ಸಾರಾಂಶ
ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಕುರಿತು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರು ನಿರ್ಧರಿಸಲಿದ್ದು, ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಒಗ್ಗೂಡಿ ಗೆಲುವಿಗೆ ಶ್ರಮಿಸುವಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಚನ್ನಪಟ್ಟಣದಲ್ಲಿ ಜೆಡಿಎಸ್ ಸಭೆಯಲ್ಲಿ ಮಾತನಾಡಿದರು.
ಕನ್ನಡಪ್ರಭವಾರ್ತೆ ಚನ್ನಪಟ್ಟಣ
ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಕುರಿತು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರು ನಿರ್ಧರಿಸಲಿದ್ದು, ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಒಗ್ಗೂಡಿ ಗೆಲುವಿಗೆ ಶ್ರಮಿಸುವಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.ತಾಲೂಕಿನ ಅಕ್ಕೂರು ಜಿಪಂ ವ್ಯಾಪ್ತಿಯ ಸುಳ್ಳೇರಿ ಗ್ರಾಪಂ, ಇಗ್ಗಲೂರು ಗ್ರಾಪಂ ಹಾಗೂ ಹಾರೋಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ ಅವರು, ಟಿಕೆಟ್ ವಿಚಾರಕ್ಕೆ ತಲೆ ಕಡೆಸಿಕೊಳ್ಳದೇ ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಸಲಹೆ ನೀಡಿದರು. ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವರಿಷ್ಠರು ಕುಳಿತು ನಿರ್ಧರಿಸುತ್ತಾರೆ. ಯಾರೇ ಅಭ್ಯರ್ಥಿಯಾದರೂ ಇಲ್ಲಿ ಎನ್‌ಡಿಎ ಗೆಲುವು ಸಾಧಿಸುವುದು ಮುಖ್ಯ. ಆ ನಿಟ್ಟಿನಲ್ಲಿ ಈಗಿನಿಂದಲೇ ಪಕ್ಷವನ್ನು ತಳಮಟ್ಟದಿಂದ ಸಜ್ಜುಗೊಳಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಚನ್ನಪಟ್ಟಣದಲ್ಲಿ ಜನ ಜೆಡಿಎಸ್ ಚಿಹ್ನೆಗೆ ಮತ ಹಾಕಿದ್ದಾರೆ. ನಮ್ಮ ಕಾರ್ಯಕರ್ತರಲ್ಲಿ ಸಹ ಜೆಡಿಎಸ್ ಚಿಹ್ನೆಗೆ ಟಿಕೆಟ್ ಉಳಿಸಿಕೊಳ್ಳಲು ಒತ್ತಡವಿದೆ. ಚನ್ನಪಟ್ಟಣದ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇನೆ. ನಾನು ಸಂಘಟನೆ ಮಾಡುತ್ತೇನೆ, ಬೇರೆ ಆಲೋಚನೆ ಇಲ್ಲ ಎಂದರು. ಕಳೆದ ಎರಡು ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕ್ಷೇತ್ರದ ಜನ ದೊಡ್ಡ ಅಂತರದಿಂದ ಗೆಲ್ಲಿಸಿದ್ದಾರೆ. ಎರಡು ಬಾರಿ ಕುಮಾರಸ್ವಾಮಿ ಕೇವಲ ನಾಮಪತ್ರ ಸಲ್ಲಿಸಿ ಹೋಗಿದ್ದು, ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರೇ ನಿಂತು ಚುನಾವಣೆ ನಡೆಸಿ ಅವರನ್ನು ಗೆಲ್ಲಿಸಿದ್ದಾರೆ. ಕ್ಷೇತ್ರ ಜನರ ಋಣ ನಮ್ಮ ಮೇಲಿದೆ. ಈ ಋಣವನ್ನು ತೀರಿಸಲು ನಾವು ಬದ್ಧರಾಗಿದ್ದೇವೆ ಎಂದರು.ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಮುಖಂಡರಾದ ಗರಕಹಳ್ಳಿ ಕೃಷ್ಣೇಗೌಡ, ಇಗ್ಗಲೂರು ಶ್ರೀನಿವಾಸ್ ಇತರರು ಇದ್ದರು.
ಪಕ್ಷದ ಕಾರ್ಯಕರ್ತರೊಡೆಗೆ ನಾನು ಸದಾ ಇರುತ್ತೇನೆ. ಕುಮಾರಸ್ವಾಮಿಯವರು ಸಹ ಬರುತ್ತಾರೆ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ವಿಚಾರವಿದ್ದರೂ ಅದನ್ನು ಮಾಡಿಕೊಡಲು ನಾವು ಬದ್ಧರಾಗಿದ್ದೇವೆ. ಜೆಡಿಎಸ್‌ಗೆ ಕಾರ್ಯಕರ್ತರೇ ಆಧಾರಸ್ತಂಭ. ನಿಮ್ಮ ಜತೆ ನಾವು ಸದಾ ಇದ್ದೇವೆ.ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ