ಸಾರಾಂಶ
ಬೆಂಗಳೂರು : ಬಿಬಿಎಂಪಿ ನೂತನ ಆಡಳಿತಾಧಿಕಾರಿಯಾಗಿ ತುಷಾರ್ ಗಿರಿನಾಥ್ ಮತ್ತು ಪ್ರಭಾರ ಮುಖ್ಯ ಆಯುಕ್ತರಾಗಿ ಮಹೇಶ್ವರ್ ರಾವ್ ಅಧಿಕಾರ ಸ್ವೀಕರಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ತುಷಾರ್ ಗಿರಿನಾಥ್, ಕಳೆದ 3 ವರ್ಷಗಳಿಂದ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದೇನೆ. ಇದೀಗ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಮುಖ್ಯ ಆಯುಕ್ತನಾಗಿ ಕೆಲಸ ಮಾಡಿದ ರೀತಿಯಲ್ಲಿಯೇ ಆಡಳಿತಾಧಿಕಾರಿಯಾಗಿ ಬೆಂಗಳೂರಿನ ಜನರ ಸಮಸ್ಯೆ ನಿವಾರಿಸುವ ಕೆಲಸ ಮಾಡುತ್ತೇನೆ. ಎದುರಾಗುವ ಟೀಕೆ ಟಿಪ್ಪಣಿಯನ್ನು ಸ್ವೀಕರಿಸಿ, ಸಮಸ್ಯೆ ಹಾಗೂ ನಗರದಲ್ಲಿ ಉತ್ತಮ ಮೂಲಸೌಕರ್ಯ ಒದಗಿಸಲು ಪ್ರಯತ್ನಿಸುತ್ತೇನೆ ಎಂದರು.
ಪ್ರಭಾರ ಮುಖ್ಯ ಆಯುಕ್ತರಾಗಿ ಮಹೇಶ್ವರ್ ರಾವ್ ಅವರಿಗೆ ತುಷಾರ್ ಗಿರಿನಾಥ್ ಅವರು ಕಚೇರಿ ಕೀ, ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ನೀಡಿ ಅಧಿಕಾರ ಹಸ್ತಾಂತರಿಸಿದರು. ಹಾಗೆಯೇ, ಆಡಳಿತಾಧಿಕಾರಿಯಾಗಿ ನಿವೃತ್ತರಾದ ಉಮಾಶಂಕರ್ ಅವರು ತುಷಾರ್ ಗಿರಿನಾಥ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.