ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಮಠಮಾನ್ಯಗಳ ಪರಂಪರೆಯಿಂದ ವ್ಯಕ್ತಿಯ ಬದುಕು ಸದೃಢಗೊಳ್ಳಲು ಸಾಧ್ಯ. ಇದೇ ಮಠಗಳು ನೀಡುತ್ತಿರುವ ಶಿಕ್ಷಣ ಹಾಗೂ ವಸತಿ ವಿದ್ಯಾರ್ಥಿಗಳ ಬದುಕನ್ನು ರೂಪಿಸುತ್ತಿದೆ ಎಂದು ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಹೋಬಳಿ ಕೇಂದ್ರದ ಪುರವರ್ಗ ಹಿರೇಮಠದಲ್ಲಿ ಶ್ರೀ ಮಠದ ಭಕ್ತರು ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಶ್ರೀ ಮಹೇಶ್ವರ ಶ್ರೀಗಳ 52 ಜನ್ಮವರ್ಧಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಠಮಾನ್ಯಗಳು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯ ಧರ್ಮ ಸಂಸ್ಕೃತಿಯ ನೆಲಗಟ್ಟಿನ ಬಗ್ಗೆ ತಿಳಿಸುವ ಕೆಲಸವನ್ನು ಮಾಡುತ್ತಿದೆ. ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಕೊಂಡರೆ ಬದುಕಲ್ಲಿ ಸಾರ್ಥಕತೆಯನ್ನು ಕಾಣಲು ಸಾಧ್ಯ. ಜೂನ್ ತಿಂಗಳು ಮುಗಿದರೂ ಮಳೆಯಾಗುತ್ತಿಲ್ಲ .ಇದರಿಂದ ರೈತಾಪಿ ವರ್ಗ ಪ್ರತಿನಿತ್ಯ ಮಳೆಗಾಗಿ ದೇವರನ್ನು ಪ್ರಾರ್ಥಿಸುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತರ ಬದುಕು ಹಸನಾಗಲಿ ಎಂದು ದೇವರನ್ನು ಪ್ರಾರ್ಥಿಸೋಣ ಎಂದರು.

ನಮ್ಮ 52ನೇ ವರ್ಷದ ಜನ್ಮದಿನವನ್ನು ಶ್ರೀ ಮಠದ ಭಕ್ತರು ಹಾಗೂ ಗ್ರಾಮಸ್ಥರು ಆಚರಿಸುತ್ತಿದ್ದಾರೆ. ಪುರ ವರ್ಗ ಹಿರೇಮಠದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಕ್ಷಣ ಸೇರಿದಂತೆ ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸ್ಪಂದಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಧಾರ್ಮಿಕ ಪರಂಪರೆ ಉಳಿಸುವ ನಿಟ್ಟಿನಲ್ಲಿ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೆಚ್ಚು ಶ್ರಮಿಸುತ್ತಿದ್ದಾರೆ. ಆಧುನಿಕ ಯುಗದಲ್ಲಿ ನಾವೆಲ್ಲರೂ ವೈಜ್ಞಾನಿಕ ಯುಗಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದೇವೆ. ಆದರೆ ಎಷ್ಟೇ ವೈಜ್ಞಾನಿಕವಾಗಿ ಬೆಳೆದರೂ ನಮ್ಮ ಮಣ್ಣಿನ ನೆಲಗಟ್ಟಿನ ಪಾವಿತ್ರ್ಯತೆಯನ್ನು ಎಂದು ಮರೆಯಬಾರದು. ಈ ಬಗ್ಗೆ ಎಲ್ಲರೂ ಚಿಂತಿಸುವ ಅಗತ್ಯವಿದೆ ಎಂದರು.ಶ್ರೀಗಳ ಹುಟ್ಟುಹಬ್ಬಕ್ಕೆ ನಾಗರಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಜೆ ಸೋಮನಾಥ್ ಸೇರಿದಂತೆ ಹಲವು ಗಣ್ಯರು ಶುಭಕೋರಿದರು.ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಎನ್ ಎಸ್ ಮಂಜುನಾಥ್, ನಟರಾಜ ಯಾದವ್, ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಎನ್‌ ಸಿ ಕುಮಾರಸ್ವಾಮಿ, ಅರ್ಚಕರಾದ ಪ್ರಸನ್ನ ಕೇಶವಚಾರ್‌, ರವೀಶ್ ಆಚಾರ್, ಪ್ರಮುಖರಾದ ಹೋಟೆಲ್ ಗುರು, ವಿನಯ್ ಬಸವಲಿಂಗಪ್ಪ, ಎನ್. ಎನ್ ಮನು, ಹೋಟೆಲ್ ಮಂಜು, ನಾಗರಾಜ್, ಪಟೇಲ್ ಮುನ್ನ, ಹೋಟೆಲ್ ರಾಜಣ್ಣ, ತ್ರಿಣೇಶ್, ಪ್ರದೀಪ್, ವಿರೂಪಾಕ್ಷ, ಸೇರಿದಂತೆ ಶ್ರೀಮಠದ ಭಕ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.