ಇಸ್ಲಾಮಾಬಾದ್‌: ಮಧ್ಯಪ್ರಾಚ್ಯ ಸಂಘರ್ಷದಿಂದ ಎದುರಾದ ತೈಲ ಬಿಕ್ಕಟ್ಟು ನಿರ್ವಹಣೆ ಕುರಿತು ಭಾರತ ಸರ್ಕಾರದ ವಿರುದ್ಧ ಭಾರತದ ವಿಪಕ್ಷಗಳು ಕಿಡಿಕಾರುತ್ತಿದ್ದರೆ, ಅತ್ತ ಭಾರತದ ತೈಲ ಸಂಗ್ರಹಣಾ ಸಾಮರ್ಥ್ಯವನ್ನು ಪಾಕಿಸ್ತಾನದ ಪೆಟ್ರೋಲಿಯಂ ಖಾತೆ ಸಚಿವ ಅಲಿ ಮಲಿಕ್‌ ಹಾಡಿ ಹೊಗಳಿದ್ದಾರೆ. ಜೊತೆಗೆ ನಮ್ಮ ದೇಶದಲ್ಲಿ ಕನಿಷ್ಠ ಒಂದು ದಿನದ ಅಗತ್ಯ ಪೂರೈಸುವ ಪ್ರಮಾಣದ ವ್ಯೂಹಾತ್ಮಕ ತೈಲ ಸಂಗ್ರಹಾಗಾರವೂ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಮಾ ಟೀವಿಗೆ ನೀಡಿದ ಸಂದರ್ಶನದಲ್ಲಿ ದೇಶದ ತೈಲ ಬಿಕ್ಕಟ್ಟಿನ ಕುರಿತು ಬೆಳಕು ಚೆಲ್ಲಿರುವ ಅಲಿ, ‘ನಮ್ಮ ದೇಶದಲ್ಲೀಗ ದೇಶದ 5-7 ದಿನಗಳ ಅಗತ್ಯ ಪೂರೈಸಬಹುದಾದ ವಾಣಿಜ್ಯ ಕಚ್ಚಾತೈಲ ಮಾತ್ರ ಇದೆ. ತೈಲ ಮಾರಾಟ ಕಂಪನಿಗಳ ಬಳಿಯೂ ಕೇವಲ 20-21 ದಿನಗಳ ಅಗತ್ಯ ಪೂರೈಸುವ ತೈಲ ಸಂಗ್ರಹವಿದೆ. ನಮ್ಮ ಬಳಿ ಕನಿಷ್ಠ ಒಂದು ದಿನ ಅಗತ್ಯ ಪೂರೈಸಬಹುದಾದ ಯಾವುದೇ ವ್ಯೂಹಾತ್ಮಕ ತೈಲ ಸಂಗ್ರಹಾಗಾರವೇ ಇಲ್ಲ’ ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತದ ವ್ಯೂಹಾತ್ಮಕ ತೈಲ ಸಂಗ್ರಹಾಗಾರ ಸಾಮರ್ಥ್ಯದ ಬಗ್ಗೆ ಮಾತನಾಡಿರುವ ಅಲಿ, ‘ಭಾರತದ ಬಳಿ 60-70 ದಿನಗಳ ಬೇಡಿಕೆ ಪೂರೈಸುವಷ್ಟು ಕಚ್ಚಾತೈಲ ಸಂಗ್ರಹವಿದೆ. ಒಂದು ಸಹಿ ಬಿದ್ದರೆ ಅಷ್ಟೂ ತೈಲ ಮಾರುಕಟ್ಟೆಗೆ ಬಿಡುಗಡೆಯಾಗುತ್ತದೆ’ ಎಂದು ಹೇಳಿದ್ದಾರೆ.


ವ್ಯೂಹಾತ್ಮಕ ಸಂಗ್ರಹಾಗಾರ:

ದೈನಂದಿನ ಬೇಡಿಕೆ ಹೊರತಾಗಿ, ಜಾಗತಿಕ ಬಿಕ್ಕಟ್ಟು, ತೈಲ ಪೂರೈಕೆ ಕೊರತೆ ಸಂದರ್ಭದಲ್ಲಿ ವಿದೇಶಗಳಿಂದ ತೈಲ ಪೂರೈಕೆ ಆಗದೇ ಇದ್ದರೂ ಆ ಪರಿಸ್ಥಿತಿ ಎದುರಿಸಲು ಪ್ರತಿ ದೇಶ ಪ್ರತ್ಯೇಕವಾಗಿ ಭೂಗತ ತೈಲ ಸಂಗ್ರಹಾಗಾರ ನಿರ್ಮಿಸಿಕೊಳ್ಳುತ್ತವೆ. ಅಗತ್ಯ ಬಿದ್ದಾಗ ಅದರಿಂದ ತೈಲ ಹೊರತೆಗೆದು ಬಳಸಿಕೊಳ್ಳುತ್ತವೆ. ಪ್ರಸಕ್ತ ಭಾರತದಲ್ಲಿ ಕರ್ನಾಟಕದ ಮಂಗಳೂರು, ಪಾದೂರು, ವಿಶಾಖಪಟ್ಟಣದಲ್ಲಿ ಬೃಹತ್‌ ಭೂಗತ ತೈಲ ಸಂಗ್ರಹಾಗಾರವಿದೆ. ಇವುಗಳ ಸಂಗ್ರಹ ಸಾಮರ್ಥ್ಯ 53.3 ಲಕ್ಷ ಮೆಟ್ರಿಕ್‌ ಟನ್‌ನಷ್ಟಿದೆ ಅಂದರೆ 36.92 ದಶಲಕ್ಷ ಬ್ಯಾರೆಲ್‌. ಇದು ದೇಶದ 60- 70 ದಿನಳ ಬೇಡಿಕೆ ಪೂರೈಸಬಲ್ಲದು.

- ವಿದೇಶಗಳಿಂದ ತೈಲ ಪೂರೈಕೆ ನಿಂತಾಗ ತೈಲ ಸಂಗ್ರಹಾಗಾರಗಳಲ್ಲಿನ ತೈಲ ಬಳಕೆ

- ಭಾರತದಲ್ಲಿ ಮಂಗಳೂರು, ಪಾದೂರು, ವಿಶಾಖಪಟ್ಟಣದಲ್ಲಿ ಬೃಹತ್‌ ತೈಲ ಸಂಗ್ರಹಾಗಾರ

- ಇಲ್ಲಿನ ಸಂಗ್ರಹಾಗಾರಗಳಲ್ಲಿ ಭಾರತಕ್ಕೆ ಸುಮಾರು 60-70 ದಿನಕ್ಕೆ ಆಗುಷ್ಟು ತೈಲ ಸ್ಟಾಕ್‌

- ಇವುಗಳ ಸಂಗ್ರಹ ಸಾಮರ್ಥ್ಯ 53.3 ಲಕ್ಷ ಮೆಟ್ರಿಕ್‌ ಟನ್‌. ಅಂದರೆ 36.92 ದಶಲಕ್ಷ ಬ್ಯಾರೆಲ್‌.

- ಆದರೆ ಪಾಕಿಸ್ತಾನದಲ್ಲಿ ಇಂಥ ಸ್ಟಾಕ್‌ ಇಲ್ಲ. ವಿದೇಶಿ ತೈಲ ಪೂರೈತೆ ನಿಂತರೆ ಆತಂಕ ಸ್ಥಿತಿ

- ಭಾರತದ ಪರಿಸ್ಥಿತಿಗೆ ತುಲನೆ ಮಾಡಿ ಪಾಕಿಸ್ತಾನದ ಸ್ಥಿತಿ ವಿವರಿಸಿದ ಅಲ್ಲಿನ ತೈಲ ಸಚಿವ