ಜೂ.24ಕ್ಕೆ 8 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ

| Published : Jun 20 2024, 11:13 AM IST

tamilnadu rain

ಸಾರಾಂಶ

ರಾಜ್ಯದಲ್ಲಿ ಜೂನ್‌ 24ರಂದು ಎಂಟು ಜಿಲ್ಲೆಗಳಲ್ಲಿ ಅತೀ ಭಾರೀ ಮಳೆ ಸುರಿಯುವ ಲಕ್ಷಣ ಇರುವುದರಿಂದ ‘ರೆಡ್‌ ಅಲರ್ಟ್‌’ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಂಗಳೂರು:  ರಾಜ್ಯದಲ್ಲಿ ಜೂನ್‌ 24ರಂದು ಎಂಟು ಜಿಲ್ಲೆಗಳಲ್ಲಿ ಅತೀ ಭಾರೀ ಮಳೆ ಸುರಿಯುವ ಲಕ್ಷಣ ಇರುವುದರಿಂದ ‘ರೆಡ್‌ ಅಲರ್ಟ್‌’ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಜೂನ್‌ 22 ರಿಂದ ಮಳೆಯ ಅಬ್ಬರ ಇನ್ನಷ್ಟು ಹೆಚ್ಚಾಗಲಿದೆ. ಜೂನ್‌ 24ರ ವರೆಗೆ ದಕ್ಷಿಣ ಒಳನಾಡು, ಉತ್ತರ ಒಳನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಜೂನ್‌ 22ರಂದು ಕರಾವಳಿಯ ಮೂರು ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಟ್‌’, ಜೂನ್‌ 23ರಂದು ಕರಾವಳಿಯ ಮೂರು ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ ಜಿಲ್ಲೆಗೆ ‘ಆರೆಂಜ್‌ ಅಲರ್ಟ್‌’ ಮತ್ತು ತುಮಕೂರು, ರಾಮನಗರ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಹಾವೇರಿ, ಧಾರವಾಡ ಹಾಗೂ ಬೀದರ್‌ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

ಜೂನ್‌ 24ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಶಿವಮೊಗ್ಗದಲ್ಲಿ 20 ಸೆಂ.ಮೀ. ಅಧಿಕ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ರೆಡ್‌ ಅಲರ್ಟ್‌’ ಮುನ್ಸೂಚನೆ ನೀಡಲಾಗಿದೆ. ಇದೇ ದಿನ ಮಂಡ್ಯ, ದಾವಣಗೆರೆ, ಚಾಮರಾಜನಗರ ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಟ್‌’ ಹಾಗೂ ಹಾವೇರಿ, ಚಿತ್ರದುರ್ಗ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.

ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿ ಪ್ರಕಾರ, ದಾವಣಗೆರೆ, ಪರುಶರಾಮಪುರದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಕುಮಟಾ 4, ಹೊನ್ನಾವರ, ಲೋಂಡಾ, ಕೂಡಲಸಂಗಮ, ಚಿಕ್ಕಬಳ್ಳಾಪುರ, ಎಚ್‌ಡಿ ಕೋಟೆಯಲ್ಲಿ ತಲಾ 3, ಕುಂದಾಪುರ, ಬೆಳ್ತಂಗಡಿ, ಅಂಕೋಲಾ, ಕೋಟ, ಶಿರಾಲಿ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.