ತಮ್ಮ ಕಂಪನಿ ಮೇಲೆ ದಾಳಿಗಿಳಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲೇ ಪಿಸ್ತೂಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡು ಖ್ಯಾತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಕಂಪನಿ ಮುಖ್ಯಸ್ಥ ಡಾ.ಚಿರಿಯನ್ಕಂಡತ್ ಜೋಸೆಫ್ ರಾಯ್ (ಸಿ.ಜೆ.ರಾಯ್) ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಶುಕ್ರವಾರ ನಡೆದಿದೆ.
ಬೆಂಗಳೂರು : ತಮ್ಮ ಕಂಪನಿ ಮೇಲೆ ದಾಳಿಗಿಳಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲೇ ಪಿಸ್ತೂಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡು ಖ್ಯಾತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಕಂಪನಿ ಮುಖ್ಯಸ್ಥ ಡಾ.ಚಿರಿಯನ್ಕಂಡತ್ ಜೋಸೆಫ್ ರಾಯ್ (ಸಿ.ಜೆ.ರಾಯ್) ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಶುಕ್ರವಾರ ನಡೆದಿದೆ.
ರಿಚ್ಮಂಡ್ ಟೌನ್‌ನಲ್ಲಿರುವ ಕಾನ್ಫಿಡೆಂಟ್ ಗ್ರೂಪ್‌ನ ಪ್ರಧಾನ ಕಚೇರಿಯಲ್ಲಿ ಸಂಜೆ 3 ಗಂಟೆ ಸುಮಾರಿಗೆ ಪಿಸ್ತೂಲ್‌ನಿಂದ ರಾಯ್ ಅವರು ಗುಂಡು ಹಾರಿಸಿಕೊಂಡಿದ್ದಾರೆ. ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಐಟಿ ಅಧಿಕಾರಿಗಳು ಹಾಗೂ ಆ ಕಂಪನಿ ಕೆಲಸಗಾರರು ಕರೆದೊಯ್ದಿದ್ದಾರೆ. ಆದರೆ ರಾಯ್ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರು, ಕೇರಳ, ತಮಿಳುನಾಡು ಸೇರಿ ದೇಶ-ವಿದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ರಾಯ್ ತೊಡಗಿದ್ದರು. ಇತ್ತೀಚೆಗೆ ಬಹುಕೋಟಿ ಆದಾಯ ತೆರಿಗೆ ವಂಚನೆ ಆರೋಪಕ್ಕೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ರಾಯ್ ಅವರ ಸಾಮ್ರಾಜ್ಯದ ಮೇಲೆ ಶುಕ್ರವಾರ ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯಿಂದ ಭೀತಿಗೊಂಡ ಅವರು, ಐಟಿ ಅಧಿಕಾರಿಗಳ ಕಚೇರಿಯಲ್ಲಿ ಇರುವ ಹೊತ್ತಿನಲ್ಲೇ, ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದುಬೈ ನಿವಾಸಿ, ಕೇರಳ ಮೂಲ:
ಕೇರಳ ಮೂಲದ ಜೆ.ಸಿ.ರಾಯ್ ಅವರು, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಶರವೇಗದಲ್ಲಿ ಪ್ರಗತಿ ಕಂಡ ಯಶಸ್ವಿ ಉದ್ಯಮಿ ಆಗಿದ್ದರು. ಪ್ರಸುತ್ತ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ದುಬೈನಲ್ಲೇ ವಾಸವಾಗಿದ್ದರು. ಬೆಂಗಳೂರಿನ ಆನೇಪಾಳ್ಯದಲ್ಲಿ ರಾಯ್ ಅವರಿಗೆ ಮನೆ ಇತ್ತು. 2005ರಲ್ಲಿ ‘ಕಾನ್ಫಿಡೆಂಟ್ ’ ಹೆಸರಿನ ರಿಯಲ್ ಎಸ್ಟೇಟ್ ಕಂಪನಿಯನ್ನು ಸ್ಥಾಪಿಸಿದ ಅವರು, 20 ವರ್ಷಗಳಲ್ಲಿ ಬೆಂಗಳೂರು ಹಾಗೂ ದುಬೈ ಸೇರಿ ದೇಶ-ವಿದೇಶಗಳಲ್ಲಿ ಸಾಮ್ರಾಜ್ಯ ಕಟ್ಟಿದರು.
ಅವರು ಬೆಂಗಳೂರು, ಕೇರಳ ಹಾಗೂ ದುಬೈನಲ್ಲಿ ಕೋಟ್ಯಂತರ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. ಕೆಲ ವರ್ಷಗಳಿಂದ ರಿಯಲ್ ಎಸ್ಟೇಟ್ ಮಾತ್ರವಲ್ಲದೆ ಚಲನಚಿತ್ರ ಹಾಗೂ ಕಿರುತೆರೆಯಲ್ಲಿ ಕಾರ್ಯಕ್ರಮಗಳ ನಿರ್ಮಾಣದಲ್ಲೂ ತೊಡಗಿದ್ದರು. ಕೇರಳ ಹಾಗೂ ಕನ್ನಡ ಭಾಷೆಗಳ ಚಲನಚಿತ್ರಗಳಿಗೆ ರಾಯ್ ಬಂಡವಾಳ ಹೂಡಿದ್ದರು.
ಮೂರು ದಿನಗಳಿಂದ ಐಟಿ ಶೋಧ:
ಈ ಹಿನ್ನೆಲೆಯಲ್ಲಿ ರಾಯ್ ಅವರ ಉದ್ಯಮ ಕೋಟೆಗೆ ಕೇರಳ ಐಟಿ ಘಟಕದ ಮುಖ್ಯಸ್ಥ ನಿತಿನ್ ಜಯರಾಮನ್ ನೇತೃತ್ವದಲ್ಲಿ ಅಧಿಕಾರಿಗಳು ಲಗ್ಗೆ ಹಾಕಿದ್ದರು. ಮೂರು ದಿನಗಳಿಂದ ರಾಯ್ ಅವರ ಆರ್ಥಿಕ ವ್ಯವಹಾರಗಳ ಕುರಿತು ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದರು. ಈ ದಾಳಿಯಿಂದ ಕಂಗಲಾಗಿದ್ದ ರಾಯ್ ಅವರಿಗೆ ಶುಕ್ರವಾರ ‘ಬ್ಲ್ಯಾಕ್ ಡೇ’ ಆಗಿದೆ.
ರಿಚ್ಮಂಡ್ ಟೌನ್ ಸಮೀಪದ ತಮ್ಮ ಕಚೇರಿಯಲ್ಲಿ ಸಂಜೆ 3 ಗಂಟೆ ಸುಮಾರಿಗೆ ಐಟಿ ಅಧಿಕಾರಿಗಳಿಗೆ ಆರ್ಥಿಕ ವಹಿವಾಟಿನ ಲೆಕ್ಕ ನೀಡುವುದಾಗಿ ಹೇಳಿ ರಾಯ್ ಬಂದಿದ್ದರು. ಆಗ ಕಡತ ಸಲ್ಲಿಸುವುದಾಗಿ ಹೇಳಿದ ಅವರು, ತಮ್ಮ ಕೊಠಡಿಗೆ ತೆರಳಿದ್ದಾರೆ. ಆದರೆ ಕೆಲ ಹೊತ್ತು ಕಳೆದರೂ ಅವರು ಕೊಠಡಿಯಿಂದ ಹೊರಗೆ ಬರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಒಳಗೆ ತೆರಳಿದ್ದಾರೆ. ಈ ವೇಳೆ ಅಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಕೆಳಗೆ ಬಿದ್ದಿದ್ದ ರಾಯ್ ಅವರ ದೇಹ ಪತ್ತೆಯಾಗಿದೆ. ಅವರು ಪಿಸ್ತೂಲ್‌ನಿಂದ ಗುಂಡಿನ ದಾಳಿ ನಡೆಸಿ ಅತ್ಮಹತ್ಯೆ ಮಾಡಿಕೊಂಡಿದ್ದು ಪತ್ತೆಯಾಗಿದೆ. ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಐಟಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಅಲ್ಲಿನ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬನ್ನೇರುಘಟ್ಟ ರಸ್ತೆಯ ಮತ್ತೊಂದು ಖಾಸಗಿ ಆಸ್ಪತ್ರೆಗೆ ರಾಯ್ ರನ್ನು ಕರೆದುಕೊಂಡು ಅಧಿಕಾರಿಗಳು ತೆರಳಿದ್ದಾರೆ. ಈ ಆತ್ಮಹತ್ಯೆ ವಿಚಾರ ತಿಳಿದು ರಾಯ್ ಕುಟುಂಬದವರು ಆಘಾತಗೊಂಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಂಟಿ ಆಯುಕ್ತ ವಂಶಿಕೃಷ್ಣ, ಹಾಗೂ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚ್ಚಿಂದ್ರ ಹಾಕೆ ತೆರಳಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ನಿನ್ನೆ ಏನಾಯ್ತು? ಹೇಗಾಯ್ತ?
ಬೆಂಗಳೂರು ಸೇರಿ ದೇಶಾದ್ಯಂತ ರಿಯಲ್ ಎಸ್ಟೇಟ್ ಉದ್ಯಮ ಹೊಂದಿರುವ ಕಾನ್ಫಿಡೆಂಟ್ ಗ್ರೂಪ್
ಗ್ರೂಪ್ ವಿಷಯವಾಗಿ ಕಳೆದ 2 ತಿಂಗಳಿನಿಂದಲೂ ಜೆ.ಸಿ. ರಾಯ್ ಉದ್ಯಮದ ಬಗ್ಗೆ ದಾಖಲೆ ಸಂಗ್ರಹ
ಕಳೆದ ಮೂರು ದಿನಗಳಿಂದ ರಾಯ್ ಅವರ ಬೆಂಗಳೂರು ಕಚೇರಿ ಮೇಲೆ ದಾಳಿ. ದಾಖಲೆಗೆ ಕೋರಿಕೆ
ಹಣಕಾಸಿನ ಮಾಹಿತಿ ನೀಡುವುದಾಗಿ ಹೇಳಿ ಶುಕ್ರವಾರ ರಿಚ್ಮಂಡ್ ಟೌನ್ ಕಚೇರಿಗೆ ಬಂದಿದ್ದ ರಾಯ್
ಅಲ್ಲಿ ಅಧಿಕಾರಿಗಳ ಬಳಿ, ತಮ್ಮ ಕೊಠಡಿಯಿಂದ ದಾಖಲೆ ತರುವುದಾಗಿ ಹೇಳಿ ಒಳಗೆ ತೆರಳಿದ್ದ ಉದ್ಯಮಿ
ಒಳಗೆ ಹೋದವರು ಹೊರಗೆ ಬರದಿದ್ದಾಗ ಒಳಗೆ ತೆರಳಿದ ಅಧಿಕಾರಿಗಳಿಗೆ ರಕ್ತಸಿಕ್ತ ಸ್ಥಿತಿಯಲ್ಲಿ ದೇಹ ಪತ್ತೆ

