ಸಾರಾಂಶ
ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಸೇರಿದ ನಗರದ ವಿವಿಧ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿದರು.
ಬೆಂಗಳೂರು : ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಸೇರಿದ ನಗರದ ವಿವಿಧ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿದರು.
ಬೆಂಗಳೂರು ನಗರ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ವಾಯು ಹಾಗೂ ಜಲ ಕಾಯ್ದೆಗಳ ಉಲ್ಲಂಘನೆ, ಕರ್ತವ್ಯ ಲೋಪ, ದುರಾಡಳಿತ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಸಂಬಂಧ ಕೆಎಸ್‌ಪಿಸಿಬಿ ಅಧಿಕಾರಿ/ನೌಕರರ ವಿರುದ್ಧ ಹಲವು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ಸೂಚನೆ ಮೇರೆಗೆ ಲೋಕಾಯುಕ್ತ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ತನಿಖೆ ಭಾಗವಾಗಿ ಬುಧವಾರ ಎಂ.ಜಿ.ರಸ್ತೆಯ ಕೆಎಸ್‌ಪಿಸಿಬಿ ಮುಖ್ಯ ಕಚೇರಿ, ಬಸವೇಶ್ವರನಗರ, ಪೀಣ್ಯ ಕೈಗಾರಿಕಾ ಪ್ರದೇಶದ ವಲಯ ಕಚೇರಿಗಳ ಮೇಲೆ ನ್ಯಾಯಾಂಗ ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ 27 ತಂಡಗಳು ಏಕಕಾಲಕ್ಕೆ ದಾಳಿ ನಡೆಸಿವೆ. ಪರಿಶೀಲನೆ ವೇಳೆ ಕೆಎಸ್‌ಪಿಸಿಬಿ ಮುಖ್ಯ ಕಚೇರಿ ಹಾಗೂ ವಲಯ ಕಚೇರಿಗಳಲ್ಲಿ ಹಲವು ನ್ಯೂನತೆಗಳು ಕಂಡು ಬಂದಿವೆ.
ಖುದ್ದು ನ್ಯಾಯಮೂರ್ತಿ ಪರಿಶೀಲನೆ:
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಖುದ್ದು ಕೆಎಸ್‌ಪಿಸಿಬಿ ಮುಖ್ಯ ಕಚೇರಿಗೆ ತೆರಳಿ ಪರಿಶೀಲಿಸಿದರು. ಅಧಿಕಾರಿಗಳು/ನೌಕರರ ಚಲವಲನ ವಹಿ ಹಾಗೂ ನಗದು ಘೋಷಣಾ ವಹಿ ನಿರ್ವಹಿಸದಿರುವುದು ಕಂಡು ಬಂದಿದೆ. 2025-26ನೇ ಸಾಲಿನಲ್ಲಿ ವಾಯು ಹಾಗೂ ಕಾಯ್ದೆಗಳ ಉಲ್ಲಂಘನೆ ಸಂಬಂಧ ಸ್ವೀಕರಿಸಲಾದ ಅರ್ಜಿಗಳ ಬಗ್ಗೆ ಕೆಎಸ್‌ಪಿಸಿಬಿ ಕಾರ್ಯದರ್ಶಿಯಿಂದ ಮಾಹಿತಿ ಪಡೆದ ನ್ಯಾಯಮೂರ್ತಿಗಳು, ಪ್ರತಿ ಅರ್ಜಿ ವಿಲೇವಾರಿಗೆ ತೆಗೆದುಕೊಂಡು ಸಮಯ ಹಾಗೂ ಕ್ರಮವನ್ನು ವಿವರವಾಗಿ ಸಲ್ಲಿಸುವಂತೆ ಸೂಚಿಸಿದರು.
ಮಾಹಿತಿ ನೀಡಲು ಒದ್ದಾಟ:
ಸಕಾಲ ಕಾಯ್ದೆಯಡಿ ಸ್ವೀಕರಿಸಿರುವ ಅರ್ಜಿಗಳನ್ನು 100/120 ದಿನಗಳೊಳಗೆ ಇತ್ಯರ್ಥ ಪಡಿಸಬೇಕು. ಇತ್ಯರ್ಥ ಪಡಿಸದ ಅರ್ಜಿಗಳ ವಿವರಗಳನ್ನು ಕಾರಣ ಸಹಿತ ತಿಳಿಸಬೇಕು. ಮೈನಿಂಗ್ ಸಂಬಂಧ ಸ್ವೀಕರಿಸಲಾದ ಅರ್ಜಿಗಳು ಹಾಗೂ ಅವುಗಳ ವಿಲೇವಾರಿ ವಿವರಗಳನ್ನು ಸಲ್ಲಿಸುವಂತೆ ತಾಕೀತು ಮಾಡಿದರು. ಪ್ರಸಕ್ತ ಸಾಲಿನಲ್ಲಿ ವಾಯು ಮತ್ತು ಜಲ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಮುಚ್ಚಿರುವ ಕೈಗಾರಿಕಾ ಘಟಕಗಳ ವಿವರಗಳು ಹಾಗೂ ತಪಾಸಣೆ ನಡೆಸಿರುವ ಕೈಗಾರಿಗಳ ವಿವರಗಳನ್ನು ಒದಗಿಸುವಂತೆ ಕೇಳಿದಾದ ಅಧಿಕಾರಿಗಳು ಮಾಹಿತಿ ನೀಡಲಾಗದೆ ಒದ್ದಾಡಿದರು.
ಚಳಿಬಿಡಿಸಿದ ಲೋಕಾ:
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿರುವ ಕೆರೆಗಳಿಗೆ ಹರಿಯುತ್ತಿರುವ ತ್ಯಾಜ್ಯ ನೀರನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ವಿವರಗಳು, ಬೆಂಗಳೂರು ನಗರದಲ್ಲಿ ಎಸ್‌ಟಿಪಿ ಸ್ಥಾಪಿಸದ ಆಪಾರ್ಟ್‌ಮೆಂಟ್‌ಗಳ ವಿವರ ಹಾಗೂ ಅವುಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಕೇಳಿದರು. ಮಾಹಿತಿ ನೀಡಲು ತಡಬಡಾಯಿಸಿದ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿಗಳು ಚಳಿ ಬಿಡಿಸಿದರು.
ಉಪ ಲೋಕಾಯುಕ್ತರ ನೇತೃತ್ವದಲ್ಲಿ ದಾಳಿ:
ಬಸವೇಶ್ವರನಗರದ ಕೆಎಸ್‌ಪಿಸಿಬಿ ವಲಯ ಕಚೇರಿ ಮೇಲೆ ಉಪ ಲೋಕಾಯುಕ್ತ ಬಿ.ವೀರಪ್ಪ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲಿಸಲಾಯಿತು. ಈ ವೇಳೆ ಹಲವು ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕಚೇರಿಯ ಹಾಜರಾತಿ ಪುಸ್ತಕದಲ್ಲಿ ಕೆಲವು ಸಿಬ್ಬಂದಿ ಸಹಿ ಮಾಡದಿರುವುದು, ಚಲನವಲ ವಹಿಯಲ್ಲಿ ಸಂಪೂರ್ಣ ಮಾಹಿತಿ ಇಲ್ಲದಿರುವುದು, ನಗದು ವಹಿಯಲ್ಲಿ ಕಚೇರಿಗೆ ಬಂದಾಗ ಮತ್ತು ಹೋದಾಗ ತಮ್ಮ ಬಳಿ ಇದ್ದ ನಗದು ಘೋಷಿಸದಿರುವುದು ಕಂಡು ಬಂದಿತು.
ಬ್ಯಾಂಕ್ ವಹಿವಾಟು ವರದಿಗೆ ಸೂಚನೆ:
ಅಧಿಕಾರಿ/ನೌಕರರ ಮೊಬೈಲ್‌ಗಳಲ್ಲಿನ ವಹಿವಾಟು ಪರಿಶೀಲಿಸಿದ ಉಪ ಲೋಕಾಯುಕ್ತರು, ಯುಪಿಐ ವಹಿವಾಟಿನಲ್ಲಿ ಅವರುಗಳ ವೇತನಕ್ಕಿಂತ ಅತಿ ಹೆಚ್ಚು ಆರ್ಥಿಕ ವಹಿವಾಟು ಮಾಡಿರುವ ಅಧಿಕಾರಿ/ಸಿಬ್ಬಂದಿಯ ಒಂದು ವರ್ಷದ ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ಹಾಗೂ ಯುಪಿಐ ಸ್ಟೇಟ್‌ಮೆಂಟ್‌ನೊಂದಿಗೆ ತಾಳೆ ಮಾಡಿ ವರದಿ ಸಲ್ಲಿಸಲು ಸೂಚಿಸಿದರು.
ರಾಜರಾಜೇಶ್ವರಿ ನಗರ ವಲಯದಲ್ಲಿನ ಕೆರೆಗಳು ಕಲುಷಿತಗೊಂಡಿದ್ದು, ಅವುಗಳ ಸುಧಾರಣೆಗೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಲಯದಲ್ಲಿ ಎಷ್ಟು ಕಾರ್ಖಾನೆಗಳು, ಆಸ್ಪತ್ರೆಗಳು ಅಪಾರ್ಟ್‌ಮೆಂಟ್‌ಗಳಿವೆ ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಲಾಗದೆ ಪೆಚ್ಚಾದರು. ಕೆರೆಗಳನ್ನು ಕಲುಷಿತಗೊಳಿಸುತ್ತಿರುವ ಕಾರ್ಖಾನೆಗಳು, ಆಸ್ಪತ್ರೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳನ್ನು ಗುರುತಿಸಲಾಗಿದೆಯೇ ಎಂಬ ಪ್ರಶ್ನೆಗೂ ಅಧಿಕಾರಿಗಳು ಉತ್ತರಿಸಲಾಗದೆ ತಲೆ ತಗ್ಗಿಸಿದರು. ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತರು ಕೆಂಡಮಂಡಲರಾದರು.
ವೃಷಭಾವತಿ ನದಿ ಬಗ್ಗೆ ಗೊಂದಲ:
ವೃಷಭಾವತಿ ನದಿಗೆ ಕಲುಷಿತ ನೀರು ಹರಿಯುತ್ತಿರುವ ಬಗ್ಗೆ ಯಾವುದಾದರೂ ಪ್ರಾಧಿಕಾರದ ವಿರುದ್ಧ ವರದಿ ಅಥವಾ ದೂರು ಸಲ್ಲಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅಧಿಕಾರಿಗಳು ಮಾಹಿತಿ ನೀಡಲಿಲ್ಲ. ಈ ನದಿಯ ಬಫರ್ ವಲಯದಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗಿದೆಯೇ ಎಂಬ ಪ್ರಶ್ನೆಗೂ ಅಧಿಕಾರಿಗಳು ನಿರುತ್ತರರಾದರು. ವಾಯು ಮತ್ತು ಶಬ್ಧ ಮಾಲಿನ್ಯ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಒದಗಿಸಲು ವಿಫಲರಾದರು.
ಲೋಕಾಯುಕ್ತ ಐಜಿಪಿ ನೇತೃತ್ವದಲ್ಲಿ ದಾಳಿ:
ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರ ರಾವ್ ಅವರ ನೇತೃತ್ವದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದ ಕೆಎಸ್‌ಪಿಸಿಬಿ ವಲಯ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲಿಸಲಾಯಿತು. ಈ ವೇಳೆಯೂ ಹಲವು ಲೋಪ-ದೋಷಗಳು ಕಂಡು ಬಂದವು. ಈ ಬಗ್ಗೆ ವಿಸ್ತೃತ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
;Resize=(690,390))
)
)
;Resize=(128,128))
;Resize=(128,128))
;Resize=(128,128))