ಸಾರಾಂಶ
ಮಯೂರ್ ಹೆಗಡೆ
ಬೆಂಗಳೂರು : ಆಹಾರ ಪದಾರ್ಥಗಳ ದರ ಏರಿಕೆಯ ಜತೆಗೆ ಹೊಟೆಲ್, ರೆಸ್ಟೊರೆಂಟ್‌ಗಳ ಇತರೆ ಶುಲ್ಕದ ನೆಪದಲ್ಲಿ ಸರ್ವೀಸ್ ಚಾರ್ಜ್ ವಸೂಲಿ ಗ್ರಾಹಕರನ್ನು ಕಾಡುತ್ತಿದೆ. ಇದು ಗ್ರಾಹಕರ ‘ಐಚ್ಛಿಕ’ವಾದರೂ ನಗರದ ಹೋಟೆಲ್‌ಗಳಲ್ಲಿ ಇದು ಪಾಲನೆಯಾಗುತ್ತಿಲ್ಲ ಎಂಬ ಆರೋಪಗಳಿವೆ.
ಹಾಲಿನ ಉತ್ಪನ್ನಗಳ ಆಹಾರ ಪದಾರ್ಥ ಶೀಘ್ರ ಹೆಚ್ಚಾಗಲಿದೆ. ಹೋಟೆಲ್‌ಗಳಲ್ಲಿ ಬೆಣ್ಣೆದೋಸೆ, ತುಪ್ಪದ ಖಾದ್ಯ ಜೇಬನ್ನು ಕರಗಿಸಲಿದೆ. ಖೋವಾ, ಚೀಸ್ ಸುರಿದ ಪೀಜಾ, ಪನ್ನೀರ್ ರೋಲ್ ಖಾದ್ಯಗಳ ಬೆಲೆಯೂ ಹೆಚ್ಚಳವಾಗಲಿದೆ. ಹೀಗೆ ದರ ಏರಿಕೆ ಹೊರತುಪಡಿಸಿದರೂ ಮಧ್ಯಮ ಹೋಟೆಲ್‌ಗಳಿಂದ ಹಿಡಿದು ಹೈ-ಎಂಡ್ ಫೈನ್ ಡೈನಿಂಗ್ ಸ್ಪಾಟ್‌ಗಳು ಮತ್ತು ರೆಸ್ಟೋಬಾರ್‌ಗಳು ಗ್ರಾಹಕರಿಗೆ ಹೊರೆಯಾಗಿವೆ.
ಸರ್ವೀಸ್ ಚಾರ್ಜ್:
ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು 2022ರಲ್ಲಿ ಗ್ರಾಹಕರು ಸೇವಾ ಶುಲ್ಕವನ್ನು ಪಾವತಿಸಲು ಒತ್ತಾಯಿಸುವಂತಿಲ್ಲ ಎನ್ನುವ ಸ್ಪಷ್ಟ ಮಾರ್ಗಸೂಚಿ ನೀಡಿದೆ. ಗ್ರಾಹಕರು ಇಚ್ಛಿಸಿದ್ದಲ್ಲಿ ಟಿಪ್ಸ್ ನೀಡಬಹುದೆ ಹೊರತು ಹೋಟೆಲ್‌ಗಳು ಕಡ್ಡಾಯವಾಗಿ ವಸೂಲಿ ಮಾಡುವಂತಿಲ್ಲ. ಅದು ಸ್ವಯಂಪ್ರೇರಿತ ಎಂದು ಈಚೆಗೆ ದೆಹಲಿ ಹೈಕೊರ್ಟ್ ತೀರ್ಪು ಬಂದಿದೆ. ಆದರೆ, ಈ ನಿಯಮ ನಗರದ ಹೋಟೆಲ್‌ಗಳು ಪಾಲನೆಯಾಗುತ್ತಿದೆಯೆ ಎಂದು ಗ್ರಾಹಕರು ವ್ಯಂಗ್ಯವಾಡುತ್ತಿದ್ದಾರೆ. ನಗರದ ಹೋಟೆಲ್‌ಗಳು ಸರ್ವೀಸ್ ಚಾರ್ಜ್ ಹೆಸರಿನಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿವೆ ಎಂಬ ದೂರುಗಳಿವೆ.
ನಗರದ ಕೆಲವು ಹೋಟೆಲ್ ರೆಸ್ಟೋರೆಂಟ್‌ಗಳಲ್ಲಿ ಯಾವುದೇ ರೀತಿಯ ಸೇವಾಶುಲ್ಕವನ್ನು ವಿಧಿಸದಿದ್ದರೂ, ಇನ್ನು ಕೆಲವು ಕಡೆಗಳಲ್ಲಿ ಗ್ರಾಹಕರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಹೋಟೆಲ್‌ಗಳಲ್ಲಿ ಸೇವಾ ಶುಲ್ಕ ಕಡ್ಡಾಯ ಎಂದು ಮೆನುವಿನಲ್ಲಿ ನಮೂದಿಸಲಾಗುತ್ತಿದೆ ಎಂದು ಗ್ರಾಹಕರು ಹೇಳುತ್ತಾರೆ. ಈ ರೆಸ್ಟೊರೆಂಟ್‌ಗಳಲ್ಲಿ ಆಹಾರ ಪದಾರ್ಥಗಳು ದುಬಾರಿ ಆಗಿರುವುದು ಒಂದು ಕಡೆಯಾದರೆ ಇನ್ನೊಂದೆಡೆ ಸೇವಾಶುಲ್ಕ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವಿದೆ.
ನಿಯಂತ್ರಣ ಬೇಕು:
ಖಾಸಗಿಯಾಗಿರುವ ಹೋಟೆಲ್ ಕ್ಷೇತ್ರದ ಮೇಲೆ ಬೆಲೆ ಇಂತಿಷ್ಟೇ ನಿಗದಿಸಿ ಎಂದು ನಿಯಂತ್ರಣ ಹೇರುವುದು ಅಸಾಧ್ಯ. ಮೂಲದಲ್ಲಿ ಸರ್ಕಾರ ಬೆಲೆ ಏರಿಸುವಾಗ ಕೆಇಆರ್‌ಸಿಯಂತೆ ಸಾರಿಗೆ, ನೀರು, ತ್ಯಾಜ್ಯ ಸೇರಿ ಇತರೆ ವಲಯಗಳ ಬೆಲೆ ನಿಯಂತ್ರಣ ಆಯೋಗ ರಚಿಸಿ ಗ್ರಾಹಕರ ಪ್ರತಿಕ್ರಿಯೆ ಪಡೆಯಬೇಕು. ಇಲ್ಲಿ ನಿಯಂತ್ರಣವಾದರೆ ಮಾತ್ರ ಖಾಸಗಿಯವರು ಬೆಲೆ ಹೆಚ್ಚಳ ಮಾಡುವುದನ್ನು ತಪ್ಪಿಸಬಹುದು ಎಂದು ಗ್ರಾಹಕ ಹಕ್ಕುಗಳ ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ ವೈ.ಜಿ.ಮುರಳೀಧರನ್ ಹೇಳುತ್ತಾರೆ.
ಆನ್‌ಲೈನ್ ಸುಲಿಗೆ:
ಪ್ರತಿಷ್ಠಿತ ಆನ್‌ಲೈನ್ ಫುಡ್ ಆ್ಯಪ್‌ವೊಂದರಲ್ಲಿ ಫುಲ್ ಮೀಲ್ಸ್ ತೆಗೆದುಕೊಂಡಲ್ಲಿ ಅದರ ಮೂಲ ಬೆಲೆ ₹370 ಆದಲ್ಲಿ ಪ್ಲಾಟ್‌ಫಾರ್ಮ್ ವೆಚ್ಚ, ಡಿಲಿವರಿ ಚಾರ್ಚ್ , ಡೊನೇಶನ್ ಸೇರಿ ಪಾವತಿಸಬೇಕಾದ ಮೊತ್ತ ₹460 ತಲುಪುತ್ತದೆ. ಇದರಲ್ಲಿ ಕ್ಯಾಶ್‌ಬ್ಯಾಕ್, ರಿಯಾಯಿತಿ ಇದೆ ಎಂದು ಗ್ರಾಹಕರನ್ನು ಆಕರ್ಷಿಸಿ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ.
ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ಸೇವಾ ಶುಲ್ಕವನ್ನು ಬಿಲ್‌ಗಳಿಗೆ ಸೇರಿಸುವಂತಿಲ್ಲ. ಅದು ಗ್ರಾಹಕರ ಐಚ್ಛಿಕ. ಸರ್ವೀರ್ಸ್ ಚಾರ್ಜ್ ವಿಧಿಸುತ್ತಿದ್ದರೆ ಕೋರ್ಟ್ ಆದೇಶದನ್ವಯ ಕಡ್ಡಾಯವಾಗಿ ಅದನ್ನು ಫಲಕದಲ್ಲಿ ಹಾಕಬೇಕು. ಇಷ್ಟಾಗಿ, ಗ್ರಾಹಕರು ಹೇಗೆ ತಮ್ಮ ಹಕ್ಕನ್ನು ಕಾಪಾಡಿಕೊಳ್ಳುತ್ತಾರೊ ಅವರಿಗೆ ಬಿಟ್ಟಿದ್ದು.
- ವೈ.ಜಿ.ಮುರಳೀಧರನ್, ಗ್ರಾಹಕ ಹಕ್ಕುಗಳ ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ
ಬೆಲೆ ಏರಿಕೆಯನ್ನು ಕಾರಣವಾಗಿಟ್ಟುಕೊಂಡು ನಗರದ ಹೋಟೆಲ್, ರೆಸ್ಟೊರೆಂಟ್‌ಗಳು ತಮ್ಮ ಲಾಭ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಸ್ಪಷ್ಟ. ಇದರಿಂದ ಹೋಟೆಲ್‌ಗಳನ್ನೆ ನೆಚ್ಚಿಕೊಂಡ ಕಾರ್ಮಿಕ ವರ್ಗ, ಕೆಳ ಮಧ್ಯಮ ವರ್ಗದವರು ಸಂಕಷ್ಟದಲ್ಲಿದ್ದಾರೆ.
- ಎಂ.ಎನ್.ಶ್ರೀರಾಮ್, ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ