ಕಳೆದ ವರ್ಷದ ಅತಿಥಿ ಉಪನ್ಯಾಸಕರನ್ನೇ ಸದ್ಯ ಮುಂದುವರೆಸಲು ಸರ್ಕಾರ ಆದೇಶ

| N/A | Published : Sep 30 2025, 11:16 AM IST

vidhan soudha
ಕಳೆದ ವರ್ಷದ ಅತಿಥಿ ಉಪನ್ಯಾಸಕರನ್ನೇ ಸದ್ಯ ಮುಂದುವರೆಸಲು ಸರ್ಕಾರ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಕ್ಕೆ ಎದುರಾಗಿರುವ ಕಾನೂನು ಕಗ್ಗಂಟು ಬಗೆಹರಿಯುವವರೆಗೆ ಕಳೆದ ವರ್ಷ ಕಾರ್ಯನಿರ್ವಹಿಸಿದ್ದ ಅತಿಥಿ ಉಪನ್ಯಾಸಕರನ್ನೇ 2025-26ನೇ ಸಾಲಿನ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ ಮುಂದುವರಿಸಲು ಸರ್ಕಾರ ಅನುಮತಿ ನೀಡಿದೆ.

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಕ್ಕೆ ಎದುರಾಗಿರುವ ಕಾನೂನು ಕಗ್ಗಂಟು ಬಗೆಹರಿಯುವವರೆಗೆ ಕಳೆದ ವರ್ಷ ಕಾರ್ಯನಿರ್ವಹಿಸಿದ್ದ ಅತಿಥಿ ಉಪನ್ಯಾಸಕರನ್ನೇ 2025-26ನೇ ಸಾಲಿನ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ ಮುಂದುವರಿಸಲು ಸರ್ಕಾರ ಅನುಮತಿ ನೀಡಿದೆ. 

ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರು ನೀಡಿರುವ ಕಾನೂನು ಅಭಿಪ್ರಾಯದಂತೆ ಸೆ.9ರಂದು ನೀಡಿರುವ ಮಧ್ಯಂತರ ಆದೇಶಕ್ಕೆ ಒಳಪಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2024-25ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಅತಿಥಿ ಉಪನ್ಯಾಸಕರನ್ನೇ ತಾತ್ಕಾಲಿಕವಾಗಿ ಈ ಸಾಲಿನ ಹಾಲಿ ಸೆಮಿಸ್ಟರ್‌ ಪೂರ್ಣಗೊಳ್ಳುವವರೆಗೆ ಮುಂದುವರೆಸಲು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಬಿ.ಎಸ್. ಅವರು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ ಅವರಿಗೆ ಬರೆದಿರುವ ಪತ್ರದಲ್ಲಿ ಸೂಚನೆ ನೀಡಿದ್ದಾರೆ.

ಈ ರೀತಿ ಕಳೆದ ವರ್ಷದ ಅತಿಥಿ ಉಪನ್ಯಾಸಕರ ಮುಂದುವರಿಕೆ ನಂತರವೂ ಹೆಚ್ಚುವರಿ ಕಾರ್ಯಭಾರ ಕಂಡು ಬಂದಲ್ಲಿ ಅಂತಹ ಕಾರ್ಯಭಾರಕ್ಕೆ ಎದುರಾಗಿ ನ್ಯಾಯಾಲಯದ ಮಧ್ಯಂತರ ಆದೇಶದ ಅನುಸಾರ ಪ್ರಸ್ತುತ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರನ್ನಾಗಿ ಆಯ್ಕೆ ಮಾಡಿಕೊಳ್ಳಲು ಅನುಮತಿಸಲಾಗಿದೆ.

ಕಳೆದ ವರ್ಷ ಸುಮಾರು 10,500 ಅತಿಥಿ ಉಪನ್ಯಾಸಕರನ್ನು ಉನ್ನತ ಶಿಕ್ಷಣ ಇಲಾಖೆಯು ನೇಮಕ ಮಾಡಿಕೊಂಡಿತ್ತು. ಅವರ ಕರ್ತವ್ಯದ ಅವಧಿಯು ಇದೇ ಆ.2ಕ್ಕೆ ಕೊನೆಯಾಗಿತ್ತು. ಆಗಸ್ಟ್‌ನಲ್ಲಿ ಕಾಲೇಜು ಆರಂಭವಾದ ಬಳಿಕ ಎರಡು ತಿಂಗಳಿನಿಂದ ಉಪನ್ಯಾಸಕರಿಲ್ಲದೆ ತರಗತಿಗಳು ನಡೆಯದಿರುವ ಕಾರಣ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದ್ದರು.

Read more Articles on