ಹೊಸಕೋಟೆ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದರ ಜೊತೆಗೆ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಸಹ ನಿರಂತರವಾಗಿ ಮಾಡುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು

ಹೊಸಕೋಟೆ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದರ ಜೊತೆಗೆ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಸಹ ನಿರಂತರವಾಗಿ ಮಾಡುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕಿನ ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಮದಲ್ಲಿ ೨೫ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಗ್ರಾಮಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ದೃಷ್ಠಿಯಿಂದ ಮುಖ್ಯಮಂತ್ರಿಗಳ ವಿಶೇಷ ಅನುದಾನ ಒದಗಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ನಂದಗುಡಿ ಹೋಬಳಿಯ ಇಟ್ಟಸಂದ್ರ, ಈಸ್ತೂರು, ವಡ್ಡಹಳ್ಳಿ, ನಂದಗುಡಿ, ಎನ್.ಹೊಸಹಳ್ಳಿ ಗ್ರಾಮಗಳಲ್ಲಿ ೧.೫ ಕೋಟಿಗೂ ಅಧಿಕ ಅನುದಾನ ನೀಡಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಗೋಪಾಲ್ ಮಾತನಾಡಿ, ಇಟ್ಟಸಂದ್ರದಲ್ಲಿ ಶಾಸಕರ ಅನುದಾನದ ಜೊತೆಗೆ ಗ್ರಾಪಂ ಸದಸ್ಯರು ಕೂಡ ಸಹಕರಿಸಿ ಮಾದರಿ ಗ್ರಾಮವಾಗಿ ಅಭಿವೃದ್ದಿ ಮಾಡಿದ್ದಾರೆ. ಶಾಸಕರು ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಕೊಟ್ಟು ರಸ್ತೆ ಕಾಮಗಾರಿ ಮಾಡುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರು ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿವಿ.ರಾಜಶೇಖರ್‌ಗೌಡ, ಗ್ರಾಪಂ ಮಾಜಿ ಸದಸ್ಯರಾದ ರಮೇಶ್, ಬಿಂದು ದೇವೇಗೌಡ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

ಫೋಟೋ: 1 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ಇಟ್ಟಸಂದ್ರ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ, ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ಭೂಮಿಪೂಜೆ ನೆರವೇರಿಸಿದರು.