ಸಾರಾಂಶ
ಕಳೆದ ಹದಿನೈದು ದಿನಗಳಿಂದ ಏರಿಕೆಯಲ್ಲಿದ್ದ ಟೊಮೆಟೋ ದರ ಇದೀಗ ಶತಕದ ಗಡಿ ದಾಟಿದೆ. ದುಬಾರಿಯಾಗೇ ಇದ್ದ ದಿನಬಳಕೆಯ ತರಕಾರಿಗಳು, ಸೊಪ್ಪಿನ ಬೆಲೆಯೀಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಮತ್ತಷ್ಟು ತುಟ್ಟಿಯಾಗಿದ್ದು, ಗ್ರಾಹಕರನ್ನು ಕಂಗೆಡಿಸಿವೆ.
ಬೆಂಗಳೂರು : ಕಳೆದ ಹದಿನೈದು ದಿನಗಳಿಂದ ಏರಿಕೆಯಲ್ಲಿದ್ದ ಟೊಮೆಟೋ ದರ ಇದೀಗ ಶತಕದ ಗಡಿ ದಾಟಿದೆ. ದುಬಾರಿಯಾಗೇ ಇದ್ದ ದಿನಬಳಕೆಯ ತರಕಾರಿಗಳು, ಸೊಪ್ಪಿನ ಬೆಲೆಯೀಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಮತ್ತಷ್ಟು ತುಟ್ಟಿಯಾಗಿದ್ದು, ಗ್ರಾಹಕರನ್ನು ಕಂಗೆಡಿಸಿವೆ.
ತಿಂಗಳ ಹಿಂದೆ ಬೆಳೆಗೆ ಹಾಯಿಸಲು ನೀರಿನ ಅಭಾವ, ವಿಪರೀತ ಬಿಸಿಲಿನ ವಾತಾವರಣದಿಂದ ಬಾಡುತ್ತಿದ್ದ, ಕಳೆದ ವಾರದ ಮಳೆ ಕಾರಣದಿಂದ ಕೊಳೆಯುತ್ತಿದ್ದ ಕಾರಣದಿಂದ ಈವರೆಗೆ ತರಕಾರಿಗಳ ದರ ಏರಿಕೆಯಾಗಿತ್ತು. ಆದರೆ, ಈಗ ಸರಕು ಸಾಗಣೆ ವೆಚ್ಚ ಹೆಚ್ಚಳ ಆಗುತ್ತಿರುವ ಕಾರಣ ತರಕಾರಿಗಳು ಇನ್ನಷ್ಟು ದುಬಾರಿಯಾಗುತ್ತಿವೆ.
ಬೆಂಗಳೂರು ಹಾಪ್‌ಕಾಮ್ಸ್‌ನಲ್ಲಿ ಟೊಮೆಟೋ ಬೆಲೆ ₹100 ದಾಟಿದೆ. ಮಾತ್ರವಲ್ಲದೇ ಮೈಸೂರು, ಶಿವಮೊಗ್ಗ, ಕಲಬುರ್ಗಿ ಸೇರಿದಂತೆ ರಾಜ್ಯದೆಲ್ಲೆಡೆ ಟೊಮೆಟೋ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಮೊದಲೇ ತರಕಾರಿಗಳ ಅಭಾವ ಮಾರುಕಟ್ಟೆಯನ್ನು ಕಾಡುತ್ತಿದೆ. ಮದುವೆ, ಗೃಹ ಪ್ರವೇಶ, ಧಾರ್ಮಿಕ ಕಾರ್ಯಕ್ರಮಗಳಿಗೆ, ಹೋಟೆಲ್‌ಗಳಿಂದ ಬೇಡಿಕೆ ಇರುವಷ್ಟು ಪೂರೈಕೆ ಆಗುತ್ತಿಲ್ಲ. ರಾಜ್ಯದಲ್ಲಿ ತರಕಾರಿ ಕೊರತೆ ಉಂಟಾಗಿದ್ದು, ಬಟಾಣಿ, ಟೊಮೆಟೋವನ್ನು ಹೊರ ರಾಜ್ಯಗಳಿಂದ ತರಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ.
ಸದ್ಯ ಬೆಂಗಳೂರು ಮಾರುಕಟ್ಟೆ ಟೊಮೆಟೋಗೆ ಮಹಾರಾಷ್ಟ್ರವನ್ನೇ ನೆಚ್ಚಿಕೊಂಡಿದೆ. ಮಂಡ್ಯ, ಮೈಸೂರು, ಮದ್ದೂರು, ಕನಕಪುರ ಬೆಲ್ಟ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಟೊಮೆಟೋ ಪ್ರಮಾಣ ಬಹುತೇಕ ಕುಸಿದಿದೆ. ಚಿಕ್ಕಮಗಳೂರು, ಕಡೂರು ಕಡೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಟೊಮೆಟೋ ಬರುತ್ತಿಲ್ಲ. ಇನ್ನು ಕೋಲಾರದಲ್ಲೂ ಮಳೆ, ರೋಗಬಾಧೆ ಪೂರೈಕೆ ಮುಕ್ಕಾಲು ಭಾಗದಷ್ಟು ಕಡಿಮೆಯಾಗಿದೆ.
ಈರುಳ್ಳಿ ದರ ಕೂಡ ಕಳೆದ ಎರಡು ವಾರದಿಂದ ಹೊಯ್ದಾಟದಲ್ಲಿದೆ. ಬಜ್ಜಿ ಮೆಣಸಿನಕಾಯಿ, ಬಿಳಿ ಬದನೆ, ನುಗ್ಗಿಕಾಯಿ, ನವಿಲುಕೋಸು ದರವೂ ಏರುಗತಿಯಲ್ಲೇ ಇದೆ. ಬೀನ್ಸ್ ಕಳೆದ ಹದಿನೈದು ದಿನಗಳಿಂದಲೂ ₹220 ಆಸುಪಾಸಿನಲ್ಲೇ ಇದೆ. ಉಳಿದಂತೆ ಕೊತ್ತಂಬರಿ ಸೊಪ್ಪು ಒಂದು ಕಂತೆಗೆ ₹100 ಮುಟ್ಟಿದೆ ಮೆಂತ್ಯೆ, ಪಾಲಕ್, ಬಸಳೆ, ಸಬ್ಬಸಗಿ ಸೊಪ್ಪುಗಳೆಲ್ಲ ಸಾಮಾನ್ಯ ದಿನಕ್ಕಿಂತ ₹40- ₹70ವರೆಗೂ ಬೆಲೆ ಹೆಚ್ಚಿಸಿಕೊಂಡಿವೆ.
---
ತರಕಾರಿ ದರ (ಹಾಪ್‌ಕಾಮ್ಸ್)
ಟೊಮೆಟೋ ₹103
ಬೀನ್ಸ್ ₹224
ಬಿಳಿ ಬದನೆ ₹100
ಬಜ್ಜಿ ಮೆಣಸಿನಕಾಯಿ ₹98
ಕ್ಯಾಪ್ಸಿಕಂ ₹116
ಮೂಲಂಗಿ ₹70
ನುಗ್ಗೇಕಾಯಿ ₹185
ಹೀರೇಕಾಯಿ ₹100
ಶುಂಠಿ ₹198
ಬೆಳ್ಳುಳ್ಳಿ ₹340
ಕೊತ್ತಂಬರಿ ₹20-30