ಕನ್ನಡಪ್ರಭ ವಾರ್ತೆ ಪಾಂಡವಪುರ
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಪುತ್ರ ಜೆಡಿಎಸ್ ಯುವ ನಾಯಕ ಸಿ.ಪಿ.ಶಿವರಾಜು ಹುಟ್ಟುಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜೆಡಿಎಸ್ ಪಕ್ಷದ ಮುಖಂಡರು, ಅಭಿಮಾನಿಗಳು ವಿಜೃಂಭಣೆಯಿಂದ ಆಚರಿಸಿದರು.ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಚಿನಕುರಳಿ ಗ್ರಾಮದ ಶ್ರೀಗಣಪತಿ ದೇವಸ್ಥಾನ, ಶ್ರೀರಾಮಾಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಸಿ ಬಳಿಕ ತಂದೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ತಾಯಿ ನಾಗಮ್ಮ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇದೇವೇಳೆ ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಬಳಿಕ ರಾಗಿಮುದ್ದನಹಳ್ಳಿ, ಡಿಂಕಾ, ಬನ್ನಂಗಾಡಿ, ಕಟ್ಟೇರಿ, ಅರಳಕುಪ್ಪೆ, ಕ್ಯಾತನಹಳ್ಳಿ, ಕೆನ್ನಾಳು, ಕೆ.ಬೆಟ್ಟಹಳ್ಳಿ, ಕಣಿವೆಕೊಪ್ಪಲು, ಹೊನಗನಹಳ್ಳಿ, ನಾರಾಯಣಪುರ, ಕೆರೆತೊಣ್ಣೂರು, ಜಕ್ಕನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ, ಅನ್ನ ಸಂತರ್ಪಣೆ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಿದರು. ದುದ್ದಹೋಬಳಿಯ ಎಲ್ಲಾ ಗ್ರಾಪಂಗಳಿಂದ ದುದ್ದ ಕೇಂದ್ರ ಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಿದರು.ಪಟ್ಟಣದಲ್ಲಿ ಚಿಕ್ಕಾಡೆ ತಿಮ್ಮೇಗೌಡರ ಸಾಮಿಲ್ ಬಳಿ ಚೇತನ್, ಅನೀಲ್, ಪ್ರಸನ್ನ, ಆರ್.ಸೋಮಶೇಖರ್, ಗಿರೀಶ್ ಸೇರಿ ನೂರಾರು ಅಭಿಮಾನಿಗಳು, ಹಿತೈಷಿಗಳು, ಬೃಹತ್ ಕಾರ್ಯಕ್ರಮ ನಡೆಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.
ತಾಲೂಕಿನ ಎಲೆಕೆರೆ ಹ್ಯಾಂಡ್ ಪೋಸ್ಟ್‌ನ ರುತ್ವಿಅಕ್ಷಯ್ ಕನ್ವೆನ್ಷನ್ ಹಾಲ್‌ನಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಚಲುವರಾಜು ಹಾಗೂ ಉದ್ಯಮಿ ಸಿ.ಅಕ್ಷಯ್ ನೇತೃತ್ವದಲ್ಲಿ ಸಿ.ಪಿ.ಶಿವರಾಜು ಪುಟ್ಟರಾಜು ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಿದರು. ಶಿವರಾಜು ಬರುತ್ತಿದ್ದಂತೆಯೇ ಪಟಾಕಿ ಸಿಡಿಸಿ ಹೂಗುಚ್ಛ ನೀಡಿ ಸ್ವಾಗತಿಸಿದರು.
ಬಳಿಕ ಶಿವರಾಜು ಎಂಬ ಹೆಸರಿನ ಬೃಹತ್ ಕೇಕ್ ಕತ್ತರಿಸಿ, ಬೃಹತ್ ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ಬಳಿಕ ಕಾರ್ಯಕರ್ತರಿಗೆ ಮಾಂಸಹಾರ ಊಟ ಹಾಕಿಸುವ ಮೂಲಕ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಚಲುವರಾಜು ಮಾತನಾಡಿ, ಯುವ ನಾಯಕ ಸಿ.ಪಿ.ಶಿವರಾಜು ಅವರು ತಂದೆ ಮಾದರಿಯಲ್ಲಿಯೇ ಸರಳ, ಸಜ್ಜನಿಕೆ ವ್ಯಕ್ತಿತ್ವ ರೂಢಿಸಿಕೊಂಡಿದ್ದಾರೆ. ಕಷ್ಟದಲ್ಲಿ ಇರುವರಿಗೆ ಸಹಕಾರ ನೀಡುವ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ಇವರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಧಿಕಾರಿಗಳು ದೊರೆಯಲಿ ಜತೆಗೆ ತಾಯಿ ಚಾಮುಂಡೇಶ್ವರಿ ಇವರಿಗೆ ಒಳ್ಳೆಯದು ಮಾಡಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಹರವು ಗ್ರಾಪಂನ ಎಲ್ಲಾ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.ಸಿ.ಪಿ.ಶಿವರಾಜು ಮಾತನಾಡಿ, ನನ್ನ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನಾದ್ಯಂತ ಜೆಡಿಎಸ್ ಪಕ್ಷದ ಹಿರಿಯರು, ಮುಖಂಡರು, ಕಾರ್ಯಕರ್ತರು , ಅಭಿಮಾನಿಗಳು ಎಲ್ಲರೂ ಸೇರಿ ವಿಜೃಂಭಣೆಯಿಂದ ಹಬ್ಬದಂತೆ ಆಚರಣೆ ಮಾಡಿದ್ದೀರಿ. ನಿಮ್ಮೆಲ್ಲರ ಈ ಪ್ರೀತಿ, ಅಭಿಮಾನಕ್ಕೆ ಬೆಲೆಕಟ್ಟಲಾಗದು. ನನ್ನ ಇಷ್ಟೊಂದು ಪ್ರೀತಿಯಿಂದ ಹಾರೈಸಿದ್ದೀರ. ನಿಮ್ಮ ಋಣ ತೀರಿಸಲಾಗದು, ಎಲ್ಲರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.