಳಿಸಿದ್ದಾರೆ.
ಗಣೇಶೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಯ ಮುಸ್ಲಿಂ ಮುಖಂಡರು, ಧರ್ಮಗುರುಗಳು ಸಭೆ ನಡೆಸಿ ಈದ್ ಮಿಲಾದ್ ಮೆರವಣಿಗೆಯನ್ನು ಸೆ.22ಕ್ಕೆ ಮುಂದೂಡಿದ್ದರು. ಅದರಂತೆ ಭಾನುವಾರ ನಡೆಯಬೇಕಿರುವ ಈದ್ ಮಿಲಾದ್ ಮೆರವಣಿಗೆ ಸಾಗುವ ದರ್ಬಾರ್ ಗಲ್ಲಿಯ 200 ಮೀಟರ್ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಹೋಲುವ ಶಾಮಿಯಾನ ನಿರ್ಮಿಸಲಾಗಿತ್ತು. ರಾತ್ರೋರಾತ್ರಿ ಕಿಡಿಗೇಡಿಗಳು ಈ ವಿವಾದಾತ್ಮಕ ಶಾಮಿಯಾನ ನಿರ್ಮಿಸಿದ್ದರು. ಇದು ಆಕ್ಷೇಪಕ್ಕೆ ಕಾರಣವಾಗುತ್ತಿದ್ದಂತೆ ಪೊಲೀಸರು ಪ್ಯಾಲೆಸ್ತೀನ್ ಧ್ವಜ ಹೋಲುವ ಶಾಮಿಯಾನ ತೆರವುಗೊಳಿಸಿದರು.
ವೀರಭದ್ರ ನಗರದಲ್ಲೂ ಇದೇ ರೀತಿಯ ಶಾಮಿಯಾನ ಹಾಕಲಾಗಿದ್ದು, ಅದನ್ನೂ ಪೊಲೀಸರು ತೆರವುಗೊಳಿಸಿದ್ದಾರೆ. ಈ ಶಾಮಿಯಾನ ನಿರ್ಮಿಸಿದವರ ಬಗ್ಗೆ ಮಾರ್ಕೆಟ್ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.