ಸಾರಾಂಶ
ತಮ್ಮ ಕಾರಿಗೆ ಅಡ್ಡ ಬಂದ ಮುಂಗುಸಿಯನ್ನು ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಭಕ್ಕೆ ಕಾರು ಡಿಕ್ಕಿಯಾಗಿ ನಟ ಕಿರಣ್ ರಾಜ್ ಗಾಯಗೊಂಡ ಘಟನೆ ದೊಡ್ಡ ಆಲದ ಮರ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರು : ತಮ್ಮ ಕಾರಿಗೆ ಅಡ್ಡ ಬಂದ ಮುಂಗುಸಿಯನ್ನು ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಭಕ್ಕೆ ಕಾರು ಡಿಕ್ಕಿಯಾಗಿ ನಟ ಕಿರಣ್ ರಾಜ್ ಗಾಯಗೊಂಡ ಘಟನೆ ದೊಡ್ಡ ಆಲದ ಮರ ರಸ್ತೆಯಲ್ಲಿ ನಡೆದಿದೆ.
ತಾವರೆಕೆರೆ ಸಮೀಪದ ಸಿದ್ದೇಶ್ವರ ಆಶ್ರಮಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ ಅಲ್ಲಿಂದ ಕಾರಿನಲ್ಲಿ ಕಿರಣ್ ರಾಜ್ ಮನೆಗೆ ಮರಳುವಾಗ ಮಾರ್ಗ ಮಧ್ಯೆ ಈ ಲಘು ಅಪಘಾತವಾಗಿದೆ. ಬಳಿಕ ಕೆಂಗೇರಿ ಸಮೀಪ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕಿರಣ್ ರಾಜ್ ಮನೆಗೆ ಮರಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಿದ್ದೇಶ್ವರ ಆಶ್ರಮಕ್ಕೆ ಸಂಜೆ ಭೇಟಿ ನೀಡಿ ರಾತ್ರಿ 9.30ರಲ್ಲಿ ಮನೆಗೆ ಮರಳುತ್ತಿದ್ದೆ. ಆಗ ದೊಡ್ಡ ಆಲದ ಮರದ ರಸ್ತೆಯ ಮುದ್ದಯ್ಯನಪಾಳ್ಯ ಸಮೀಪ ಕಾರಿಗೆ ಮುಂಗುಸಿ ಅಡ್ಡ ಬಂತು. ಆಗ ಅದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಭಕ್ಕೆ ಡಿಕ್ಕಿಯಾಯಿತು. ಅದೃಷ್ಟವಶಾತ್ ಯಾವುದೇ ಗಂಭೀರ ಹಾನಿಯಾಗಲಿಲ್ಲ. ಘಟನೆಯಲ್ಲಿ ಎದೆ ಭಾಗಕ್ಕೆ ಸ್ಪಲ್ಪ ಪ್ರಮಾಣದ ಪೆಟ್ಟಾಯಿತು. ಹಾಗಾಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದೆ ಎಂದು ಕೆಂಗೇರಿ ಸಂಚಾರ ಠಾಣೆ ಪೊಲೀಸರಿಗೆ ಕಿರಣ್ ರಾಜ್ ಹೇಳಿಕೆ ನೀಡಿದ್ದಾರೆ.