ಬೆಂಗಳೂರು : ಹೈಕೋರ್ಟ್‌ ಕಲಾಪಗಳ ನೇರ ಪ್ರಸಾರ ನಿರ್ಬಂಧಿಸುವಂತೆ ಕೋರಿ ಮುಖ್ಯ ನ್ಯಾಯಮೂರ್ತಿಗೆ ಪತ್ರ

| Published : Sep 21 2024, 09:39 AM IST

Supreme Court Recruitment

ಸಾರಾಂಶ

  ಬೆಂಗಳೂರು ವಕೀಲರ ಸಂಘ (ಎಎಬಿ), ಕೆಲವು ದಿನಗಳ ಕಾಲ ಹೈಕೋರ್ಟ್‌ ಕಲಾಪಗಳ ನೇರ ಪ್ರಸಾರ ನಿರ್ಬಂಧಿಸುವಂತೆ ಕೋರಿ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದೆ.

ಬೆಂಗಳೂರು : ಹೈಕೋರ್ಟ್‌ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ಮುಸ್ಲಿಮರು ಮತ್ತು ಮಹಿಳಾ ವಕೀಲರೊಬ್ಬರ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಂಭೀರವಾಗಿ ಆಕ್ಷೇಪಿಸಿರುವ ಬೆಂಗಳೂರು ವಕೀಲರ ಸಂಘ (ಎಎಬಿ), ಕೆಲವು ದಿನಗಳ ಕಾಲ ಹೈಕೋರ್ಟ್‌ ಕಲಾಪಗಳ ನೇರ ಪ್ರಸಾರ ನಿರ್ಬಂಧಿಸುವಂತೆ ಕೋರಿ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದೆ.

ಈ ಕುರಿತು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಎನ್‌.ವಿ ಅಂಜಾರಿಯಾ ಅವರಿಗೆ ಪತ್ರ ಬರೆದಿರುವ ಸಂಘ, ಇತ್ತೀಚೆಗೆ ಹೈಕೋರ್ಟ್‌ ಕಲಾಪದ ವಿಚಾರಣೆಯ ವೇಳೆ ನ್ಯಾ.ಶ್ರೀಶಾನಂದ ಅವರು ವ್ಯಕ್ತಪಡಿಸಿದ ಅಭಿಪ್ರಾಯ ಗಂಭೀರ ವಿವಾದ ಸೃಷ್ಟಿಸಿ ರಾಷ್ಟ್ರದಾದ್ಯಂತ ಸುದ್ದಿಯಾಗಿದೆ. ಕಲಾಪದ ನೇರ ಪ್ರಸಾರವಾಗಿದ್ದು, ವಿಚಾರಣೆ ವೇಳೆ ನ್ಯಾಯಮೂರ್ತಿಗಳು ನೀಡಿರುವ ಹೇಳಿಕೆಯು ವೈರಲ್‌ ಆಗಿದೆ. ಇದರಿಂದ ವಕೀಲ ವೃತ್ತಿಯನ್ನು ಪರಿಶುದ್ಧ ಎಂದು ಪರಿಗಣಿಸಿರುವ ಎಲ್ಲ ವಕೀಲರ ಭಾವನೆಗಳಿಗೂ ನೋವುಂಟು ಮಾಡಿದೆ. ಇಂತಹ ಹೇಳಿಕೆಗಳಿಗೆ ವಕೀಲರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಪತ್ರದಲ್ಲಿ ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಕಾರ್ಯದರ್ಶಿ ಟಿ ಜಿ ರವಿ ಮತ್ತು ಖಜಾಂಚಿ ಎಂ ಟಿ ಹರೀಶ್‌ ತಿಳಿಸಿದ್ದಾರೆ.

ನ್ಯಾಯಮೂರ್ತಿ ಶ್ರೀಶಾನಂದ ಅವರು ಉತ್ತಮ ತೀರ್ಪುಗಳನ್ನು ನೀಡಿದ್ದಾರೆ. ಪ್ರಾಮಾಣಿಕತೆಗೆ ಅವರು ಹೆಸರಾಗಿದ್ದಾರೆ. ಆಕ್ಷೇಪಾರ್ಹವಾದ ಹೇಳಿಕೆಗಳಿಂದ ನ್ಯಾಯಮೂರ್ತಿಗಳು ಮಾಡಿರುವ ಉತ್ತಮ ಕೆಲಸಗಳಿಗೆ ಅಪಚಾರ ಉಂಟಾಗುತ್ತಿದೆ. ಕೆಲವು ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಮತ್ತು ಮೂದಲಿಕೆಗಳು ಅಪ್ರಸ್ತುತವಾಗಿವೆ ಎಂದು ಪತ್ರದಲ್ಲಿ ವಕೀಲರ ಸಂಘ ಹೇಳಿದೆ.

ನ್ಯಾ. ಶ್ರೀಶಾನಂದ ಅವರು ಮಹಿಳಾ ವಕೀಲೆಯೊಬ್ಬರನ್ನು ಕುರಿತು ಈಚೆಗೆ ನೀಡಿರುವ ಹೇಳಿಕೆಯು ರಾಷ್ಟ್ರದ ಗಮನ ಸೆಳೆದಿದ್ದು, ಇದರಿಂದ ವಕೀಲರು ಅದರಲ್ಲೂ ಮಹಿಳಾ ವಕೀಲರನ್ನು ನ್ಯಾಯಮೂರ್ತಿಗಳು ನಡೆಸಿಕೊಳ್ಳುತ್ತಿರುವ ಮಹತ್ತರವಾದ ವಿಚಾರವನ್ನು ಮುನ್ನೆಲೆಗೆ ತಂದಿದೆ. ಹಾಗಾಗಿ, ಮುಕ್ತ ನ್ಯಾಯಾಲಯದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವವರೆಗೆ ಅಂತಹ ನ್ಯಾಯಾಲಯಗಳ ನೇರ ಪ್ರಸಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ಕೈಮೀರಲಿದೆ. ಸಾರ್ವಜನಿಕರ ಮನಸ್ಸಿನಲ್ಲಿ ನ್ಯಾಯಾಲಯಗಳ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಈ ಕುರಿತು ತುರ್ತಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಆಶಾಭಾವನೆ ಹೊಂದಲಾಗಿದೆ ಎಂದು ಪತ್ರದಲ್ಲಿ ಸಂಘ ಹೇಳಿದೆ.