ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
75 ವರ್ಷಗಳ ನಂತರ ನಿವೃತ್ತಿ ಆಗಬೇಕು ಎಂಬುದು ಬಿಜೆಪಿ ಪಕ್ಷದ ಆಂತರಿಕ ವಿಷಯ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.ಮೋಹನ್ ಭಾಗವತ್ ಹೇಳಿಕೆ ವಿಚಾರ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರವರ ಪಕ್ಷದ ವಿಚಾರ ಅವರಿಗೆ ಬಿಟ್ಟದ್ದು, ಅದರ ವಿಶ್ಲೇಷಣೆಗೆ ನಾನು ಹೋಗಲ್ಲ. ದೇಶಕ್ಕೆ ಒಳ್ಳೆಯದಾಗಬೇಕು ಅಷ್ಟೇ ಎಂದರು.
ಸಿಗಂದೂರು ಸೇತುವೆ ಉದ್ಘಾಟನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದುರಂಕಾರದಿಂದ ಉದ್ಘಾಟನೆ ಮಾಡಬೇಕು ಎಂದಿದ್ದರೆ ನಾವೇನು ಮಾಡಲು ಆಗಲ್ಲ. ಸಿಗಂದೂರು ಅನ್ನೇ ಮುಳುಗಿಸಲು ಹೋದವರು ಸೇತುವೆ ಕಟ್ಟಿ ಉಳಿಸಿದ್ದೇನೆ ಎನ್ನುತ್ತಿದ್ದಾರೆ. ಜನರು ಅಷ್ಟು ದಡ್ಡರಲ್ಲ. ಡಿಜಿಟಲ್ ಬೊರ್ಡೇ ಹಣೆಬರಹ ಎಂದರೆ ನಾನೇನು ಮಾಡಲು ಆಗಲ್ಲ ಎಂದು ಟೀಕಿಸಿದರು.ಸಿಗಂದೂರು ಸೇತುವೆ ಉದ್ಘಾಟನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕೇಂದ್ರ ಸಚಿವ ಗಡ್ಕರಿ ಮಾತನಾಡಿದ್ದಾರೆ. ಯಾರಿಗೆ ಆಗಲಿ ಅಗೌರವ ತೋರುವುದು ಬಹಳ ತಪ್ಪು. ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಸ್ಪರವಾಗಿರಬೇಕು. ವ್ಯಕ್ತಿಗತವಾಗಿ ತೆಗೆದುಕೊಂಡು ಹೋಗುವುದನ್ನು ನಾನು ಖಂಡನೆ ಮಾಡುತ್ತೇನೆ. ಸೇತುವೆ ಉದ್ಘಾಟನೆಯಿಂದ ಎರಡು ಕೋಡು ಬರುವುದಾದರೆ ಅವರು ಮಾಡಿಕೊಳ್ಳಲಿ ಎಂದು ಕುಟುಕಿದರು.
ಕಾಗೋಡು ತಿಮ್ಮಪ್ಪ, ಬೇಳೂರು ಗೋಪಾಲಕೃಷ್ಣ ಕೂಡ ಸೇತುವೆಗಾಗಿ ಪ್ರಯತ್ನಪಟ್ಟಿದ್ದರು. ಯಾವುದೇ ಪ್ರಗತಿಯನ್ನು ವಿರೋಧ ಮಾಡುವ ಹಾಗಿಲ್ಲ, ಅದನ್ನು ಒಪ್ಪಿಕೊಳ್ಳ ಬೇಕಾಗುತ್ತದೆ. ಇಷ್ಟು ವರ್ಷ ಲಾಂಚ್ ನವರು ಸೇವೆ ಮಾಡಿದ್ದಾರೆ. ಹೀಗಾಗಿ ಲಾಂಚನ್ನು ಟೂರಿಸಂಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ. ಲಾಂಚನ್ನು ದ್ವೀಪದ ಸುತ್ತ ತಿರುಗಿಸಿ ಪ್ರವಾಸೋದ್ಯಮದ ದೃಷ್ಟಿಯಲ್ಲಿ ಹೋಟೆಲ್ ಮಾದರಿ ಮಾಡಲು ಚಿಂತನೆ ನಡೆದಿದೆ ಎಂದು ಪ್ರತಿಕ್ರಿಯಿಸಿದರು.ಸಿಎಂ, ಡಿಸಿಎಂ ತಿಕ್ಕಾಟ ವಿಚಾರಕ್ಕೆ ರೆಕ್ಕೆಪುಕ್ಕ ಏನು ಇಲ್ಲ. ಮಾಧ್ಯಮದಲ್ಲಿ ಮಾತ್ರ ತೋರಿಸಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆಯವರು ಬಾಯಿ ಮುಚ್ಚಿಕೊಂಡು ಕೆಲಸ ಮಾಡಲು ಎಲ್ಲರಿಗೂ ಹೇಳಿದ್ದಾರೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಗಳಿಗೆ ನಾವು ಬದ್ಧರಾಗಿರುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.