ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಸಂಘನಿಕೇತನದ ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 77ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.7ರಿಂದ 11ರವರೆಗೆ ಸಂಘನಿಕೇತನದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಂಘನಿಕೇತನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಎಂ. ಸತೀಶ ಪ್ರಭು, ಗಣೇಶೋತ್ಸವ ಯಶಸ್ಸಿಗೆ ಕೆ. ಪ್ರವೀಣ್ ಕುಮಾರ್ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸೆ.7ರಂದು ಬೆಳಗ್ಗೆ 10ಕ್ಕೆ ಮಣಿಪಾಲ ಗ್ಲೋಬಲ್ ಎಜ್ಯುಕೇಶನ್ ಅಧ್ಯಕ್ಷ ಟಿ.ವಿ. ಮೋಹನದಾಸ ಪೈ ಗಣೇಶೋತ್ಸವ ಉದ್ಘಾಟಿಸುವರು ಎಂದರು.
ಧ್ವಜಾರೋಹಣ, ವಂದೇ ಮಾತರಂ, ಗಣಹೋಮ, ಮಹಾಪೂಜೆ ಬಳಿಕ ರಥಬೀದಿಯ ಶ್ರೀ ವೀರವೆಂಕಟೇಶ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಸಂಜೆ 7 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಲೋಟಸ್ ಪ್ರಾಪರ್ಟಿಸ್‌ನ ಜಿತೇಂದ್ರ ಕೊಟ್ಟಾರಿ ಬಹುಮಾನ ವಿತರಿಸುವರು. 7.45ಕ್ಕೆ ಮೂಡಗಣಪತಿ ಪೂಜೆ ಹಾಗೂ ರಂಗಪೂಜೆ ನಡೆಯಲಿದೆ ಎಂದು ಹೇಳಿದರು.ಸೆ.8ರಂದು ಸಂಜೆ 6ಕ್ಕೆ ವಿದುಷಿ ಮೇಧಾ ವಿದ್ಯಾಭೂಷಣ್ ಅವರಿಂದ ಭಜನ್ ಸಂಧ್ಯಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊಫೆಶನಲ್ ಕೊರಿಯರ್ಸ್‌ನ ನರೇಂದ್ರ ನಾಯಕ್ ಮಿತ್ತಬೈಲ್ ವಹಿಸಲಿದ್ದಾರೆ. ಸೆ.9ರಂದು ಸಂಜೆ 6ಕ್ಕೆ ಕರ್ನಾಟಕ ಯಕ್ಷಧಾಮದ ಜನಾರ್ದನ ಹಂದೆ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ‘ಭಕ್ತಿವಿಜಯ’ ನಡೆಯಲಿದೆ. ಅಧ್ಯಕ್ಷತೆಯನ್ನು ಸಿಟಾಡೆಲ್ ಡೆವಲಪರ್ಸ್‌ನ ನಿರ್ದೇಶಕ ರಾಮಕುಮಾರ್ ಬೇಕಲ್ ವಹಿಸಲಿದ್ದಾರೆ ಎಂದು ಸತೀಶ್ ಪ್ರಭು ವಿವರಿಸಿದರು.
ಸೆ.10ರಂದು ಬೆಳಗ್ಗೆ 5 ಗಂಟೆಗೆ ಉಷಃಕಾಲ ಪೂಜೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಸನಾತನ ನಾಟ್ಯಾಲಯದ ನೃತ್ಯ ವೈವಿಧ್ಯ- ಸನಾತನ ರಾಷ್ಟ್ರಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ಬೀಡಿ ವರ್ಕ್ಸ್‌ನ ಬಿ. ವೆಂಕಟೇಶ್ ಪೈ ವಹಿಸಲಿರುವರು. ಪ್ರತಿದಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.11ರಂದು ಶೋಭಾಯಾತ್ರೆ:
ಸೆ.11ರಂದು ಮಧ್ಯಾಹ್ನ 1.15ಕ್ಕೆ ಮಹಾಪೂಜೆ, ವಿಸರ್ಜನಾ ಪೂಜೆ, ಮಧ್ಯಾಹ್ನ 3.30ಕ್ಕೆ ವಾದ್ಯಗೋಷ್ಠಿ, ಸಂಜೆ 5.30ಕ್ಕೆ ಸಂಕಲ್ಪ ಕಾರ್ಯಕ್ರಮ, ಸಂಜೆ 6.15ಕ್ಕೆ ಶೋಭಾಯಾತ್ರೆ ನಡೆಯಲಿದೆ. ಆದಿದ್ರಾವಿಡ ಸೇವಾ ಸಂಘದ ಅಧ್ಯಕ್ಷ ರಘುನಾಥ ಅತ್ತಾವರ ಶೋಭಾಯಾತ್ರೆಗೆ ಚಾಲನೆ ನೀಡುವರು. ಶೋಭಾಯಾತ್ರೆಯು ಉತ್ಸವ ಸ್ಥಾನದಿಂದ ಹೊರಟು ಮಣ್ಣಗುಡ್ಡೆ, ಅಳಕೆ, ನ್ಯೂಚಿತ್ರ ಜಂಕ್ಷನ್, ರಥಬೀದಿಯಾಗಿ, ಮಹಮ್ಮಾಯ ಕೆರೆಯಲ್ಲಿ ವಿಸರ್ಜನೆ ನಡೆಯಲಿದೆ ಎಂದು ಸತೀಶ್ ಪ್ರಭು ತಿಳಿಸಿದರು.ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಕಾರ್ಯದರ್ಶಿ ಗಜಾನನ ಪೈ, ಸಂಘನಿಕೇತನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜಿ.ಸುರೇಶ್ ವಿ.ಕಾಮತ್, ಕಾರ್ಯದರ್ಶಿ ಯು.ನಂದನ ಮಲ್ಯ, ಕಾರ್ಯಕಾರಿಣಿ ಸದಸ್ಯ ಪ್ರಕಾಶ್ ಗರೋಡಿ ಇದ್ದರು.