ಕನ್ನಡಪ್ರಭ ವಾರ್ತೆ ಬೆಳಗಾವಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕುಂದಾನಗರಿ ಬೆಳಗಾವಿಯ ಸೌಂದರ್ಯಕ್ಕೆ ಹದಗೆಟ್ಟ ರಸ್ತೆಗಳು ಕಪ್ಪುಚುಕ್ಕೆಯಂತಾಗಿವೆ. ನಗರಕ್ಕೆ ಆಗಮಿಸುವ ಪ್ರಯಾಣಿಕರನ್ನು ದೊಡ್ಡ ದೊಡ್ಡ ರಸ್ತೆಯ ಗುಂಡಿಗಳು ಸ್ವಾಗತಿಸಿದರೇ, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ನಗರ ಪ್ರವೇಶಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟಿರುವ ನಗರದ ರಸ್ತೆಗಳ ದುರಸ್ತಿಗೆ ಪಾಲಿಕೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಗುಂಡಿಗಳು, ಹದಗೆಟ್ಟ ರಸ್ತೆ ಸಮಸ್ಯೆಯು ನಗರದ ಜನರನ್ನು ಹೈರಾಣು ಮಾಡುತ್ತಿದ್ದು, ಜನಪ್ರತಿನಿಧಿಗಳಿಗೆ ನಿತ್ಯ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

ಪ್ರಮೋದ ಗಡಕರಕನ್ನಡಪ್ರಭ ವಾರ್ತೆ ಬೆಳಗಾವಿ

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕುಂದಾನಗರಿ ಬೆಳಗಾವಿಯ ಸೌಂದರ್ಯಕ್ಕೆ ಹದಗೆಟ್ಟ ರಸ್ತೆಗಳು ಕಪ್ಪುಚುಕ್ಕೆಯಂತಾಗಿವೆ. ನಗರಕ್ಕೆ ಆಗಮಿಸುವ ಪ್ರಯಾಣಿಕರನ್ನು ದೊಡ್ಡ ದೊಡ್ಡ ರಸ್ತೆಯ ಗುಂಡಿಗಳು ಸ್ವಾಗತಿಸಿದರೇ, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ನಗರ ಪ್ರವೇಶಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟಿರುವ ನಗರದ ರಸ್ತೆಗಳ ದುರಸ್ತಿಗೆ ಪಾಲಿಕೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಗುಂಡಿಗಳು, ಹದಗೆಟ್ಟ ರಸ್ತೆ ಸಮಸ್ಯೆಯು ನಗರದ ಜನರನ್ನು ಹೈರಾಣು ಮಾಡುತ್ತಿದ್ದು, ಜನಪ್ರತಿನಿಧಿಗಳಿಗೆ ನಿತ್ಯ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

ನಗರದ ಒಳ ರಸ್ತೆಗಳು ತೀವ್ರ ಹದಗೆಟ್ಟಿದ್ದು, ರಸ್ತೆಯಲ್ಲಿನ ಗುಂಡಿಗಳು ವಾಹನ ಸವಾರರನ್ನು ಹೈರಾಣಾಗಿಸುತ್ತಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ. ನಗರದ ಕೈಗಾರಿಕಾ ಪ್ರದೇಶವಾದ ಉದ್ಯಮಭಾಗ, ಆಟೋನಗರ, ಪೌಡರಿ ಕ್ಲಸ್ಟರ್‌ಗಳ ಒಳ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಸವಾರರ ಗೋಳು ಹೇಳದಂತಾಗಿದೆ.

ಬಹುತೇಕ ರಸ್ತೆಗಳು ಹಾಳು: ಬೆಳಗಾವಿ ಉತ್ತರ, ದಕ್ಷಿಣ ಹಾಗೂ ಗ್ರಾಮೀಣ ಕ್ಷೇತ್ರದ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವು ಎದ್ದು ಕಾಣುತ್ತಿದೆ. ನಗರದ ಖಾಸಭಾಗ, ಶಹಾಪುರ, ನೆಹರು ನಗರ, ಮಹಾಂತೇಶ ನಗರ, ಕಣಬರಗಿ, ಗಾಂಧಿ ನಗರ, ನ್ಯೂ ಗಾಂಧಿ ನಗರ, ಗಣೇಶಪುರ ರಸ್ತೆ, ಕಂಗ್ರಾಳಿ ಗಲ್ಲಿ, ಸಹ್ಯಾದ್ರಿ ನಗರ, ಹಿಂಡಲಗಾ ರಸ್ತೆ ಸೇರಿದಂತೆ ಪ್ರತಿ ನಗರಕ್ಕೆ ತೆರಳುವ ರಸ್ತೆಗಳಂತೂ ವಾಹನಗಳು ಸಂಚರಿಸದಂತಹ ಸ್ಥಿತಿಗೆ ತಲುಪಿವೆ. ಇನ್ನು, ಒಳ ರಸ್ತೆಗಳು ಬಹುತೇಕ ಹಾಳಾಗಿವೆ. ಈ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಿದೆ. ಹೆಜ್ಜೆಗೊಂದು ಗುಂಡಿಗಳು ಬಿದ್ದರಿಂದ ವಾಹನ ಎತ್ತ ಸಾಗಬೇಕು ಎಂಬುದೇ ತಿಳಿಯದಂತಾಗಿದೆ. ಈ ರಸ್ತೆಗಳಲ್ಲಿ ಉದ್ಯೋಗಿಗಳು, ಶಾಲಾ ವಾಹನಗಳು ಸೇರಿದಂತೆ ಬೆಳಗಾವಿಯ ವಿವಿಧ ನಗರಗಳಿಗೆ ತೆರಳುವ ಸಾಕಷ್ಟು ಸಾರಿಗೆ ಬಸ್‌ಗಳು ಓಡಾಡುತ್ತವೆ. ಬಸ್‌ಗಳಂತೂ ಜನರನ್ನು ಹೊತ್ತು ಓಲಾಡುತ್ತ ತೇಲಾಡುತ್ತ ಸಂಚರಿಸಬೇಕು. ಜನರಂತೂ ಆತಂಕದಲ್ಲೇ ಓಡಾಡಬೇಕಿದ್ದು, ನಿತ್ಯ ಸಾಕಷ್ಟು ಅವಘಡಗಳು ಸಾಮಾನ್ಯವಾಗಿವೆ.ಎಲ್ & ಟಿ ಕಂಪನಿ ವಿರುದ್ಧ ಶಾಸಕರ ಅಸಮಾಧಾನ: ದಿನದ 24 ಗಂಟೆ ಕುಡಿಯುವ ನೀರಿನ ಕಾಮಗಾರಿಯ ಗುತ್ತಿಗೆ ಪಡೆದ ಎಲ್ & ಟಿ ಕಂಪನಿಯು ನೀರಿನ ಪೈಪ್‌ಗಳ ಅಳವಡಿಕೆಗೆ ರಸ್ತೆಗಳನ್ನು ಅಗೆದು, ಕಾಮಗಾರಿ ಪೂರ್ಣಗೊಳಿಸಿದ ಬಳಿಕ ರಸ್ತೆಯನ್ನು ದುರಸ್ತಿ ಕಾರ್ಯ ಕೈಗೊಳ್ಳದಿರುವುದಕ್ಕೆ ಸ್ಥಳೀಯ ಶಾಸಕ ಅಭಯ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಅಭಯ ಪಾಟೀಲ ಅವರು ಇತ್ತೀಚೆಗೆ ಎಲ್ & ಟಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.ಕೋಟ್:

ಬೆಳಗಾವಿ ನಗರದ ಬಹುತೇಕ ರಸ್ತೆಗಳು ತೆಗ್ಗು ಗುಂಡಿಗಳಿಂದ ಹಾಳು ಆಗಿವೆ. ಇದರಿಂದ ರಸ್ತೆ ಅಪಘಾತಗಳಾಗಿ ಸಾಕಷ್ಟು ವಾಹನ ಸವಾರರು ದಿನನಿತ್ಯ ಗಾಯಗೊಳ್ಳುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ, ಮಹಾನಗರ ಪಾಲಿಕೆ ತುರ್ತಾಗಿ ಕ್ರಮ ವಹಿಸಿ, ರಸ್ತೆಗಳನ್ನು ಬೇಗ ಸಮರ್ಪಕವಾಗಿ ರಸ್ತೆಗಳನ್ನು ನಿರ್ಮಿಸಬೇಕು.- ವಿನಾಯಕ ಪಾಟೀಲ, ಸಾರ್ವಜನಿಕಕೋಟ್ :

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳು ಹಾಳಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಎಲ್ಲೆಲ್ಲಿ ರಸ್ತೆಗಳು ಹಾಳಾಗಿದೆ ಎಂಬುದನ್ನು ಪರಿಶೀಲನೆ ನಡೆಸಿ, ಶೀಘ್ರವೇ ರಸ್ತೆಗಳ ದುರಸ್ತಿಗೆ ಕ್ರಮ ವಹಿಸಲಾಗುವುದು.

ಕಾರ್ತಿಕ್.ಎಂ, ಮಹಾನಗರ ಪಾಲಿಕೆ ಆಯುಕ್ತ