ಭರತ್‌ ಮನೆಯಲ್ಲಿ ಮಡುಗಟ್ಟಿದ ಶೋಕ ಪಹಲ್ಗಾಂ ಉಗ್ರರ ದಾಳಿಗೆ ಜೀವತೆತ್ತ ಭೂಷಣ್‌

| N/A | Published : Apr 25 2025, 09:50 AM IST

Kannadigas Pahalgam
ಭರತ್‌ ಮನೆಯಲ್ಲಿ ಮಡುಗಟ್ಟಿದ ಶೋಕ ಪಹಲ್ಗಾಂ ಉಗ್ರರ ದಾಳಿಗೆ ಜೀವತೆತ್ತ ಭೂಷಣ್‌
Share this Article
  • FB
  • TW
  • Linkdin
  • Email

ಸಾರಾಂಶ

ಪಹಲ್ಗಾಂನಲ್ಲಿ ಉಗ್ರರ ದಾಳಿಗೆ ಜೀವತೆತ್ತ ಭರತ್‌ ಭೂಷಣ್‌ ಅಂತಿಮ ದರ್ಶನಕ್ಕಾಗಿ ಬಂದವರೆದುರು ತಂದೆ ಚನ್ನವೀರಪ್ಪ ಕಣ್ಣೀರು ಹಾಕುತ್ತಿದ್ದರು.

ಬೆಂಗಳೂರು: ಪಹಲ್ಗಾಂನಲ್ಲಿ ಉಗ್ರರ ದಾಳಿಗೆ ಜೀವತೆತ್ತ ಭರತ್‌ ಭೂಷಣ್‌ ಅಂತಿಮ ದರ್ಶನಕ್ಕಾಗಿ ಬಂದವರೆದುರು ತಂದೆ ಚನ್ನವೀರಪ್ಪ ಕಣ್ಣೀರು ಹಾಕುತ್ತಿದ್ದರು. ಮುದ್ದಿನ ಮಗನನ್ನು ಕಳೆದುಕೊಂಡ ತಾಯಿ ಶೈಲಾಕುಮಾರಿ ಬಿಕ್ಕಿಬಿಕ್ಕಿ ಅಳುತ್ತಿದ್ದರೆ, ಕಣ್ಣೆದುರೇ ಗಂಡ ಬಲಿಯಾಗಿದ್ದನ್ನು ನೋಡಿದ್ದ ಪತ್ನಿ ಡಾ.ಸುಜಾತಾ ಕಣ್ಣೀರ ಕಟ್ಟೆಯೊಡೆದಿತ್ತು. ಇದ್ಯಾವುದರ ಪರಿವೆಯೇ ಇಲ್ಲದ ಭರತ್‌ ಭೂಷಣ್‌ ಮೂರೂವರೆ ವರ್ಷದ ಪುತ್ರ ಹವೀಶ್‌ ಮಾತ್ರ ಕಾಂಪೌಂಡ್ ಮೇಲೆ ಕೂತು ಸುಮ್ಮನೆ ಅತ್ತಿಂದಿತ್ತ ನೋಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಮತ್ತಿಕೆರೆಯ ಸುಂದರ ನಗರದ 4ನೇ ಅಡ್ಡರಸ್ತೆಯಲ್ಲಿರುವ ಭರತ್‌ಭೂಷಣ್‌ ಮನೆಯಲ್ಲಿ ಶೋಕ ಮಡುಗಟ್ಟಿತ್ತು. ಮನೆಯೆದುರು ಬೆಳಗ್ಗೆಯಿಂದ ಮಧ್ಯಾಹ್ನ 3ಗಂಟೆವರೆಗೆ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರ ಇಡಲಾಗಿತ್ತು. ಸಂಬಂಧಿಕರು, ಕುಟುಂಬಸ್ಥರು, ಸುತ್ತಮುತ್ತಲ ನಿವಾಸಿಗಳು, ಸಾಕಷ್ಟು ಸಂಖ್ಯೆಯಲ್ಲಿ ತಂಡೋಪತಂಡವಾಗಿ ಆಗಮಿಸಿ ಅಂತಿಮ ದರ್ಶನ ಪಡೆದು, ದುರಂತಕ್ಕಾಗಿ ಮರುಗಿದರು.

ಬೆಳಗ್ಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸ್ಥಳೀಯ ಶಾಸಕ ಮುನಿರತ್ನ, ಮಾಜಿ ಸಚಿವ ಅಶ್ವತ್ಥ ನಾರಾಯಣ, ಸಿ.ಟಿ.ರವಿ, ನಿಖಿಲ್‌ ಕುಮಾರಸ್ವಾಮಿ ಮತ್ತಿತರ ಗಣ್ಯರು ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅಂತಿಮ ನಮನ ಸಲ್ಲಿಸಿದರು.

ಉದ್ಯಾನಕ್ಕೆ ಭರತ್‌

ಭೂಷಣ್‌ ಹೆಸರು

ಇವರ ಮನೆ ಸಮೀಪವೇ ಇರುವ ಉದ್ಯಾನವನಕ್ಕೆ ಇದೀಗ ಭರತ್‌ ಭೂಷಣ್ ಹೆಸರಿಡಲಾಗಿದೆ. ಉಗ್ರರ ದಾಳಿಗೆ ಮೃತಪಟ್ಟ ಕನ್ನಡಿಗನ ನೆನಪು ಶಾಶ್ವತವಾಗಿಸಲು ಈ ನಾಮಕರಣ ಮಾಡಲಾಯಿತು.

ಕಾಲಿಗೆ ಸಣ್ಣ ಗಾಯ ಆಗಿದೆ

ಅಂದಿದ್ರು: ತಂದೆ ಚನ್ನವೀರಪ್ಪ

ನಮಗೆ ಅಘಾತವಾಗಬಾರದು ಎಂದು ಉಗ್ರ ದಾಳಿಯಿಂದ ಸಾವು ಸಂಭವಿಸಿದ ವಿಷಯವೇ ತಿಳಿಸಿರಲಿಲ್ಲ. ಅವನಿಗೆ ಅಲ್ಲಿ ಕಾಲಿಗೆ ಏನೋ ಸಣ್ಣ ಗಾಯ ಆಗಿದೆಯಂತೆ, ಆರ್ಮಿ ಆಸ್ಪತ್ರೆಯಲ್ಲಿದ್ದಾನೆ. ನಾವು ಹೋಗಿ ಕರೆದುಕೊಂಡು ಬರ್ತೀವಿ ಎಂದು ದೊಡ್ಡ ಮಗ, ಸುಜಾತಾ ಅಣ್ಣ ತೆರಳಿದ್ದರು. ನಿವೃತ್ತ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕ (ಡಿಡಿಪಿಐ) ಚನ್ನವೀರಪ್ಪ ಪುತ್ರನ ಸಾವಿನ ಬಗ್ಗೆ ಹೇಳುತ್ತ ಕಣ್ಣೀರು ಹಾಕಿದ್ದು ಹೀಗೆ. 21ನೇ ತಾರೀಖು ರಾತ್ರಿ ಪೋನ್ ಮಾಡಿ ಮಾತನಾಡಿದ್ದೆ. ಊಟ ಆಯ್ತು, 23ರಂದು ವಾಪಸ್‌ ಬರ್ತೀವಿ ಅಂತ ಹೇಳಿದ್ರು. ಈಗ ನೋಡಿದ್ರೆ ಈ ರೀತಿ ವಾಪಸಾಗಿದ್ದಾನೆ ಎಂದು ಭಾವುಕರಾದರು. ಸರ್ಕಾರ ನಂಬಿ ಪ್ರವಾಸಿಗರು ಕಾಶ್ಮೀರಕ್ಕೆ ಹೋಗುತ್ತಾರೆ ಅಂದರೆ ಭದ್ರತೆ ನೀಡಬೇಕು‌. ಉಗ್ರರು ಮತ್ತೆ ತಲೆ ಎತ್ತದಂತೆ ಶಿಕ್ಷೆ ಕೊಡಿಸಬೇಕು ಎಂದರು.