- ರಾಗಿಯಿಂದ ಧರೆಯಲ್ಲಿ ತೇವಾಂಶ ಸಂಗ್ರಹ । ಕಡಿಮೆ ನೀರಿನಲ್ಲಿಯೂ ರಾಗಿ ಫಸಲು ಅಧಿಕ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಳೆ ಕೊರತೆ ಇದ್ದರೂ ರಾಗಿ ಬೆಳೆಯಬಹುದು. ರಾಗಿಯು ಬರಗಾಲವನ್ನು ತಡೆದುಕೊಳ್ಳುವ ಮತ್ತು ಕಡಿಮೆ ನೀರಿನಲ್ಲಿ ಬೆಳೆಯುವ ಸಾಮರ್ಥ್ಯವಿರುವ ಬೆಳೆಯಾಗಿದೆ. ಆದರೆ ಉತ್ತಮ ಇಳುವರಿಗೆ ನಿರ್ದಿಷ್ಟ ಕ್ರಮಗಳನ್ನು ಅನುಸರಿಸುವುದು ಅವಶ್ಯಕ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೂಪ ಅವರು ತಿ‍ಳಿಸಿದರು.

ಕೃಷಿ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಧೆ ವತಿಯಿಂದ ಕೋಡಿಉಗನೆ ಗ್ರಾಮದಲ್ಲಿ 2026-27ನೇ ಸಾಲಿನ ಆತ್ಮ ಯೋಜನೆಯಡಿ ಕಿಸಾನ್‌ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಳೆ ಕೊರತೆ ಇರುವ ಪ್ರದೇಶಗಳಲ್ಲಿ ದೀರ್ಘಾವಧಿ ತಳಿಗಳ ಬದಲು ಕಡಿಮೆ ಅವಧಿಯಲ್ಲಿ ಬೆಳೆಯುವ ಸುಧಾರಿತ ತಳಿಗಳನ್ನು ತಜ್ಞರ ಸಲಹೆ ಪಡೆದು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಸಾಲು ಬಿತ್ತನೆ ಮಾಡುವುದರಿಂದ ಸಸಿಗಳ ಮಧ್ಯೆ ಸೂಕ್ತ ಅಂತರವಿರುತ್ತದೆ. ಇದರಿಂದ ಸಸಿಗಳು ತೇವಾಂಶಕ್ಕಾಗಿ ಪೈಪೋಟಿ ನಡೆಸುವುದು ತಪ್ಪುತ್ತದೆ ಮತ್ತು ಮಣ್ಣಿನಲ್ಲಿರುವ ತೇವಾಂಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತವೆ. ಮಣ್ಣಿನ ಹಸಿ ಕಾಪಾಡುವುದು ಹೊಲದಲ್ಲಿ ಕಳೆಗಳನ್ನು ತೆಗೆದು ಆ ಕಳೆಗಳನ್ನು ಅಥವಾ ಎಲೆಗಳನ್ನು ಮಣ್ಣಿನ ಮೇಲೆ ಹರಡುವುದರಿಂದ ತೇವಾಂಶ ಆವಿಯಾಗುವುದನ್ನು ತಡೆಯಬಹುದು. ರಾಗಿ ಬೆಳೆಗೆ ಎರೆಹುಳು ಗೊಬ್ಬರ ಅಥವಾ ಕಾಂಪೋಸ್ಟ್ ಬಳಸುವುದರಿಂದ ಮಣ್ಣಿನ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚುತ್ತದೆ. ರಾಗಿಯು ತೇವಾಂಶದ ಕೊರತೆಯ ಸಂದರ್ಭದಲ್ಲೂ ಚೇತರಿಸಿಕೊಳ್ಳುವ ಅತ್ಯುತ್ತಮ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು.ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಬಂಧಿಗೌಡನಹಳ್ಳಿ ನಟರಾಜು ಮಾತನಾಡಿ, ರಸಗೊಬ್ಬರಗಳ ಬದಲಿಗೆ ಸಾವಯವ ಗೊಬ್ಬರಗಳನ್ನು ಬಳಸುವುದು ಮಣ್ಣಿನ ಆರೋಗ್ಯವನ್ನು ದೀರ್ಘಕಾಲದವರೆಗೆ ಕಾಪಾಡಲು ಮತ್ತು ಉತ್ತಮ ಇಳುವರಿಯನ್ನು ಪಡೆಯಲು ಅತ್ಯುತ್ತಮ ಮಾರ್ಗವಾಗಿದೆ. ಇವುಗಳು ಪರಿಸರಸ್ನೇಹಿಯಾಗಿದ್ದು, ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ನಿಧಾನವಾಗಿ ಬಿಡುಗಡೆ ಮಾಡುತ್ತವೆ. ಸಾವಯವ ಗೊಬ್ಬರದ ಪ್ರಯೋಜನಗಳುಮಣ್ಣಿನ ಫಲವತ್ತತೆ ಹೆಚ್ಚಳವಾಗುತ್ತದೆ. ಇದು ಮಣ್ಣಿನಲ್ಲಿರುವ ಜೀವಿಗಳು ಮತ್ತು ಎರೆಹುಳುಗಳ ಚಟುವಟಿಕೆಯನ್ನು ಉತ್ತೇಜಿಸಿ ಮಣ್ಣಿನ ರಚನೆಯನ್ನು ಸುಧಾರಿಸುತ್ತದೆ. ಮಣ್ಣಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ. ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳು ನಿಧಾನವಾಗಿ ಸಿಗುತ್ತವೆ ಎಂದು ತಿಳಿಸಿದರು.


ರಾಸಾಯನಿಕ ಗೊಬ್ಬರಗಳಂತೆ ಮಣ್ಣಿನಲ್ಲಿ ಯಾವುದೇ ಹಾನಿಕಾರಕ ಲವಣಗಳು ಅಥವಾ ವಿಷಕಾರಿ ಅಂಶಗಳು ಶೇಖರಣೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ರೈತರು ತಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಸಿಗುವ ತ್ಯಾಜ್ಯಗಳನ್ನು ಬಳಸಿಕೊಂಡು ಸಾವಯವ ಗೊಬ್ಬರ ತಯಾರು ಮಾಡಿಕೊಳ್ಳುವ ಮೂಲಕ ಕೃಷಿ ವೆಚ್ಚ ಕಡಮೆ ಮಾಡಿಕೊಂಡು ಮಣ್ಣಿನ ಆರೋಗ್ಯ ಕಾಪಾಡಲು ಮುಂದಾಗುವಂತೆ ಸಲಹೆ ನೀಡಿದರು.ಇಪ್ಕೋ ಕಂಪನಿಯ ಭಗತ್‌ ಎನ್‌. ಡ್ರೋನ್‌ ಮೂಲಕ ನ್ಯಾನೋ ಯುರಿಯಾ ಮತ್ತು ಡಿಎಪಿ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಕೃಷಿ ಇಲಾಖೆ ಸಹಾಯಕ ತಾಂತ್ರಿಕ ಅಧಿಕಾರಿ ನಂದಿನಿ, ಸಿಬ್ಬಂದಿ ವರ್ಗದವರು, ರೈತರು ಇದ್ದರು.

-2ಸಿಎಚ್ಎನ್‌10ಚಾಮರಾಜನಗರ ಕೃಷಿ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಧೆ ವತಿಯಿಂದ ಕೋಡಿಉಗನೆ ಗ್ರಾಮದಲ್ಲಿ 2026-27ನೇ ಸಾಲಿನ ಆತ್ಮ ಯೋಜನೆಯಡಿ ಕಿಸಾನ್‌ಗೋಷ್ಠಿ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೂಪ ಮಾತನಾಡಿದರು.