ಸುಬ್ರಹ್ಮಣ್ಯ ಸೇರಿ 14 ದೇಗುಲ ಸೇವಾ ಶುಲ್ಕ ಏರಿಕೆ

| N/A | Published : Sep 20 2025, 08:12 AM IST

kukke subramanya

ಸಾರಾಂಶ

ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಮೇಲು ಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ, ಸೌತಡ್ಕ ಮಹಾಗಣತಿ ದೇವಾಲಯ, ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಾಲಯ ಸೇರಿ ಮುಜರಾಯಿ ಇಲಾಖೆ ವ್ಯಾಪ್ತಿಯ ರಾಜ್ಯದ 14 ದೇವಾಲಯಗಳ ಸೇವಾ ಶುಲ್ಕ ಹೆಚ್ಚಳ

  ಬೆಂಗಳೂರು :  ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಮೇಲು ಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ, ಸೌತಡ್ಕ ಮಹಾಗಣತಿ ದೇವಾಲಯ, ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಾಲಯ ಸೇರಿ ಮುಜರಾಯಿ ಇಲಾಖೆ ವ್ಯಾಪ್ತಿಯ ರಾಜ್ಯದ 14 ದೇವಾಲಯಗಳ ಸೇವಾ ಶುಲ್ಕ ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ಅ.1 ರಿಂದ ಜಾರಿಗೆ ಬರಲಿದೆ.

ಕಳೆದ ಐದು ವರ್ಷಗಳಿಂದ ಸೇವಾಶುಲ್ಕ ಪರಿಷ್ಕರಣೆ ಮಾಡದ ಹಾಗೂ ಪರಿಷ್ಕರಣೆಗೆ ಮನವಿ ಸಲ್ಲಿಸಿದ್ದ ದೇವಾಲಯಗಳ ಸೇವಾ ಶುಲ್ಕವನ್ನು ಆಗಮ ಪಂಡಿತರ ಪರಿಶೀಲನೆ ನಂತರ ಶೇ.5ರಿಂದ 10 ವರೆಗೆ ಮತ್ತು ಕೆಲ ದೇವಾಲಯಗಳಿಗೆ ಶೇ.15ರವರೆಗೆ ಶುಲ್ಕ ಏರಿಕೆ ಮಾಡಿ ಮುಜರಾಯಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಇದು ದೇವಾಲಯಗಳ ಆಡಳಿತ ಮಂಡಳಿ ತೀರ್ಮಾನವೇ ಹೊರತು ಸರ್ಕಾರದ ನಿರ್ಧಾರವಲ್ಲ. ಆಡಳಿತ ಮಂಡಳಿ ತೀರ್ಮಾನದ ಅನುಸಾರ ಇಲಾಖೆ ಆದೇಶ ಮಾಡಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ 2010ರಲ್ಲಿ ಸೇವಾಶುಲ್ಕ ಏರಿಕೆ ಮಾಡಲಾಗಿತ್ತು. 15 ವರ್ಷಗಳ ನಂತರ ಇದೀಗ ಸೇವಾಶುಲ್ಕ ಪರಿಷ್ಕರಿಸಲಾಗಿದೆ. ಇದರಿಂದ ಕುಕ್ಕೆಯಲ್ಲಿ ಆಶ್ಲೇಷ ಪೂಜೆ, ನಾಗರ ಪ್ರತಿಷ್ಠೆಗೆ ಇದ್ದ ತಲಾ 400 ರು. ಸೇವಾ ದರ 500 ರು.ಗೆ ಏರಿಕೆಯಾಗಿದೆ. ಹೀಗೆ ಉಳಿದ ಸೇವೆಗಳಲ್ಲೂ ದರ ಹೆಚ್ಚಳ ಮಾಡಲಾಗಿದೆ.

ಸೇವಾ ದರ ಏರಿಕೆ ಆದ ದೇವಸ್ಥಾನಗಳು:

ಬೆಂಗಳೂರು ನಗರದಲ್ಲಿ ಮಲ್ಲೇಶ್ವರದ ಯೋಗ ನರಸಿಂಹಸ್ವಾಮಿ ದೇವಾಲಯ, ನಂದಿ ತೀರ್ಥ ದೇವಾಲಯ ಮತ್ತು ಮಹಾಗಣಪತಿ ದೇವಾಲಯ. ಚಿಕ್ಕಬಳ್ಳಾಪುರದ ವಿಧುರಾಶ್ವಥ ನಾರಾಯಣ ಸ್ವಾಮಿ ದೇವಾಲಯ ಮತ್ತು ತಲಕಾಯ ಬೆಟ್ಟದ ವೆಂಕಟರಮಣ ದೇವಾಲಯ. ದಕ್ಷಿಣ ಕನ್ನಡದ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ, ಕುಕ್ಕೆ ಸುಬ್ರಮಣ್ಯ ದೇವಾಲಯ, ಸೌತಡ್ಕ ಮಹಾಗಣಪತಿ ದೇವಾಲಯ ಮತ್ತು ಮಾರಾಳಿಯ ಸೂರ್ಯನಾರಾಯಣ ಸ್ವಾಮಿ ದೇವಾಲಯ. 

ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ)ದ ದೇವರ ಹೊಸಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೇವಪೂರುವಿನ ಹಾಲು ರಾಮೇಶ್ವರ ದೇವಾಲಯ, ರಾಯಚೂರು ಜಿಲ್ಲೆಯ ದೇವಸೂಗೂರಿನ ಸೂಗೂರೇಶ್ವರ ಸ್ವಾಮಿ ದೇವಾಲಯ, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಾಲಯ, ಕೊಪ್ಪಳ ಜಿಲ್ಲೆಯ ಹುಲಿಗಿಯ ಹುಲಿಗೆಮ್ಮ ದೇವಾಲಯ ಹಾಗೂ ಮಂಡ್ಯ ಜಿಲ್ಲೆ ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ದೇವಾಲಯದಲ್ಲಿ ಸೇವಾ ದರ ಹೆಚ್ಚಳ ಮಾಡಲಾಗಿದೆ.

Read more Articles on