ಕನ್ನಡಪ್ರಭ ವಾರ್ತೆ ಸಕಲೇಶಪುರ
ಪರಸ್ಪರ ಮಾಡಿಕೊಂಡಿದ್ದ ಒಪ್ಪಂದದಂತೆ ಅಧಿಕಾರ ಹಸ್ತಾಂತರ ಮಾಡುವ ಮೂಲಕ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.ತಾಲೂಕಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ನಿಖಿಲ್ ಮೋಹನ್ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದವನ್ನು ಗೌರವಿಸಿ ಮಾಜಿ ಅಧ್ಯಕ್ಷ ಬಿರಡಹಳ್ಳಿ ಮಧು ಅವರು ಮಾತಿನಂತೆ ಅಧಿಕಾರ ಹಸ್ತಾಂತರಿಸಿರುವುದು ಅನುಕರಣೀಯ ನಡೆ ಎಂದು ಶ್ಲಾಘಿಸಿದರು. ರಾಜಕೀಯದಲ್ಲಿ ಮಾತಿಗೆ ಬದ್ಧತೆ, ಪರಸ್ಪರ ವಿಶ್ವಾಸ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ. ಅದೇ ಪರಂಪರೆಯನ್ನು ಈ ಸಹಕಾರ ಸಂಘ ಮುಂದುವರಿಸಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.
ಬಡವರು ಹಾಗೂ ಸಂಘದ ಎಲ್ಲ ಸದಸ್ಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೂತನ ಅಧ್ಯಕ್ಷರು ಕಾರ್ಯನಿರ್ವಹಿಸಬೇಕು. ಸಹಕಾರ ಸಂಘವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ದು ಸದಸ್ಯರ ವಿಶ್ವಾಸಕ್ಕೆ ತಕ್ಕಂತೆ ಸೇವೆ ಸಲ್ಲಿಸಬೇಕು ಎಂದು ಶುಭ ಹಾರೈಸಿದರು.ನೂತನ ಅಧ್ಯಕ್ಷ ನಿಖಿಲ್ ಮೋಹನ್ ಮಾತನಾಡಿ, ಸಂಘದ ಎಲ್ಲ ಸದಸ್ಯರ ಸಹಕಾರದೊಂದಿಗೆ ಪಾರದರ್ಶಕ ಆಡಳಿತ ನೀಡುವುದರ ಜೊತೆಗೆ ರೈತರು ಹಾಗೂ ಸದಸ್ಯರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಈ ಹಿಂದಿನ ಅಧ್ಯಕ್ಷ ಬಿರಡಹಳ್ಳಿ ಮಧು ಅವರು ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ನಿಖಿಲ್ ಮೋಹನ್ ಅಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು ೧೧ ಸದಸ್ಯರ ಬಲ ಹೊಂದಿರುವ ಈ ಸಹಕಾರ ಸಂಘದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ೧೦ ಸದಸ್ಯರು ಇದ್ದು, ಕಾಂಗ್ರೆಸ್ ಬೆಂಬಲಿತ ಒಬ್ಬ ಸದಸ್ಯರಿದ್ದಾರೆ. ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಜಯರಾಜ್ ಮುಂದುವರಿದಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಪ್ರಧಾನ ಕಾರ್ಯದರ್ಶಿ ಅಗ್ನಿ ಸೋಮಶೇಖರ್, ಮುಖಂಡರಾದ ನರೇಶ್, ಶಶಿಕುಮಾರ್, ಬಸವಣ್ಣ, ಬನ್ನಹಳ್ಳಿ ಪುನೀತ್, ಜಯಪ್ರಕಾಶ್, ಬಿರಡಹಳ್ಳಿ ಮಧು, ರಾಜ್ ಕುಮಾರ್, ಆಶೀರ್ವಾದ್ ಹಾಗೂ ಜೆಡಿಎಸ್ ಮುಖಂಡರಾದ ಕವನ್ ಗೌಡ, ಸುದೀಶ್ ಕೆಲಗಳಲೆ, ಚೈತ್ರಾ ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು, ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.