ಶಾಲಾ ಮಕ್ಕಳಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಕಾಡು, ಪರಿಸರ, ವನ್ಯಜೀವಿಗಳ ಸಂರಕ್ಷಣೆ ಕುರಿತು ಚಿತ್ರಕಲೆ ಸ್ಪರ್ಧೆ ನಡೆಸುವ ಮೂಲಕ ಕನ್ನಡಪ್ರಭ ಪತ್ರಿಕೆ ಸಾಮಾಜಿಕ ಜವಾಬ್ದಾರಿ ನಿಭಾಯಿಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

- ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್ ನೇತೃತ್ವದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಗೆ ಚಾಲನೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶಾಲಾ ಮಕ್ಕಳಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಕಾಡು, ಪರಿಸರ, ವನ್ಯಜೀವಿಗಳ ಸಂರಕ್ಷಣೆ ಕುರಿತು ಚಿತ್ರಕಲೆ ಸ್ಪರ್ಧೆ ನಡೆಸುವ ಮೂಲಕ ಕನ್ನಡಪ್ರಭ ಪತ್ರಿಕೆ ಸಾಮಾಜಿಕ ಜವಾಬ್ದಾರಿ ನಿಭಾಯಿಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿ ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಚಿತ್ರಕಲಾ ಪರಿಷತ್ತು ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಆಡಳಿತ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ಜೊತೆಯಲ್ಲಿ ಪತ್ರಿಕಾರಂಗ ಕೂಡ ಅತ್ಯಂತ ಪ್ರಮುಖ ಹಾಗೂ ಜವಾಬ್ದಾರಿಯುತ ಸ್ಥಾನ ನಿಭಾಯಿಸುತ್ತಿದೆ. ಸಮಾಜದ ಅಂಕುಡೊಂಕುಗಳನ್ನು ಆಡಳಿತ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಗಮನಕ್ಕೆ ತಂದು ಸರಿಪಡಿಸುವಂತಹ ಜವಾಬ್ದಾರಿ ಕೆಲಸಗಳನ್ನು ನಮ್ಮ ಪತ್ರಿಕಾ ರಂಗ ಮಾಡಿಕೊಂಡು ಬರುತ್ತಿದೆ ಎಂದರು.

ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಯವರು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಸ್ಪರ್ಧೆ ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯ. ದಾವಣಗೆರೆ ಜಿಲ್ಲಾ ವರದಿಗಾರ ನಾಗರಾಜ್ ಬಡದಾಳ್ ಕೋರಿಕೆಗೆ ಸ್ಪಂದಿಸಿ, ಮುಂದಿನ ವರ್ಷ ನಡೆಸುವ ಇಂತಹ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸೈಕಲ್ ಬಹುಮಾನ ನೀಡುವುದಾಗಿ ಭರವಸೆ ನೀಡಿದರು.

ಅರಣ್ಯ ನಾಶವಾಗಲು ಪರೋಕ್ಷವಾಗಿ ರಾಜಕಾರಣಿಗಳು ಕೂಡ ಕಾರಣವಾಗುತ್ತಾರೆ. ಅರಣ್ಯ ನಾಶದ ಆರೋಪಿಗಳನ್ನು ಬಿಡುವಂತೆ ಅಧಿಕಾರಿಗಳಿಗೆ ಶಿಫಾರಸು ಮಾಡುವ ಸಂದರ್ಭಗಳು ಬರುತ್ತವೆ ಎಂದು ವಿಷಾದಿಸಿದರು.

ಕಾಂಗ್ರೆಸ್ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅರಣ್ಯ ಮತ್ತು ಪರಿಸರ ನಾಶದಿಂದ ಮನುಷ್ಯ ಅನೇಕ ಸಮಸ್ಯೆಗಳಿಗೆ ತುತ್ತಾಗುವಂತಾಗಿದೆ. ಪರಿಸರ ನಾಶ ನಿರಾತಂಕವಾಗಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡಪ್ರಭ ಪತ್ರಿಕಾ ಸಮೂಹ ಪರಿಸರ ಮತ್ತು ವನ್ಯಜೀವಿಗಳ ರಕ್ಷಣೆ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ, ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವಂಥ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯ ಅಧಿಕಾರಿ ತಿಪ್ಪೇಶಪ್ಪ ಮಾತನಾಡಿ, ಮನುಷ್ಯನ ಅತಿಯಾದ ಆಸೆ, ನಾಗಾಲೋಟದಲ್ಲಿ ಸಾಗುತ್ತಿರುವ ನಗರೀಕರಣದಿಂದಾಗಿ ಅರಣ್ಯ ಮತ್ತು ವನ್ಯಜೀವಿಗಳ ಅಳಿವು ಹೆಚ್ಚಾಗುತ್ತಿದೆ. ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಕನ್ನಡಪ್ರಭ ಪತ್ರಿಕೆ- ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಡುತ್ತಿರುವುದು ನಿಜಕ್ಕೂ ಇತರರಿಗೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಪತ್ರಿಕೆ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಮಾಜಕ್ಕೂ ಇದು ಪೂರಕವಾಗಿದೆ. ಇಂತಹ ಕಾರ್ಯಕ್ರಮ ಸ್ವಾಗತಾರ್ಹ ಹಾಗೂ ಅನುಕರಣೀಯ. ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಗಳನ್ನು ಗುರುತಿಸಲು ಇಂತಹ ವೇದಿಕೆಗಳು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭದ ಹಿರಿಯ ಪ್ರಧಾನ ವರದಿಗಾರ ನಾಗರಾಜ ಬಡದಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಕೀಳರಿಮೆ ಹೋಗಲಾಡಿಸಲು, ಪರಿಸರ ಜಾಗೃತಿ ಮೂಡಿಸಲು ಪತ್ರಿಕೆ ಪ್ರಧಾನ ಸಂಪಾದಕ ರವಿ ಹೆಗಡೆ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ರಾಜ್ಯಾದಂತ ನಡೆಸಲಾಗುತ್ತಿದೆ. ಮುಂದಿನ ವರ್ಷ ಏಕಕಾಲದಲ್ಲಿ ಇಡೀ ರಾಜ್ಯಾದಂತ ಇಂತಹ ಪರಿಸರಪ್ರಜ್ಞೆ ಮೂಡಿಸುವ ಕಾರ್ಯಕ್ರಮ ನಡೆಸಲಿದೆ. ಇದಕ್ಕೆ ಎಲ್ಲರ ಸಲಹೆ- ಸಹಕಾರ ಅಗತ್ಯ ಎಂದರು.

ಸ್ಪರ್ಧೆಯಲ್ಲಿ ಒಟ್ಟು 60 ವಿದ್ಯಾರ್ಥಿಗಳು ಭಾಗವಹಿಸಿದ್ದು ಬಿ.ಐ. ಬಬಲೇಶ್ವರ, ಮೌನೇಶಾಚಾರಿ, ಲಲಿತಮ್ಮ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು.

ಬಹುಮಾನ-ಸನ್ಮಾನ:

ಕಸ್ತೂರಿ ಎಚ್.ಎಸ್.- ಪ್ರಥಮ, ಸ್ವಾತಿ ಆರ್.- ದ್ವಿತೀಯ, ಭರತ್ ಬಿ.ಎಚ್.- ತೃತೀಯ ಸ್ಥಾನ ಗಳಿಸಿದ್ದರೆ, ತನುಶ್ರೀ ಎಸ್., ಕೃತಿಕಾ ವೈ.ಕೆ. ಸಮಾಧಾನಕರ ಬಹುಮಾನ ಪಡೆದರು. ವಿಜೇತ ಎಲ್ಲ ವಿದ್ಯಾರ್ಥಿಗಳು ನ್ಯಾಮತಿಯ ಕೆಪಿಎಸ್ ಶಾಲೆಯವರಾಗಿದ್ದು, ಪಾರಿತೋಷಕ, ಪ್ರಮಾಣ ಪತ್ರ, ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೂ ಪ್ರಮಾಣಪತ್ರ ನೀಡಲಾಯಿತು.

ಶಿಕ್ಷಣ ಇಲಾಖೆಯ ಇ.ಸಿ.ಎ. ಮುದ್ದನ ಗೌಡ, ಹನುಮಂತಪ್ಪ, ಟಿ.ಪಿ.ಒ. ಜಗದೀಶ್, ಯುವಶಕ್ತಿ ಒಕ್ಕೂಟದ ಕತ್ತಿಗೆ ನಾಗರಾಜ್, ಕನ್ನಡಪ್ರಭ ಪತ್ರಿಕೆಯ ಕಾರ್ತಿಕ್ ಮೌಳಿ, ಸುಧೀಂದ್ರ, ಶಿವರಾಜ್, ಪತ್ರಕರ್ತ ಗಿರೀಶ್ ನಾಡಿಗ್, ವಿತರಕ ಚಂದ್ರಪ್ಪ ಮುಂತಾದವರು ಇದ್ದರು.

ಸಮಾರಂಭದಲ್ಲಿ ಪತ್ರಕರ್ತರಾದ ವಿಜಯಾನಂದ ಸ್ವಾಮಿ ನಿರೂಪಿಸಿದರು. ಪತ್ರಕರ್ತ ಯೋಗೀಶ್ ಕೋರಿ ಕುಳಗಟ್ಟೆ ಸ್ವಾಗತಿಸಿದರು.

- - -

-5ಎಚ್.ಎಲ್.ಐ1: ಹೊನ್ನಾಳಿ ಹಿರೇಕಲ್ಮಠದಲ್ಲಿ ಕನ್ನಡಪ್ರಭ, ಸುವರ್ಣ ನ್ಯೂಸ್ ವತಿಯಿಂದ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಹಿರೇಕಲ್ಮಠದ ಶ್ರೀಗಳು, ಕನ್ನಡಪ್ರಭ ಪ್ರಧಾನ ವರದಿಗಾರ ನಾಗರಾಜ್ ಬಡದಾಳ್, ಎಚ್.ಎ. ಉಮಾಪತಿ ಇತರರು ಇದ್ದರು. -5ಎಚ್ಎಲ್.ಐ1ಎ.: ಚಿತ್ರಕಲಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳೊಂದಿಗೆ ಶ್ರೀಗಳು, ಗಣ್ಯರು ಇದ್ದಾರೆ. -5ಎಚ್.ಎಲ್.ಐ1ಬಿ: ಹೊನ್ನಾಳಿ ಹಿರೇಕಲ್ಮಠದಲ್ಲಿ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್ ವತಿಯಿಂದ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳು ಚಿತ್ರಗಳ ಬಿಡಿಸುವಲ್ಲಿ ನಿರತರಾಗಿರುವುದು.