ಸಾರಾಂಶ
ಹಲವು ಮೊದಲನ್ನು ಸಾಧಿಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ, ಇದೀಗ ದೇಶದಲ್ಲಿಯೇ ಮೊದಲ ಬಾರಿಗೆ ಅತಿದೊಡ್ಡ ‘ಗ್ರೀನ್‌ಫೀಲ್ಡ್ ಕಾರ್ಗೋ ಟರ್ಮಿನಲ್’ ಕಾರ್ಯಾರಂಭಿಸಿದೆ.
ಬೆಂಗಳೂರು : ಹಲವು ಮೊದಲನ್ನು ಸಾಧಿಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ, ಇದೀಗ ದೇಶದಲ್ಲಿಯೇ ಮೊದಲ ಬಾರಿಗೆ ಅತಿದೊಡ್ಡ ‘ಗ್ರೀನ್‌ಫೀಲ್ಡ್ ಕಾರ್ಗೋ ಟರ್ಮಿನಲ್’ ಕಾರ್ಯಾರಂಭಿಸಿದೆ.
ನೂತನ ಕಾರ್ಗೋ ಟರ್ಮಿನಲ್ 2.45 ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದು, 3.60 ಲಕ್ಷ ಮೆಟ್ರಿಕ್ ಟನ್ ನಿರ್ವಹಣಾ ಸಾಮರ್ಥ್ಯ, 42 ಬೃಹತ್ ಟ್ರಕ್‌ಗಳು, 400ಕ್ಕೂ ಹೆಚ್ಚು ಕಾರ್ಗೋ ಬೋಗಿಗಳು ಸಂಚರಿಸುವ ಸಾಮರ್ಥ್ಯ ಹೊಂದಿದೆ. ವಾಯುಯಾನ ಸರಕು ಸಾಗಣೆ ಕ್ಷೇತ್ರದ ಮೇನ್ಜೀಸ್ ಏವಿಯೇಷನ್ ಸಂಸ್ಥೆಯ ಸಹಯೋಗದಲ್ಲಿ ನೂತನ ಕಾರ್ಗೋ ಟರ್ಮಿನಲ್ ನಿರ್ಮಿಸಲಾಗಿದೆ.
ನೂತನ ಕೇಂದ್ರ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಸರಕುಗಳನ್ನು ಪರೀಕ್ಷಿಸಲು ಎಕ್ಸ್-ರೇ ಯಂತ್ರ ಅಳವಡಿಸಲಾಗಿದೆ. ಸರಕುಗಳನ್ನು ವಿಮಾನಕ್ಕೆ ಸಾಗಿಸುವುದಕ್ಕೂ ಮುನ್ನ ನಿರ್ವಹಣೆ ಮಾಡಲು 30 ಯುಎಲ್‌ಡಿ, ನೈಜ ಸಮಯದಲ್ಲಿ ಸರಕುಗಳ ದತ್ತಾಂಶ ಸಂಗ್ರಹಿಸಲು 40 ಹ್ಯಾಂಡ್‌ಹೆಲ್ಡ್ ಟರ್ಮಿನಲ್ ಸಾಧನಗಳು, ಏಜೆಂಟರಿಗೆ ಸ್ವಯಂ ಸೇವಾ ಕಿಯೋಸ್ಕ್ ಸೌಲಭ್ಯಗಳನ್ನು ಅಳವಡಿಸಲಾಗಿದೆ.
ನೂತನ ಕಾರ್ಗೋ ಟರ್ಮಿನಲ್ ಭಾರತೀಯ ಹಸಿರು ಕಟ್ಟಡ ಮಂಡಳಿಯ ಮಾನದಂಡಗಳಿಗನುಗುಣವಾಗಿ ನಿರ್ಮಿಸಲಾಗಿದೆ. ಸ್ಕೈ ಲೈಟಿಂಗ್, ಸುಧಾರಿತ ವಾತಾಯನ ವ್ಯವಸ್ಥೆ, ನೀರು ಸಂರಕ್ಷಣಾ ಕ್ರಮಗಳು, ಸಮರ್ಥ ಇಂಧನ ಬಳಕೆ ಮೂಲಸೌಕರ್ಯಗಳನ್ನು ಅಳವಡಿಸಲಾಗಿದೆ ಎಂದು ಬಿಐಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.