ಸಾರಾಂಶ
ಯಲ್ಲಾಪುರ: ಪಾಲಕರು ತಮ್ಮ ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆಗಳಿಗೆ ಕಳುಹಿಸಿದರೆ ಮಾತ್ರ ಗ್ರಾಮೀಣ ಪ್ರದೇಶದ ಶಾಲೆಗಳ ಉಳಿವು ಸಾಧ್ಯ. ಪಾಲಕರು, ಶಿಕ್ಷಕರು ಈ ಕುರಿತು ಚಿಂತಿಸುವ ಅಗತ್ಯವಿದೆ ಎಂದು ತಾಲೂಕು ದೈ.ಶಿ. ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ ತಿಳಿಸಿದರು.ತಾಲೂಕಿನ ತಟಗಾರ ಸ.ಹಿ.ಪ್ರಾ. ಶಾಲೆಯಲ್ಲಿ ಹಮ್ಮಿಕೊಂಡಿದ್ದ ಯಲ್ಲಾಪುರ ೩ನೇ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟಿಸಿ, ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಮಾತ್ರ ಉತ್ತಮ ಶಿಕ್ಷಣ ದೊರಕುತ್ತದೆ ಎಂಬ ಭ್ರಮೆ ಅನೇಕರಲ್ಲಿದೆ. ಆದರೆ ಅಲ್ಲಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂದ ಅವರು, ಮಕ್ಕಳಲ್ಲಿ ಸಂಖ್ಯಾಶಾಸ್ತ್ರದ ಅರಿವು ಮೂಡಿಸಲು ಕಲಿಕಾ ಹಬ್ಬ ನಡೆಸಲಾಗುತ್ತಿದೆ ಎಂದರು.ತಾಲೂಕು ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಯಾವ ಸೌಲಭ್ಯಗಳಿಗೂ ಕೊರತೆಯಿಲ್ಲ. ಆದರೆ, ಕೊರತೆಯಿರುವುದು ಕೇವಲ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ. ಪಾಲಕರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಮುಂದಾಗಬೇಕು. ಶಿಕ್ಷಕರೂ ಪಾಲಕರ ಮನವೊಲಿಸುವಲ್ಲಿ, ಶಾಲೆಯನ್ನು ಉಳಿಸುವಲ್ಲಿ ಗಂಭೀರವಾಗಿ ಪ್ರಯತ್ನಿಸಬೇಕು ಎಂದರು.ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ ಹಂಗಾರಿ, ಹಿರಿಯರಾದ ರಾಮಕೃಷ್ಣ ಭಾಗ್ವತ ಶೀಗೆಪಾಲ, ಬಿಐಇಆರ್‌ಟಿ ಎಂ.ಎ. ಬಾಗೇವಾಡಿ, ಬಿಆರ್‌ಪಿ ಸುಲೋಚನಾ ಹೆಗಡೆ, ಸಿಆರ್‌ಪಿಗಳಾದ ಮೋಹನ ನಾಯ್ಕ, ಅಮಿತಾ ನಾಯ್ಕ, ದೀಪಾ ಶೇಟ್ ಮತ್ತಿತರರು ಉಪಸ್ಥಿತರಿದ್ದರು. ಸಿಆರ್‌ಪಿ ಶಿವಾನಂದ ವೆರ್ಣೆಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸರೋಜಿನಿ ಭಟ್ಟ ನಿರ್ವಹಿಸಿದರು. ಮುಖ್ಯಾಧ್ಯಾಪಕ ಉದಯ ನಾಯಕ ವಂದಿಸಿದರು. ಯಲ್ಲಾಪುರ ೩ನೇ ಕ್ಲಸ್ಟರ್ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳು ಕಲಿಕಾ ಹಬ್ಬದಲ್ಲಿ ಭಾಗವಹಿಸಿದ್ದರು.
ಧರ್ಮಸ್ಥಳ ಯೋಜನೆಯ ಕಾರ್ಯ ಶ್ಲಾಘನೀಯಶಿರಸಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜಾತಿ- ಮತ ಭೇದವಿಲ್ಲದೆ ಎಲ್ಲರ ಏಳಿಗೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಡಿ.ಜಿ. ಪಟಗಾರ ತಿಳಿಸಿದರು.ತಾಲೂಕಿನ ಬನವಾಸಿ ಸಮೀಪದ ಅಜ್ಜರಣಿ ಗ್ರಾಮದ ಸಮುದಾಯ ಭವನದಲ್ಲಿ ಶ್ರೀಗಂಧ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ ಹಮ್ಮಿಕೊಂಡ ಸರ್ಕಾರದ ಯೋಜನೆಯ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರ ಮಹಿಳೆಯರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ. ಅವುಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬಹುದು ಎಂದರು.ಮಹಿಳಾ ಜ್ಞಾನ ವಿಕಾಸ ಕೇಂದ್ರದ ತಾಲೂಕು ಸಮನ್ವಯಾಧಿಕಾರಿ ಮಲ್ಲಿಕಾ ಶೆಟ್ಟಿ ಮಾತನಾಡಿದರು. ಯೋಜನೆಯ ವಿಚಕ್ಷಣಾಧಿಕಾರಿ ಪದ್ಮ, ಸೇವಾ ಪ್ರತಿನಿಧಿ ಕಾವ್ಯ ಹಾಗೂ ಶ್ರೀಗಂಧ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಇದ್ದರು.