ಸಾರಾಂಶ
ರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣಗಳ ಸುದ್ದಿಗಳು ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಬಾಣಂತಿ ಸಾವು ಪ್ರಕರಣ ವರದಿಯಾಗಿದೆ.
ತೀರ್ಥಹಳ್ಳಿಯ ಮಾಳೂರಲ್ಲಿ ಘಟನೆ । ಆರು ದಿನದ ಹಿಂದೆ ಗಂಡು ಮಗುವಿಗೆ ಜನ್ಮವಿತ್ತ ಮಹಿಳೆ ಸಾವು
ಕನ್ನಡಪ್ರಭ ವಾರ್ತೆ ಶಿವಮೊಗ್ಗರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣಗಳ ಸುದ್ದಿಗಳು ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಬಾಣಂತಿ ಸಾವು ಪ್ರಕರಣ ವರದಿಯಾಗಿದೆ.
ಆರು ದಿನದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರು ಗ್ರಾಮದಲ್ಲಿ ಭಾನುವಾರ ನಡೆದಿದೆ. ಮಾಳೂರು ಗ್ರಾಮದ ಮಂಜುಳಾ (25) ಮೃತ ಬಾಣಂತಿ. ಹರಿಗೆಯಾಗಿ ಆರು ದಿನದ ನಂತರ ಚಿಕಿತ್ಸೆ ಫಲಕಾರಿಯಾಗದೆ ಬಾಣಂತಿ ಮಂಜುಳಾ ಮೃತಪಟ್ಟಿದ್ದಾರೆ.ಒಂದು ವರ್ಷದ ಹಿಂದೆ ಮಂಜುಳಾ ಅವರಿಗೆ ಮದುವೆಯಾಗಿತ್ತು. ಗರ್ಭಿಣಿಯಾಗಿದ್ದ ಅವರನ್ನು ಹೆರಿಗೆ ಹಿನ್ನೆಲೆ ಫೆ .9ರಂದು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಗೆ ಫೆ.10ರಂದು ಹೆರಿಗೆಯಾಗಿದೆ. ಹೆರಿಗೆ ಬಳಿಕ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅಂದೇ ಆಕೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಅವರು ಸಾವನ್ನಪ್ಪಿದ್ದಾರೆ. ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಳೆದ ಜನವರಿಗೆ 4ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಬಾಣಂತಿಯೊಬ್ಬರು ಮೃತಪಟ್ಟಿದ್ದರು. ಜ.28 ರಂದು ಹೊಸನಗರದ ದುಬಾರೆಯ ಅಶ್ವಿನಿ ಎಂಬ ಗರ್ಭಿಣಿಯ ಸಾವಾಗಿತ್ತು.ನಿರ್ಲಕ್ಷ್ಯ ತೋರಿಲ್ಲ: ಡಿಎಚ್‌ಒ
ಮಹಿಳೆಗೆ ಹೆರಿಗೆ ಬಳಿಕ ಗರ್ಭಕೋಶ ಹಿಗ್ಗದೆ ಇರುವ ಕಾರಣ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಯಾವ ವೈದ್ಯರೂ ನಿರ್ಲಕ್ಷ್ಯ ತೋರಿಲ್ಲ. ಕೊನೆ ಹಂತದವರೆಗೂ ಮಹಿಳೆಯನ್ನು ಉಳಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಡಿಎಚ್‌ಒ ಡಾ.ನಟರಾಜ್ ತಿಳಿಸಿದರು.