ಧರೆಗುರುಳಿದ ಮರ ತೆರವು ಮಾಡದ ಬಿಬಿಎಂಪಿ

| N/A | Published : May 15 2025, 07:09 AM IST

BBMP latest news today photo

ಸಾರಾಂಶ

ರಾಜಧಾನಿಯಲ್ಲಿ ಬುಧವಾರ ಸುರಿದ ಧಾರಾಕಾರ ಗಾಳಿ ಮಳೆಗೆ ಧರೆಗುರುಳಿದ ಮರ ಹಾಗೂ ಮರದ ರೆಂಬೆಕೊಂಬೆಗಳನ್ನು ಬಿಬಿಎಂಪಿಯ ಅರಣ್ಯ ವಿಭಾಗ ಸಿಬ್ಬಂದಿ ತೆರವುಗೊಳಿಸದ ಹಿನ್ನೆಲೆಯಲ್ಲಿ ಜನರು ಪರದಾಡುವಂತಾಗಿದೆ.

 ಬೆಂಗಳೂರು  : ರಾಜಧಾನಿಯಲ್ಲಿ ಬುಧವಾರ ಸುರಿದ ಧಾರಾಕಾರ ಗಾಳಿ ಮಳೆಗೆ ಧರೆಗುರುಳಿದ ಮರ ಹಾಗೂ ಮರದ ರೆಂಬೆಕೊಂಬೆಗಳನ್ನು ಬಿಬಿಎಂಪಿಯ ಅರಣ್ಯ ವಿಭಾಗ ಸಿಬ್ಬಂದಿ ತೆರವುಗೊಳಿಸದ ಹಿನ್ನೆಲೆಯಲ್ಲಿ ಜನರು ಪರದಾಡುವಂತಾಗಿದೆ.

ಮಾಧವನಗರದಲ್ಲಿ ಇಡೀ ಮರವು ಬುಡಸಮೇತವಾಗಿ ಕಟ್ಟಡಕ್ಕೆ ವಾಲಿಕೊಂಡಿತ್ತು. ಯಾವ ಕ್ಷಣದಲ್ಲಿಯಾದರೂ ನೆಲಕ್ಕೆ ಬೀಳುವ ಸ್ಥಿತಿಯಲ್ಲಿದೆ. ಈ ಬಗ್ಗೆ ಬಿಬಿಎಂಪಿಗೆ ಮಂಗಳವಾರವೇ ದೂರು ನೀಡಿದರೂ ತೆರವುಗೊಳಿಸುವುದಕ್ಕೆ ಆಗಮಿಸಿಲ್ಲ. ಇದರಿಂದ ರಸ್ತೆಯಲ್ಲಿ ಜನರು ಓಡಾಡುವುದಕ್ಕೆ ಭಯ ಪಡಬೇಕಾಗ ಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಇಂದಿರಾನಗರ, ಶಕ್ತಿ ಭವನ ರಸ್ತೆ, ಆರ್‌ಟಿ ನಗರದ ಪಿ ಆ್ಯಂಡ್‌ ಟಿ ಕಾಲೋನಿ ಸೇರಿದಂತೆ ಮೊದಲಾದ ಕಡೆ ಬಿದ್ದ ಮರ ಹಾಗೂ ಮರದ ರೆಂಬೆಕೊಂಬೆಗಳನ್ನು ತೆರವುಗೊಳಿಸಿಲ್ಲ ಎಂದು ಸ್ಥಳೀಯರು ಬಿಬಿಎಂಪಿಯ ಆಡಳಿತ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಸಾಯಿಲೇಔಟ್ ಜನರಿಗೆ ಜಲಸಂಕಷ್ಟ ತಪ್ಪಿಲ್ಲ. ಪ್ರತೀ ಬಾರಿ‌ ಮಳೆ‌ ಬಂದಾಗಲೂ ಸಾಯಿ ಲೇಔಟ್ ಜಲಾವೃತಗೊಳ್ಳಲಿದೆ. ಮಂಗಳವಾರ ಸುರಿದ ಮಳೆಯಿಂದ ರಾಜಕಾಲುವೆ ನೀರು ಅಂಗಡಿ, ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ರಾಜಕಾಲುವೆ ಒತ್ತುವರಿಯಿಂದ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರತಿ ಮಳೆಗೂ ಸಮಸ್ಯೆ ಉಂಟಾಗುತ್ತಿದೆ. ಸುಮಾರು ಎರಡು ಅಡಿಗೂ ಹೆಚ್ಚಿನ ಪ್ರಮಾಣ ನೀರು ನಿಂತುಕೊಂಡಿದೆ. ಆದರೆ, ಯಾವುದೇ ಅಧಿಕಾರಿ ಆಗಮಿಸಿ ಸರಿಪಡಿಸುವುದಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಬಾಲಕಿಗೆ ಅಪಘಾತ:

ಸಾಯಿ ಲೇಔಟ್‌ನಲ್ಲಿ ನಿಂತುಕೊಂಡ ನೀರಿನಲ್ಲಿ ಬುಧವಾರ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ನಿಂತುಕೊಂಡಿದ್ದ ಬಾಲಕಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಾಲಕಿ ಕಾಲಿಗೆ ಗಾಯವಾಗಿದೆ. ಇನ್ನೂ ಹೂಡಿ ರೈಲ್ವೆ ಕೆಳಭಾಗದಲ್ಲಿ ಭಾರೀ ಪ್ರಮಾಣದ ನೀರು ತುಂಬಿಕೊಂಡಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಅಯ್ಯಪ್ಪನಗರ ಕಡೆಯಿಂದ ಹೂಡಿ ಕಡೆಗೆ ನಿಧಾನಗತಿಯ ವಾಹನ ಸಂಚಾರ ಕಂಡು ಬಂತು.

ರಸ್ತೆ ಗುಂಡಿ ಸಮಸ್ಯೆ ಉಲ್ಬಣ

ನಗರದಲ್ಲಿ ಕಳೆದ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಮತ್ತೆ ರಸ್ತೆ ಗುಂಡಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೂ ಗಾಂಧಿನಗರ, ರಾಜಾಜಿನಗರ, ಗೋವಿಂದರಾಜ ನಗರ, ಮಲ್ಲೇಶ್ವರ ಸೇರಿದಂತೆ ವಿವಿಧ ಕಡೆ ಕೆಪಿಟಿಸಿಎಲ್‌ನಿಂದ ಕೇಬಲ್‌ ಅಳವಡಿಕೆಗೆ ರಸ್ತೆ ಅಗೆಯಲಾಗಿದೆ. ಅಗೆದ ರಸ್ತೆಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಕಾರ್ಯ ಮಾಡುತ್ತಿಲ್ಲ. ಮಳೆ ಬಂದಾಗ ಅಗೆದ ಗುಂಡಿಯಲ್ಲಿ ವಾಹನಗಳ ಚಕ್ರಗಳು ಸಿಲುಕಿಕೊಳ್ಳುತ್ತಿವೆ.

ತ್ವರಿತ ಪರಿಹಾರ:

ಮಹೇಶ್ವರ್‌ ರಾವ್‌

ನಗರದಲ್ಲಿ ಮಳೆಯಿಂದ ಬಿದ್ದ ಮರಗಳನ್ನು ತೆರವು ಮಾಡುವುದಕ್ಕೆ ತ್ವರಿತವಾಗಿ ಕ್ರಮ ವಹಿಸುವುದಕ್ಕೆ ಸೂಚಿಸಲಾಗಿದೆ. ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ಪ್ರವಾಹ ಉಂಟಾಗುವ ಸಮಸ್ಯೆ ಪರಿಹಾರಕ್ಕೆ ಸಂಸ್ಥೆಯೊಂದಿಗೆ ಚರ್ಚೆ ನಡೆಸಲಾಗಿದೆ. ಹೆಣ್ಣೂರು ರಾಜಕಾಲುವೆ ಬಳಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಕ್ಕೆ ವಲಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಮಾಹಿತಿ ನೀಡಿದ್ದಾರೆ.

ಹೂಳು ತೆಗೆಯಲು ರೋಬೋ ಮೊರೆ

ಕೇರಳದ ಕೊಚ್ಚಿಯಲ್ಲಿ ರಾಜಕಾಲುವೆಗೆ ಹೂಳು ತೆಗೆಯುವುದಕ್ಕೆ ರೋಬೋ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಆ ರೋಬೋವನ್ನು ನಗರದ ರಾಜಕಾಲುವೆಯಲ್ಲಿ ಹೂಳು ತೆಗೆಯುವುದಕ್ಕೆ ಪ್ರಾಯೋಗಿಕವಾಗಿ ಬಳಕೆ ಮಾಡಿಕೊಳ್ಳುವುದಕ್ಕೆ ಚಿಂತನೆ ನಡೆಸಲಾಗಿದೆ. ಪ್ರಮುಖವಾಗಿ ಸೇತುವೆ ಕೆಳ ಭಾಗದಲ್ಲಿ ಜೆಸಿಬಿ ಹಾಗೂ ಹಿಟಾಚಿಗಳನ್ನು ಬಳಕೆ ಮಾಡುವುದಕ್ಕೆ ಸಾಧ್ಯವಿಲ್ಲ. ಅಂತಹ ಸ್ಥಳದಲ್ಲಿ ಈ ರೋಬೋ ಬಳಕೆ ಮಾಡಬಹುದಾಗಿದೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕ ಪರಿಶೀಲನೆ ನಡೆಸಲಾಗುವುದು ಎಂದು ಮಹೇಶ್ವರ್‌ ರಾವ್‌ ಮಾಹಿತಿ ನೀಡಿದ್ದಾರೆ.