ರಾಜ್ಯಪಾಲರಿಂದ ಕಡೆಗೂ ಅಂಕಿತ ಮೈಕ್ರೋಫೈನಾನ್ಸ್‌ ಸುಗ್ರೀವಾಜ್ಞೆ ಪಾಸ್‌ - ಕೆಲವು ಸಲಹೆಗಳೊಂದಿಗೆ ಗೆಹಲೋತ್‌ ಒಪ್ಪಿಗೆ

| N/A | Published : Feb 13 2025, 06:48 AM IST

Thawar Chand gehlot
ರಾಜ್ಯಪಾಲರಿಂದ ಕಡೆಗೂ ಅಂಕಿತ ಮೈಕ್ರೋಫೈನಾನ್ಸ್‌ ಸುಗ್ರೀವಾಜ್ಞೆ ಪಾಸ್‌ - ಕೆಲವು ಸಲಹೆಗಳೊಂದಿಗೆ ಗೆಹಲೋತ್‌ ಒಪ್ಪಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಕೊನೆಗೂ ಸಮ್ಮತಿ ಸೂಚಿಸಿದ್ದು, ಸಾಲ ವಸೂಲಿ ವೇಳೆ ಸಾರ್ವಜನಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಿಸಲು ಸರ್ಕಾರ ಪ್ರಯೋಗಿಸಿದ ಅಸ್ತ್ರವಾದ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.

 ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಕೊನೆಗೂ ಸಮ್ಮತಿ ಸೂಚಿಸಿದ್ದು, ಸಾಲ ವಸೂಲಿ ವೇಳೆ ಸಾರ್ವಜನಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಿಸಲು ಸರ್ಕಾರ ಪ್ರಯೋಗಿಸಿದ ಅಸ್ತ್ರವಾದ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.

ತಾವು ಕೋರಿದ ವಿವರಣೆಗಳಿಗೆ ಸರ್ಕಾರ ನೀಡಿದ ಸಮರ್ಥನೆಗಳಿಗೆ ಒಪ್ಪಿಗೆ ಸೂಚಿಸುವ ಜತೆಗೆ ಕೆಲವೊಂದು ಸಲಹೆಗಳನ್ನು ನೀಡಿ, ಈ ಬಗ್ಗೆ ಅಧಿವೇಶನದಲ್ಲಿ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆಯೂ ಈ ವೇಳೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಈ ಮೂಲಕ ಮೈಕ್ರೋ ಫೈನಾನ್ಸ್ ಕ್ಷೇತ್ರದಲ್ಲಿ ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆ ಇದ್ದು, ಮುಂಬರುವ ಅಧಿವೇಶನದಲ್ಲಿ ಚರ್ಚೆ ನಡೆದು ವಿಧೇಯಕ ಜಾರಿಯಾಗುವ ನಿರೀಕ್ಷೆ ಇದೆ.

ಸಮರ್ಥನೆ ನೀಡಿದ್ದ ಸರ್ಕಾರ:

ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಂಪನಿಗಳು ಜನಸಾಮಾನ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯ ತಡೆಗಟ್ಟಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಸಿದ್ಧಪಡಿಸಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಆದರೆ, ಈ ಸುಗ್ರೀವಾಜ್ಞೆಗೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯಪಾಲರು ಸರ್ಕಾರಕ್ಕೆ ವಾಪಸು ಕಳುಹಿಸಿದ್ದರು. ಬಳಿಕ ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಜಾರಿಗೊಳಿಸುವ ಅನಿವಾರ್ಯತೆ ಬಗ್ಗೆ ಸಮರ್ಥನೆ ನೀಡಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಇದೀಗ ರಾಜ್ಯಪಾಲರು ಆ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ.

ಮುಂದಿನ ದಿನದಲ್ಲಿ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳಿಂದ ವಿವಾದಗಳು ಸೃಷ್ಟಿಯಾದರೆ ಅವುಗಳನ್ನು ಇತ್ಯರ್ಥಪಡಿಸಲು ಸಾಲಗಾರ ಮತ್ತು ಲೇವಾದೇವಿದಾರನ ನಡುವೆ ಮಧ್ಯಸ್ಥಗಾರನಾಗಿ ಕಾರ್ಯ ನಿರ್ವಹಿಸಲು ಸರ್ಕಾರವು ಒಂಬುಡ್ಸ್‌ಮನ್‌ ನೇಮಕ ಮಾಡಬಹುದು. ನೋಂದಣಿಯಾಗದ ಮೈಕ್ರೋ ಫೈ‌ನಾನ್ಸ್ ಸಂಸ್ಥೆಗಳು ಅಕ್ರಮ ಹಣ ವರ್ಗಾವಣೆ ಮಾಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಉತ್ತಮ ಹೆಜ್ಜೆಯಾಗಿದೆ. ಸುಗ್ರೀವಾಜ್ಞೆಯು ಉತ್ತಮ ಉದ್ದೇಶಗಳನ್ನು ಹೊಂದಿದ್ದರೂ ಅದು ಉಂಟು ಮಾಡುವ ಕಾನೂನು ಮತ್ತು ಸಾಮಾಜಿಕ ಪರಿಣಾಮವನ್ನು ಉಭಯ ಸದನದಲ್ಲಿ ವಿವರವಾಗಿ ಚರ್ಚಿಸಬೇಕಾಗಿದೆ, ಸುಗ್ರೀವಾಜ್ಞೆ ಜಾರಿಗೊಳಿಸುವ ವೇಳೆ ಈ ಸಲಹೆ ಪಾಲಿಸಬೇಕು ಎಂದು ಎಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ.

ಕಾನೂನು ಹೋರಾಟಕ್ಕೆ ಕಾರಣ:

ಮೂಲಭೂತ ಹಕ್ಕುಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಆರ್‌ಬಿಐ ಅಡಿ ನೋಂದಣಿಯಾದ ಎಲ್ಲಾ ಸಹಕಾರಿ ಬ್ಯಾಂಕ್‌ಗಳು, ಹಣಕಾಸು ಕಂಪನಿಗಳು, ವಸತಿ ಹಣಕಾಸು ನಿಗಮದಿಂದ ನಿಯಂತ್ರಿಸಲ್ಪಡುವ ಸಣ್ಣ ಹಣಕಾಸು ಬ್ಯಾಂಕ್‌ಗಳು, ಸ್ಥಳೀಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಇದರ ವ್ಯಾಪ್ತಿಗೆ ತರಬಾರದು. ಸುಗ್ರೀವಾಜ್ಞೆಯು ಕಾನೂನು ರೀತಿ ನೋಂದಣಿಯಾಗಿರುವ ಸಂಸ್ಥೆಗಳಿಗೆ ತೊಂದರೆ ಮಾಡಬಾರದು. ಪ್ರಾಮಾಣಿಕವಾಗಿ ಸಾಲ‌ ಕೊಟ್ಟವರಿಗೆ ಬಡ್ಡಿ ಸಹಿತ ಸಾಲ ವಸೂಲಿ ಮಾಡುವ ಪ್ರಕ್ರಿಯೆ ಬಗ್ಗೆ ಮುಂಜಾಗ್ರತೆ ವಹಿಸಬೇಕಾಗಿದೆ. ಇಲ್ಲದಿದ್ದರೆ ಬಾಕಿ ಸಾಲದ ಮೊತ್ತವನ್ನು ಮರುಪಡೆಯಲೂ ತೊಂದರೆಯಾಗಬಹುದು. ಅಲ್ಲದೆ, ಇದು ಕಾನೂನು ಹೋರಾಟಕ್ಕೆ ಕಾರಣವಾಗಬಹುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.

ಸುಗ್ರೀವಾಜ್ಞೆಯಲ್ಲಿ ಏನಿದೆ?:

ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ನೋಂದಣಿ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಪಡೆಯದೆ ಯಾವುದೇ ಸಾಲವನ್ನು ಮಂಜೂರು ಮಾಡುವಂತಿಲ್ಲ ಮತ್ತು ಯಾವುದೇ ಸಾಲವನ್ನು ವಸೂಲು ಮಾಡುವಂತೆಯೂ ಇಲ್ಲ. ಸಾಲ ನೀಡುವ ಸಂಸ್ಥೆಗಳು ನಿಯಮಬಾಹಿರವಾಗಿ ನಡೆದುಕೊಂಡರೆ ಅಂತಹ ಸಂಸ್ಥೆಗಳನ್ನು ರದ್ದುಗೊಳಿಸಬಹುದು. ಆದರೆ, ಅವುಗಳ ಅಹವಾಲುಗಳನ್ನು ಆಲಿಸಲು ಅವಕಾಶ ನೀಡಬೇಕು.

ಸಂಸ್ಥೆಗಳ ಅಹವಾಲು ಆಲಿಸದೆ ನೋಂದಣಿ ರದ್ದು ಮಾಡುವಂತಿಲ್ಲ. ಸಾಲ ನೀಡುವ ಸಂಸ್ಥೆಗಳು ಅಥವಾ ಲೇವಾದೇವಿದಾರರು ಭದ್ರತೆಯನ್ನು ಕೋರುವಂತಿಲ್ಲ. ಸಾಲ ನೀಡುವ ವೇಳೆ ವಿಧಿಸುವ ಬಡ್ಡಿ ದರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸಾಲಗಾರರೊಂದಿಗಿನ ಎಲ್ಲಾ ಪತ್ರ ವ್ಯವಹಾರಗಳು ಕನ್ನಡದಲ್ಲಿರಬೇಕು. ಷರತ್ತುಗಳು ಅರ್ಥಪೂರ್ಣವಾಗಿದ್ದು, ಸಾಲಗಾರನು ಸೂಕ್ತ ನಿರ್ಧಾರ ಕೈಗೊಳ್ಳುವ ರೀತಿಯಲ್ಲಿರಬೇಕು. ಸ್ಥಳೀಯ ಪ್ರದೇಶದಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿರಬೇಕು ಎಂದು ಉದ್ದೇಶಿತ ಕಾಯ್ದೆಯಲ್ಲಿ ಹೇಳಲಾಗಿದೆ.

ರಾಜ್ಯಪಾಲರ ಸಲಹೆಗಳು

- ಆರ್‌ಬಿಐ ಅಡಿ ನೋಂದಣಿಯಾದ ಹಣಕಾಸು ಕಂಪನಿಗಳನ್ನು ಸುಗ್ರೀವಾಜ್ಞೆ ವ್ಯಾಪ್ತಿಗೆ ತರಬಾರದು

- ಕಾನೂನು ರೀತಿ ನೋಂದಣಿಯಾಗಿರುವ ಸಂಸ್ಥೆಗಳಿಗೆ ಈ ಸುಗ್ರೀವಾಜ್ಞೆ ತೊಂದರೆ ಮಾಡಬಾರದು

- ಪ್ರಾಮಾಣಿಕವಾಗಿ ಸಾಲ ಕೊಟ್ಟವರು ಬಡ್ಡಿಸಹಿತ ವಸೂಲು ಮಾಡಲು ಮುಂಜಾಗ್ರತೆ ವಹಿಸಬೇಕು

- ಇಲ್ಲದಿದ್ದರೆ ಬಾಕಿ ಸಾಲ ಪಡೆಯಲು ತೊಂದರೆಯಾಗಿ, ಕಾನೂನು ಹೋರಾಟಗಳು ನಡೆಯಬಹುದು

- ವಿವಾದ ಸೃಷ್ಟಿಯಾದರೆ ಇತ್ಯರ್ಥಕ್ಕೆ ಸಾಲಗಾರ- ಲೇವಾದೇವಿದಾರನ ನಡುವೆ ಒಂಬುಡ್ಸ್‌ಮನ್‌ ಇರಲಿ

ಸುಗ್ರೀವಾಜ್ಞೆ ಏಕೆ?

- ಮೈಕ್ರೋಫೈನಾನ್ಸ್‌ ಕಂಪನಿಗಳು ಸಾಲ ವಸೂಲು ಮಾಡಲು ಕಠಿಣ ಕ್ರಮ ಕೈಗೊಂಡಿದ್ದರಿಂದ ಹಲವು ಸಾಲಗಾರರ ಆತ್ಮಹತ್ಯೆ

- ಫೈನಾನ್ಸ್‌ ಕಂಪನಿಗಳ ಸತತ ಕಿರುಕುಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ. ಹೀಗಾಗಿ ಸುಗ್ರೀವಾಜ್ಞೆ ರೂಪಿಸಿದ್ದ ಸರ್ಕಾರ

- ಸುಗ್ರೀವಾಜ್ಞೆ ಬಗ್ಗೆ ಆರು ಆಕ್ಷೇಪ ವ್ಯಕ್ತಪಡಿಸಿ ವಾಪಸ್‌ ಕಳುಹಿಸಿದ್ದ ರಾಜ್ಯಪಾಲರು. ಆರೂ ಆಕ್ಷೇಪಗಳಿಗೂ ಉತ್ತರ ನೀಡಿದ್ದ ಸರ್ಕಾರ