ಕನ್ನಡಪ್ರಭ ವಾರ್ತೆ ಬೆಳಗಾವಿ ನಗರದ ಎಪಿಎಂಸಿಯಲ್ಲಿ ಮಳಿಗೆಗಳ ಹಂಚಿಕೆ ವಿಚಾರವಾಗಿ ಜೈ ಕಿಸಾನ್ ಮಾರ್ಕೆಟ್‌ ಹಾಗೂ ಎಪಿಎಂಸಿಯ ವ್ಯಾಪಾರಸ್ಥರು, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಎದುರೇ ಪರಸ್ಪರ ವಾಗ್ವಾದ ನಡೆಸಿ ಕೈ ಕೈ ಮಿಲಾಯಿಸಿದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದ ಎಪಿಎಂಸಿಯಲ್ಲಿ ಮಳಿಗೆಗಳ ಹಂಚಿಕೆ ವಿಚಾರವಾಗಿ ಜೈ ಕಿಸಾನ್ ಮಾರ್ಕೆಟ್‌ ಹಾಗೂ ಎಪಿಎಂಸಿಯ ವ್ಯಾಪಾರಸ್ಥರು, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಎದುರೇ ಪರಸ್ಪರ ವಾಗ್ವಾದ ನಡೆಸಿ ಕೈ ಕೈ ಮಿಲಾಯಿಸಿದ ಘಟನೆ ನಡೆಯಿತು.

ಬೆಳಗಾವಿಯ ಎಪಿಎಂಸಿಗೆ ಭಾನುವಾರ ಕೃಷಿ ಮಾರುಕಟ್ಟೆ ಇಲಾಖೆ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿದ್ದರು. ಈ ವೇಳೆ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯಿಂದ ಎಪಿಎಂಸಿಗೆ ಸ್ಥಳಾಂತರಗೊಂಡಿದ್ದ ವ್ಯಾಪಾರಸ್ಥರು, ಸರ್ಕಾರಿ ಎಪಿಎಂಸಿಯಲ್ಲಿ ಮಳಿಗೆಗಳನ್ನು ಹಂಚಿಕೆ ಮಾಡುತ್ತಿಲ್ಲ. ಭಾನುವಾರ ಮಾರುಕಟ್ಟೆಯಲ್ಲಿ ನಮಗೆ ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಎಪಿಎಂಸಿಯ ವ್ಯಾಪಾರಸ್ಥರು, ಅಸಮಾಧಾನ ವ್ಯಕ್ತಪಡಿಸಿ, ಜೈ ಕಿಸಾನ್ ಮಾರುಕಟ್ಟೆಯಿಂದ ಬಂದ ಎಲ್ಲ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲಾಗಿದೆ. ಮುಖ್ಯ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವಂತೆ ಸೂಚಿಸಿದರೂ ಅಲ್ಲಿಗೆ ಹೋಗುತ್ತಿಲ್ಲ. ರೈತರು ವ್ಯಾಪಾರ ನಡೆಸುವ ಭಾನುವಾರ ಮಾರುಕಟ್ಟೆಯಲ್ಲಿಯೇ ಇದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು. ಇದರಿಂದ ಕೆರಳಿದ ಜೈ ಕಿಸಾನ್ ಮಾರುಕಟ್ಟೆಯ ವ್ಯಾಪಾರಸ್ಥರು, ಎಪಿಎಂಸಿ ವ್ಯಾಪಾರಸ್ಥರೊಂದಿಗೆ ವಾಗ್ವಾದ ನಡೆಸಿದರು. ಅಲ್ಲದೇ, ಕೆಲವರು ಪರಸ್ಪರ ಕೈ ಕೈ ಮೀಲಾಯಿಸಿ ಜಟಾಪಟಿ ಮಾಡಿಕೊಂಡರು. ಬಳಿಕ ಸ್ಥಳದಲ್ಲಿದ್ದ ಪೊಲೀಸರು, ಮಧ್ಯೆ ಪ್ರವೇಶ ಮಾಡಿ ಎರಡು ಕಡೆಯ ವ್ಯಾಪಾರಸ್ಥರನ್ನು ಸಮಾಧಾನಪಡಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಅವರು, ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರ ಸಮಸ್ಯೆಗಳನ್ನು ಪರಿಶೀಲಿಸಿ, ಜಿಲ್ಲೆಯ ಸಚಿವರು ಮತ್ತು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗುವುದು. ತರಕಾರಿ ತಂದು ಮಾರುವವರು, ರೈತರು ಮತ್ತು ಪರವಾನಗಿ ಹೊಂದಿದ ವರ್ತಕರು ಯಾರೂ ಜಗಳ ಮಾಡಬಾರದು. ಉತ್ತಮ ವ್ಯಾಪಾರ- ವಹಿವಾಟು ನಡೆಯಬೇಕು. ಇಲ್ಲಿ ಇರುವವರೆಲ್ಲರೂ ರೈತರೇ. ಯಾರಿಗೂ ತೊಂದರೆ ಆಗಬಾರದು. ತರಕಾರಿ ತಂದು ವ್ಯಾಪಾರ ಮಾಡುವ ರೈತರಿಗೂ ಅನುಕೂಲ ಮಾಡಿಕೊಡಬೇಕು. ಎಪಿಎಂಸಿಯಲ್ಲಿ ಏನೇ ಕೊರತೆಗಳಿದ್ದರೂ, ಅಗತ್ಯ ಅನುದಾನ ನೀಡಿ ಸೌಲಭ್ಯ ಕಲ್ಪಿಸುತ್ತೇವೆ. ಯಾರಿಗೂ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಅವಕಾಶ ಇಲ್ಲ. ಆದರೆ, ಉಪ ಮಾರುಕಟ್ಟೆ ನಿರ್ಮಾಣಕ್ಕೆ ಅವಕಾಶ ಇದೆ. ಭಾನುವಾರದ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರೂ ರೈತರ ಮಕ್ಕಳೇ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.