ಇಂಧನ ಬಳಕೆ ಕಡಿಮೆ ಮಾಡುವ ಬಗ್ಗೆ ಪ್ರಧಾನಿ ಮೋದಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಪೆಟ್ರೋಲ್‌, ಡೀಸೆಲ್‌ ಅಭಾವ ಮರುಕಳಿಸಿದೆ. ನಗರದ ಕೆಲ ಪೆಟ್ರೋಲ್‌ ಬಂಕ್‌ಗಳು ಬಂದ್‌ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಬೆಂಗಳೂರು : ಇಂಧನ ಬಳಕೆ ಕಡಿಮೆ ಮಾಡುವ ಬಗ್ಗೆ ಪ್ರಧಾನಿ ಮೋದಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಪೆಟ್ರೋಲ್‌, ಡೀಸೆಲ್‌ ಅಭಾವ ಮರುಕಳಿಸಿದೆ. ನಗರದ ಕೆಲ ಪೆಟ್ರೋಲ್‌ ಬಂಕ್‌ಗಳು ಬಂದ್‌ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಅಲ್ಲದೆ, ಜಾಗತಿಕ ಸಂಘರ್ಷ ಹಿನ್ನೆಲೆಯಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಹೀಗಾಗಿ ಅನಗತ್ಯವಾಗಿ ಹೆಚ್ಚು ಇಂಧನ ಖರೀದಿಸದಂತೆ ಮತ್ತು ಇಂಧನ ಉಳಿತಾಯ ಮಾಡುವಂತೆ ಈ ಹಿಂದೆಯೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು ಮಾರ್ಗಸೂಚಿಗಳನ್ನು ಕೂಡ ಹೊರಡಿಸಿದೆ.

ನಗರದ ಲಗ್ಗೆರೆ, ಬಸವೇಶ್ವರ ನಗರ, ಶೇಷಾದ್ರಿಪುರಂ, ಮಾಗಡಿ ರಸ್ತೆ ಸೇರಿ ವಿವಿಧೆಡೆ ಕಳೆದೆರಡು ದಿನಗಳಿಂದ ಪೆಟ್ರೋಲ್‌ ಸರಬರಾಜಾಗದೆ, ಪೆಟ್ರೋಲ್‌ ಬಂಕ್‌ಗಳು ಬಂದ್‌ ಆಗಿವೆ. ಇನ್ನು ಕೆಲ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಖಾಲಿಯಾಗಲಿದ್ದು, ಸಂಜೆ ವೇಳೆಗೆ ಬಂಕ್‌ಗಳು ಬಂದ್‌ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಸನವೇಶ್ವರ ನಗರದ ಶಂಕರಮಠದ ಎಚ್‌ಪಿ ಪೆಟ್ರೋಲ್‌ ಬಂಕ್‌ ಬಂದ್‌ ಆಗಿದ್ದು, ಎರಡು ದಿನಗಳಿಂದ ಪೆಟ್ರೋಲ್‌ ಸರಬರಾಜಾಗಿಲ್ಲ. ಕಾರುಗಳು, ಬೈಕ್‌ ಗಳು ಸೇರಿ ವಿವಿಧ ವಾಹನಗಳು ಬಂಕ್‌ ವರೆಗೂ ಬಂದು ಬಂದ್‌ ಆಗಿರುವ ಬೋರ್ಡ್‌ ನೋಡಿಕೊಂಡು ನಿರಾಸೆಯಿಂದ ಹಿಂದಿರುಗುತ್ತಿವ ದೃಶ್ಯ ಕಂಡುಬಂತು. ಅದೇ ರೀತಿ ಮಾಗಡಿ ರಸ್ತೆಯಲ್ಲಿರುವ ಎರಡು ಪ್ರತ್ಯೇಕ ಕಂಪನಿಗಳ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌ ಡೀಸೆಲ್‌ ಅಭಾವದಿಂದ ಮುಚ್ಚಲಾಗಿದೆ.

ಇನ್ನು ಲಗ್ಗೆರೆಯಲ್ಲಿ ಪೆಟ್ರೋಲ್‌ಗೆಂದು ಬಂದ ಬೈಕ್‌ ಸವಾರ, ಬಂಕ್ ಬಂದಾಗಿದ್ದರಿಂದ ಸುಮಾರು ಒಂದು ಕಿ.ಮೀ. ನಡೆದುಕೊಂಡು ಹೋಗಿ ಬಾಟಲಿಯಲ್ಲಿ ಪೆಟ್ರೋಲ್‌ ತುಂಬಿಸಿಕೊಂಡು ಬಂದ ಘಟನೆಯೂ ನಡೆಯಿತು. ಭಾನುವಾರದಿಂದಲೇ ಲಗ್ಗೆರೆಯ ಬಂಕ್‌ನಲ್ಲಿ ಪೆಟ್ರೋಲ್‌ ಖಾಲಿಯಾಗಿದೆ. ಅದೇ ರೀತಿ ಶೇಷಾದ್ರಿಪುರಂನ ರೈಲ್ವೆ ಅಂಡರ್‌ ಬ್ರಿಡ್ಜ್‌ ಸಮೀಪವಿರುವ ಪೆಟ್ರೋಲ್‌ ಬಂಕ್‌ನಲ್ಲಿ ಸೋಮವಾರ ಸಂಜೆಯೇ ಪೆಟ್ರೋಲ್‌ ಖಾಲಿಯಾಗಿದ್ದು ಬಂದ್‌ ಮಾಡಲಾಗಿತ್ತು.

ಆಟೋ ಗ್ಯಾಸ್‌ ಅಭಾವ ಇಳಿಕೆ:

ನಗರದಲ್ಲಿ ಆಟೋ ಚಾಲಕರು ಗ್ಯಾಸ್ ಬಂಕ್‌ಗಳ ಮುಂದೆ ಗಂಟೆಗಟ್ಟಲೇ ಕ್ಯೂ ನಿಲ್ಲುವುದು ಬಹುತೇಕ ಕಡಿಮೆಯಾಗಿದೆ. ಆದರೆ, ಇನ್ನೂ ಶೇ.20ರಷ್ಟು ಕೊರತೆಯಿದೆ. ಸರ್ಕಾರಿ ಬಂಕ್‌ಗಳು ಹೊರತುಪಡಿಸಿ, ಖಾಸಗಿ ಗ್ಯಾಸ್‌ ಏಜನ್ಸಿಗಳು ಬಂದ್‌ ಆಗಿವೆ. ಸದ್ಯಕ್ಕೆ ಆಟೋ ಗ್ಯಾಸ್‌ ಸಮಸ್ಯೆ ಹೆಚ್ಚಿನ ಪರಿಣಾಮ ಬೀರಿಲ್ಲ. ಮುಂದೆ ಪೆಟ್ರೋಲ್‌ ಸಮಸ್ಯೆ ಉಲ್ಭಣಿಸಿದರೆ, ಗ್ಯಾಸ್‌ ಅಭಾವವೂ ತಲೆದೋರುವ ಸಾಧ್ಯತೆ ಇದೆ ಎನ್ನುತ್ತಾರೆ ಆದರ್ಶ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್‌.

ಪೆಟ್ರೋಲ್‌ ಬಂಕ್‌ಗಳಿಗೆ ಮಾರ್ಗಸೂಚಿ

ಪೆಟ್ರೋಲ್ ಬಂಕ್ ಗಳಿಗೆ ಮಾರ್ಚ್‌ನಲ್ಲೇ ಪೆಟ್ರೋಲ್‌ ಅಭಾವ ನಿರ್ವಹಣೆಗೆ ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಾರ್ಗಸೂಚಿ ಹೊರಟಿಸಿತ್ತು. ವಾಹನಗಳಿಗೆ ಅಥವಾ ಅಧಿಕೃತ ಕಂಟೇನರ್‌ಗಳಿಗೆ ಗರಿಷ್ಠ ಮಿತಿ 200 ಲೀಟರ್‌ ಇಂಧನ ಪೂರೈಕೆ ಮಾಡಬೇಕು. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಟ್ಯಾಂಕ್‌ಗಳಿಗೆ ಮಾತ್ರ ಪೂರೈಸಬೇಕು. ಬಾಟಲ್‌ಗಳು, ಕ್ಯಾನ್‌ಗಳು ಮತ್ತು ಇನ್ನಿತರೆ ಯಾವುದೇ ಕಂಟೇನರ್‌ಗಳಿಗೆ ಪೂರೈಸುವಂತಿಲ್ಲ. ಬಂಕ್‌ಗಳು ಬಲ್ಕ್ ಮಾದರಿಯಲ್ಲಿ, ನಿಯಮ ಉಲ್ಲಂಘಿಸಿ ಇಂಧನ ಪೂರೈಕೆ ಮಾಡಬಾರದು ಎಂಬಿತ್ಯಾದಿ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಇದೇ ಮಾರ್ಗಸೂಚಿ ಅನುಸರಿಸುವುದು ಅನಿವಾರ್ಯ.