ಸಾರಾಂಶ
ಮಂಡ್ಯದ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿಗಾಗಿ ತೇಲುವ ಸೇತುವೆ, ವೀಕ್ಷಕರ ಗ್ಯಾಲರಿ, ಲೇಸರ್ ಶೋದಂತ ಪ್ರದರ್ಶನ ಏರ್ಪಡಿಸುವುದು ಸೇರಿ ಸಕಲ ಸಿದ್ಧತೆ ಎಲ್ಲ ಇಲಾಖೆಗಳು ಸಮರೋಪಾದಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಕಾವೇರಿ ಆರತಿ ಉನ್ನತ ಮಟ್ಟದ ಸಮಿತಿ ನಿರ್ಧರಿಸಿದೆ.
ಬೆಂಗಳೂರು : ಮಂಡ್ಯದ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿಗಾಗಿ ತೇಲುವ ಸೇತುವೆ, ವೀಕ್ಷಕರ ಗ್ಯಾಲರಿ, ಲೇಸರ್ ಶೋದಂತ ಪ್ರದರ್ಶನ ಏರ್ಪಡಿಸುವುದು ಸೇರಿ ಸಕಲ ಸಿದ್ಧತೆ ಎಲ್ಲ ಇಲಾಖೆಗಳು ಸಮರೋಪಾದಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಕಾವೇರಿ ಆರತಿ ಉನ್ನತ ಮಟ್ಟದ ಸಮಿತಿ ನಿರ್ಧರಿಸಿದೆ.
ಕಾವೇರಿ ಆರತಿ ಕುರಿತು ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿ ಬುಧವಾರ ನಡೆಸಿದ ಮೊದಲ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು. ದಸರಾದ ಮೊದಲ ದಿನ ಅ.2ರಂದು ಕಾವೇರಿ ನಡೆಸಬೇಕಿದೆ. ಸಿದ್ಧತೆಗೆ ಸಮಿತಿಗೆ ಕೇವಲ ನೂರು ದಿನಗಳು ಬಾಕಿಯಿದ್ದು ಸಮರೋಪಾದಿಯಲ್ಲಿ ಸಂಬಂಧಪಟ್ಟ ಇಲಾಖೆಗಳು ಸಂಘಟಿತವಾಗಿ ಕಾರ್ಯನಿರ್ವಹಿಸಬೇಕಿದ್ದು, ಮಂದಿನ ಸಭೆಯನ್ನು ಮಂಡ್ಯದಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು.
ಸಮಿತಿ ಅಧ್ಯಕ್ಷ , ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ದೇಶನದಂತೆ ದಸರಾ ವೇಳೆ ಪ್ರತಿನಿತ್ಯ ಮತ್ತು ನಂತರದ ದಿನಗಳಲ್ಲಿ ವಾರಕ್ಕೆ ಮೂರು ದಿನ ಶುಕ್ರವಾರ. ಶನಿವಾರ, ಭಾನುವಾರ ಕಾವೇರಿ ಆರತಿ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನಾಡಿನ ಸಾಂಸ್ಕೃತಿಕ, ಪ್ರವಾಸೋದ್ಯಮ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತದೆ. ಸ್ಥಳೀಯರಿಗೆ ಉದ್ಯೋಗಕ್ಕೂ ಅವಕಾಶ ಕಲ್ಪಿಸಲು ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾವೇರಿ ಆರತಿಗೆ ₹92ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಕಾವೇರಿ ಆರತಿ ಮಾತ್ರವಲ್ಲ, ಆರತಿಗೆ ಬರುವವರಿಗೆ ಮೂಲ ಸೌಕರ್ಯ, ರಸ್ತೆಗಳ ಅಭಿವೃದ್ಧಿ, ಲೇಸರ್ ಶೋ ಸೇರಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ತೇಲುವ ಸೇತುವೆ:
ಕಾವೇರಿ ಆರತಿಗೆ ಕೆಆರ್‌ಎಸ್ ಅಣೆಕಟ್ಟೆಯ ಬೃಂದಾವನದಲ್ಲಿರುವ ಜಾಗದಲ್ಲಿ ನದಿ ಮಧ್ಯೆ ತೇಲುವ ಸೇತುವೆ ರಚಿಸುವ ನಿಟ್ಟಿನಲ್ಲಿ ವಾಸ್ತುಶಿಲ್ಪಿಗಳಿಗೆ ತಿಳಿಸಲಾಗಿದೆ. ಸುತ್ತಲೂ ಜನ ಕೂತು ನೋಡಲು ವಿವಿಧ ಅಂತಸ್ತಿನ ಗ್ಯಾಲರಿ ಸಿದ್ಧಪಡಿಸಲಾಗುವುದು. ಗ್ಯಾಲರಿ ಕೆಳಗೆ ಶೌಚಾಲಯ ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಜತೆಗೆ ಆಹಾರದ ವ್ಯವಸ್ಥೆಗೆ ಅಗತ್ಯವಿರುವ ಸ್ಟಾಲ್‌ಗಳನ್ನು ನಿರ್ಮಿಸಲಾಗುವುದು ಎಂದರು.
ಸಂಜೆ 6ರಿಂದ 6.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, 6.30ರಿಂದ 7 ಗಂಟೆವರೆಗೆ ಕಾವೇರಿ ಆರತಿ, ಬಳಿಕ ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ, ಮ್ಯೂಸಿಕಲ್ ಫೌಂಟೇನ್, ಲೇಸರ್ ಪ್ರದರ್ಶನ, ಪಟಾಕಿ ಪ್ರದರ್ಶನ ಆಯೋಜಿಸುವ ಕುರಿತು ಚರ್ಚಿಸಲಾಗಿದೆ. ಉಪಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಸಾಂಸ್ಕೃತಿಕ ಕಾರ್ಯಕಮದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಇದರ ಜತೆಗೆ ಸ್ಥಳೀಯ ಗುಡಿ ಕೈಗಾರಿಕೆಗಳು, ಸಾವಯವ ಉತ್ಪನ್ನ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಹೋಟೆಲ್ ಉದ್ಯಮದ ಬೆಳವಣಿಗೆಗೂ ಯೋಜನೆ ರೂಪಿಸಲಾಗುತ್ತದೆ. ಒಟ್ಟಾರೆ ಕಾವೇರಿ ಆರತಿಯನ್ನು ಹೊಸ ಪ್ರಯೋಗವಾಗಿ ವಿಭಿನ್ನತೆ ಮತ್ತು ವಿಜೃಂಬಣೆಯಿಂದ ಜನಪರ ಕಾರ್ಯಕ್ರಮಮವಾಗಿ ರೂಪಿಸಲಾಗುವುದು ಎಂದರು.
ಟಿಕೆಟಿಂಗ್ ವ್ಯವಸ್ಥೆ:
ಕಾವೇರಿ ಆರತಿಯನ್ನು ಶಾಶ್ವತವಾಗಿ ಆಯೋಜಿಸಲಾಗುತ್ತಿದ್ದು, ಸಾಕಷ್ಟು ವೆಚ್ಚ ಮಾಡಬೇಕಾಗುತ್ತದೆ. ಹೀಗಾಗಿ ಟಿಕೆಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಈ ಕುರಿತು ಉಪಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಇದರ ಜತೆಗೆ ಒಂದು ಪ್ರದೇಶದಲ್ಲಿ ಜನ ಉಚಿತವಾಗಿಯೂ ಕಾವೇರಿ ಆರತಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಕಾವೇರಿ ಆರತಿ ವೀಕ್ಷಿಸಲು ಯಾವುದೇ ಸಮಸ್ಯೆ ಆಗದಂತೆ ಪ್ರತಿ ದಿನ 8ರಿಂದ 10 ಸಾವಿರ ಮಂದಿ ಕುಳಿತು ನೋಡಲು ವ್ಯವಸ್ಥೆ ಮಾಡಲಾಗುವುದು. ಆರಂಭಿಕವಾಗಿ ಮಹಾಕುಂಭ ಮೇಳದಲ್ಲಿ ಮಾಡಿದಂತೆ ಟೆಂಟ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಯೋಚಿಸಲಾಗಿದೆ. ಹಂತ ಹಂತವಾಗಿ ಗ್ಯಾಲರಿ ವಿಸ್ತರಿಸಲು ಅವಕಾಶ ಮಾಡಿಕೊಡಲಾಗುವುದು ಎಂದರು.
ಸಭೆಯಲ್ಲಿ ಹಾಜರಿದ್ದ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಕಾವೇರಿ ಆರತಿ ಸಂಬಂಧ ನೆರೆಯ ಜಿಲ್ಲೆಗಳ ಎಲ್ಲಾ ಜನಪ್ರತಿನಿಧಿಗಳ ಜೊತೆ ಸಮಾಲೋಚಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.
ವಿಶೇಷ ಪ್ರವಾಸೋದ್ಯಮ
ಪ್ಯಾಕೇಜ್: ಗೂಳೀಗೌಡ
ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ ಮಾತನಾಡಿ, ಕಾವೇರಿ ಆರತಿ ಮಂಡ್ಯ, ಮೈಸೂರು, ಹಾಸನ, ಕೊಡಗು, ಚಾರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿರಲಿದೆ. ಧಾರ್ಮಿಕ, ಸಾಂಸ್ಕೃತಿಕ, ಪರಿಸರ, ಅರಣ್ಯ ಮತ್ತಿತರ ಅಂಶಗಳನ್ನೊಳಗೊಂಡ ವಿಶೇಷ ಪ್ರವಾಸೋದ್ಯಮ ಪ್ಯಾಕೇಜ್ ರೂಪಿಸುವಂತೆ ಉಪಮಖ್ಯಮಂತ್ರಿಯವರು ನಿರ್ದೇಶನ ನೀಡಿದ್ದಾರೆ. ಈ ಕುರಿತು ಪ್ರವಾಸೋದ್ಯಮ ಇಲಾಖೆ ಜತೆ ಚರ್ಚಿಸಲಾಗುವುದು ಎಂದರು.