ಸಾರಾಂಶ
ರಾಜ್ಯ ಸರ್ಕಾರ ಕೆಆರ್‌ಎಸ್ ಬಳಿ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ನೀರಾವರಿ ಇಲಾಖೆಯಿಂದ ಸುಮಾರು 100 ಕೋಟಿ ರು. ಮೀಸಲಿಟ್ಟಿದೆ. ದಸರಾ ವೇಳೆಗೆ ಕಾವೇರಿ ಆರತಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರು : ರಾಜ್ಯ ಸರ್ಕಾರ ಕೆಆರ್‌ಎಸ್ ಬಳಿ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ನೀರಾವರಿ ಇಲಾಖೆಯಿಂದ ಸುಮಾರು 100 ಕೋಟಿ ರು. ಮೀಸಲಿಟ್ಟಿದೆ. ದಸರಾ ವೇಳೆಗೆ ಕಾವೇರಿ ಆರತಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧ ಮುಂಭಾಗ ಬೆಂಗಳೂರು ಜಲಮಂಡಳಿಯ ಸಂಚಾರಿ ಕಾವೇರಿ ಮತ್ತು ಸರಳ ಕಾವೇರಿ ಯೋಜನೆಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ ಈ ಮಾಹಿತಿ ನೀಡಿದರು.
ಬಿಡಬ್ಲ್ಯೂಎಸ್ಎಸ್‌ಬಿ ಯಿಂದ ಇತ್ತೀಚೆಗೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗಿದೆ. ಈಗ ಕೆಆರ್‌ಎಸ್ ಬಳಿ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಪ್ರವಾಸೋದ್ಯಮ, ಧಾರ್ಮಿಕ ದತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿ ವಿವಿಧ ಇಲಾಖೆಗಳನ್ನು ಒಳಪಡಿಕೊಳ್ಳಲಾಗಿದೆ. ಇದಕ್ಕೊಂದು ಸಮಿತಿ ಮಾಡಿ ರಾಮ್ ಪ್ರಸಾತ್ ಮನೋಹರ್ ಅವರ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಕೊಡಗಿನಿಂದ ಹಿಡಿದು ರಾಜ್ಯದ ಎಲ್ಲಾ ಭಾಗಗಳ ಸಂಸ್ಕೃತಿ ಸೇರಿಸಿ ವಾರದಲ್ಲಿ ಮೂರು ದಿನ ಪೂಜೆ ಸಲ್ಲಿಸಬೇಕು, ಬರುವ ಪ್ರವಾಸಿಗರು ಪೂಜೆ ಸಲ್ಲಿಸಿಕೊಂಡು ಹೋಗಲು ಅವಕಾಶ ಕಲ್ಪಿಸಿಕೊಡಲಾಗುವುದು. ಕಾವೇರಿ ಹಾಗೂ ನೀರಿನ ಮಹತ್ವ ಎಲ್ಲರಿಗೂ ಅರಿವಾಗಲಿ ಎಂದು ಈ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದ್ದು, ಇಲಾಖೆಗಳಿಗೆ ಸೂಕ್ತ ಜವಾಬ್ದಾರಿ ನೀಡಲಾಗುವುದು ಎಂದರು.
ಮುನ್ನೆಚ್ಚರಿಕೆ ಕ್ರಮವಾಗಿ ಅಣೆಕಟ್ಟುಗಳಿಗೆ ಭದ್ರತೆ:
ಭಾರತ-ಪಾಕಿಸ್ತಾನದ ಯುದ್ಧದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಅಣೆಕಟ್ಟುಗಳಿಗೆ ಭದ್ರತೆ ಒದಗಿಸಲಾಗಿದೆ. ತಾಂತ್ರಿಕ ಸಿಬ್ಬಂದಿ ಹೊರತಾಗಿ ಯಾವುದೇ ಪ್ರವಾಸಿಗರಿಗೆ ಅಣೆಕಟ್ಟೆಯ ಬಳಿ ತೆರಳಲು ಅವಕಾಶ ನೀಡಬಾರದು ಎಂದು ನಿರ್ದೇಶನ ನೀಡಿದ್ದೇವೆ. ಸಾರ್ವಜನಿಕರು ಈ ವಿಚಾರವಾಗಿ ಸಹಕಾರ ನೀಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಭದ್ರತೆ ಕುರಿತ ಪ್ರಶ್ನೆಗೆ, ಬೆಂಗಳೂರಿನ ಭದ್ರತೆ ವಿಚಾರವಾಗಿ ಪೊಲೀಸ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಅಗತ್ಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಂಬಂಧಪಟ್ಟ ಸಂದೇಶವನ್ನು ರವಾನಿಸುತ್ತೇವೆ. ದೇಶದ ಐಕ್ಯತೆ ಗಮನದಲ್ಲಿಟ್ಟುಕೊಂಡು ಯೋಧರಿಗೆ ಆತ್ಮಸ್ಥೈರ್ಯ ತುಂಬಲು ಮುಂದಾಗಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಇತರೆ ವಿಚಾರ ಚರ್ಚೆ ಮಾಡಿ ನಂತರ ಮಾಹಿತಿ ನೀಡುತ್ತೇವೆ ಎಂದರು.