ನವದೆಹಲಿ: ಪಾಕಿಸ್ತಾನ ಎಂಬುದು ಮಗ್ಗುಲ ಮುಳ್ಳು ಇದ್ದಂತೆ. ಆದರೂ ನೆರೆಯ ದೇಶದೊಂದಿಗಿನ ಮಾತುಕತೆಯ ಬಾಗಿಲನ್ನು ಬಂದ್‌ ಮಾಡಬಾರದು ಎಂದು ಆರ್‌ಎಸ್‌ಎಸ್‌ನ ನಂಬರ್ 2 ನಾಯಕರಾಗಿರುವ ದತ್ತಾತ್ರೇಯ ಹೊಸಬಾಳೆ ಅವರು ಸಲಹೆ ಮಾಡಿದ್ದಾರೆ.

ಪಾಕಿಸ್ತಾನ ಮಗ್ಗುಲ ಮುಳ್ಳಿನಂತಿದ್ದು, ಪುಲ್ವಾಮಾದಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಾ ಹೋದರೆ, ಅದಕ್ಕೆ ತಕ್ಕುದಾಗಿ ನಾವು ತಿರುಗೇಟು ನೀಡಬೇಕು. ಏಕೆಂದರೆ ದೇಶದ ಭದ್ರತೆ ಹಾಗೂ ಆತ್ಮಗೌರವವನ್ನು ರಕ್ಷಿಸಿಕೊಳ್ಳಬೇಕು. ಅಂತಹ ಘಟನೆಗಳು ಆದಾಗ ಆಯಾ ಸರ್ಕಾರಗಳು ಗಮನಹರಿಸಿ ಪರಿಸ್ಥಿತಿ ನಿರ್ವಹಿಸುತ್ತವೆ. ಆದರೆ ಅದೇ ವೇಳೆ, ಮಾತುಕತೆಯ ಬಾಗಿಲನ್ನು ನಾವು ಮುಚ್ಚಬಾರದು ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ಹೊಸಬಾಳೆ ಹೇಳಿದ್ದಾರೆ.

ಜನರು- ಜನರ ನಡುವಣ ಸಂಪರ್ಕವೇ ಮುಖ್ಯ

ಎರಡೂ ದೇಶಗಳ ನಡುವಿರುವ ಕಗ್ಗಂಟನ್ನು ಬಿಡಿಸಲು ಜನರು- ಜನರ ನಡುವಣ ಸಂಪರ್ಕವೇ ಮುಖ್ಯವಾದುದು. ಪಾಕಿಸ್ತಾನದ ಮಿಲಿಟರಿ ಹಾಗೂ ಸೇನಾ ನಾಯಕತ್ವ ಈಗಾಗಲೇ ಭಾರತದ ವಿಶ್ವಾಸವನ್ನು ಕಳೆದುಕೊಂಡಿವೆ. ನಾಗರಿಕ ಸಮಾಜ ಮುಂದೆ ಬರುವ ಸಮಯ ಇದಾಗಿದೆ ಎಂದು ತಿಳಿಸಿದ್ದಾರೆ.


ವ್ಯಾಪಾರ, ವಾಣಿಜ್ಯ, ವೀಸಾ ವಿತರಣೆಯನ್ನು ನಿಲ್ಲಿಸಬಾರದು. ಮಾತುಕತೆಗೆ ಒಂದು ಬಾಗಿಲು ತೆರೆದಿರಬೇಕು. ವಿದ್ವಾಂಸರು, ಕ್ರೀಡಾಪಟುಗಳು, ವಿಜ್ಞಾನಿಗಳು, ಸಮುದಾಯ ನಾಯಕರು ಇದಕ್ಕಾಗಿ ಮುಂದೆ ಬರಬೇಕು ಎಂದು ಸಲಹೆ ಮಾಡಿದ್ದಾರೆ.

ಎರಡೂ ದೇಶಗಳ ನಡುವೆ ಕ್ರೀಡಾ ಚಟುವಟಿಕೆಗಳು ಮುಂದುವರಿಯಬೇಕೇ? ಎಂಬ ಪ್ರಶ್ನೆಗೆ ‘ಖಂಡಿತವಾಗಿ’ ಎಂದು ಹೇಳಿದ್ದಾರೆ.

ಹೊಸಬಾಳೆ ಹೇಳಿದ್ದು

- ಪಾಕಿಸ್ತಾನ ಮಗ್ಗುಲ ಮುಳ್ಳಿನಂತೆ. ಪುಲ್ವಾಮಾದಂತಹ ಸಮಸ್ಯೆಗಳನ್ನು ಸೃಷ್ಟಿಸಿದರೆ ತಕ್ಕ ತಿರುಗೇಟು ಕೊಡಬೇಕು

- ದೇಶದ ಭದ್ರತೆ, ಆತ್ಮಗೌರವವನ್ನು ನಾವು ರಕ್ಷಿಸಿಕೊಳ್ಳಬೇಕು. ಸರ್ಕಾರಗಳು ಅಂತಹ ಪರಿಸ್ಥಿತಿ ನಿರ್ವಹಿಸುತ್ತವೆ

- ಆದರೆ ಅದೇ ವೇಳೆ ಮಾತುಕತೆಯ ಬಾಗಿಲನ್ನು ನಾವು ಮುಚ್ಚಬಾರದು. ಜನರು- ಜನರ ನಡುವೆ ಸಂಪರ್ಕ ಬೇಕು

- ಪಾಕಿಸ್ತಾನದ ಮಿಲಿಟರಿ, ಸೇನಾ ನಾಯಕತ್ವದ ಬಗ್ಗೆ ಭಾರತಕ್ಕೆ ವಿಶ್ವಾಸವಿಲ್ಲ. ನಾಗರಿಕ ಸಮಾಜ ಮುಂದೆ ಬರಲಿ