ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಬಿಕ್ಕೋಡಿನ ಡಾ. ಬಿ. ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಸಹಾಯಕ ವಾರ್ಡನ್ ಚಂದ್ರಶೇಖರ ವೈ ಪಿ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಮಾಡುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಆದೇಶ ಮಾಡಿದ್ದಾರೆ. ಬಿಕ್ಕೋಡಿನ ಡಾ. ಬಿ. ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಬೀಡಿ ಸೇದುತ್ತಿರುವುದು, ನಿಲಯದ ಮೇಲ್ಛಾವಣೆ ಮೇಲೆ ಮದ್ಯದ ಖಾಲಿ ಬಾಟಲಿಗಳ ಫೋಟೋ, ಕೆಲವು ವಿದ್ಯಾರ್ಥಿಗಳು ವೈಟ್ನರ್ ವಾಸನೆ ಸೇವನೆ ಮಾಡುತ್ತಿರುವ ಹಾಗೂ ನಿಲಯ ಪಾಲಕರ ಮೇಲೆ ವಿದ್ಯಾರ್ಥಿಯೋರ್ವ ಹಲ್ಲೆ ಮಾಡುತ್ತಿರುವ ವಿಡಿಯೋ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ವಾಟ್ಸಾಪ್ ಮೂಲಕ ಬಂದಿತ್ತು. ಅದರಂತೆ ಬೇಲೂರಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳನ್ನು ಮತ್ತು ಸಿಬ್ಬಂದಿಯನ್ನು ಈ ಸಂಬಂಧ ವಿಚಾರಣೆ ನಡೆಸಲಾಗಿ, ಕೆಲ ವಿದ್ಯಾರ್ಥಿಗಳು ಬೀಡಿ ಸೇದಿರುವುದು ವಾರ್ಡನ್ ಗಮನಕ್ಕೆ ಬಂದಿದ್ದರೂ ಕೂಡ ಸೂಕ್ತ ಕ್ರಮ ವಹಿಸದಿರುವುದು ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡದಿರುವುದು ಕಂಡುಬಂದಿರುತ್ತದೆ.ಈ ಎಲ್ಲಾ ಘಟನೆಗಳು ವಿದ್ಯಾರ್ಥಿ ನಿಲಯದಲ್ಲಿ ನಡೆದಿದ್ದು, ವಾರ್ಡನ್‌ರವರು ಗಮನಿಸಿರುವುದಿಲ್ಲ ಮತ್ತು ಯಾವುದೇ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ. ನಿಲಯದೊಳಗೆ ಹೊರಗಿನ ವ್ಯಕ್ತಿಗಳ ಪ್ರವೇಶ ನಿಷೇಧವಿದ್ದರೂ ಹಲವಾರು ವ್ಯಕ್ತಿಗಳು ಹಗಲು ಮತ್ತು ರಾತ್ರಿ ವೇಳೆಯಲ್ಲಿ ನಿಲಯಕ್ಕೆ ಪ್ರವೇಶ ಮಾಡಿದ್ದರೂ ಈ ಬಗ್ಗೆ ಯಾವುದೇ ಕ್ರಮ ವಹಿಸದೇ ನಿರ್ಲಕ್ಷ್ಯತೋರಿರುತ್ತಾರೆ. ಆದ ಕಾರಣ ವಾರ್ಡನ್‌ರವರು ನಿಲಯ ನಿರ್ವಹಣೆಯಲ್ಲಿ ಬೇಜಬ್ದಾರಿತನ ಹಾಗೂ ನಿರ್ಲಕ್ಷ್ಯತೆ, ತೋರಿರುವ ಹಿನ್ನೆಲೆಯಲ್ಲಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಿಫಾರಸು ಮಾಡಿದ್ದರು.ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವಾರ್ಡನ್ ಚಂದ್ರಶೇಖರ ವೈ ಪಿ, ಸರ್ಕಾರಿ ನೌಕರರಿಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸುವ ಮೂಲಕ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 2021ರ ನಿಯಮ-3 (1) (i)(ii)(iii) ನ್ನು ಉಲ್ಲಂಘಿಸಿರುವುದು ಕಂಡು ಬಂದಿರುತ್ತದೆ. ಆದುದರಿಂದ ಸದರಿ ನೌಕರರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತಿನಲ್ಲಿಡಲು ನಿರ್ಧರಿಸಲಾಗಿದೆ.ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಚಂದ್ರಶೇಖರ ವೈ ಪಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಸಿಇಒ ಪೂರ್ಣಿಮಾ ಆದೇಶಿಸಿದ್ದಾರೆ.