ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಏನೂ ಮಾಡದೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿ ನಾಯಕರು ಅವರಿಗಾಗಿ ಏನೂ ಮಾಡದೆ ಇದ್ದರೂ ಪರವಾಗಿಲ್ಲ. ಇನ್ನು ಮುಂದೆ ಶರಾವತಿ ಸಂತ್ರಸ್ಥರ ಕುರಿತು ಏನೂ ಮಾತನಾಡದೆ ಇದ್ದರೆ ಅದೇ ದೊಡ್ಡ ಉಪಕಾರ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶರಾವತಿ ಸಂತ್ರಸ್ಥರ ಕುರಿತು ಪದೇ ಪದೇ ಮಾತನಾಡುತ್ತಾ ಅವರಿಗೆ ನೋವು ಕೊಡಬಾರದು ಎಂದು ಹೇಳಿದರು.
ಬಿಜೆಪಿಯವರಿಗೆ ರೈತರ ಕುರಿತು ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಅಷ್ಟು ಮಾತ್ರವಲ್ಲದೆ, ಶರಾವತಿ ಸಂತ್ರಸ್ಥರ ಪರವಾಗಿ ಇಡೀ ಜೀವಮಾನ ಹೋರಾಟ ನಡೆಸಿದ, ವಿಧಾನ ಸಭಾಧ್ಯಕ್ಷರಾದ ಸಂದರ್ಭದಲ್ಲಿ ಸ್ವಪಕ್ಷೀಯ ಸಚಿವರನ್ನು ಕೂಡ ರೈತರಿಗಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಕಾಗೋಡು ತಿಮ್ಮಪ್ಪ ನವರ ಕುರಿತು ಅನಗತ್ಯವಾಗಿ ಟೀಕಿಸಬಾರದು. ಅವರ ಹೆಸರು ಹೇಳಲು ಕೂಡ ಇವರಿಗೆ ಯೋಗ್ಯತೆ ಇಲ್ಲ ಎಂದು ವಾಕ್ ಪ್ರಹಾರ ನಡೆಸಿದರು.ಸುಳ್ಳು ಹೇಳುವುದೇ ಬಿಜೆಪಿಯವರ ಗ್ಯಾರಂಟಿ. ರೈತರು ಕೃಷಿ ಉಪಕರಣಗಳ ಮೇಲೆ ಪಡೆಯುವ ಸಾಲಕ್ಕೂ ಶೇ.12ರಷ್ಟು ಜಿಎಸ್‌ಟಿ ಹಾಕಲಾಗುತ್ತಿದೆ. ಇದು ರೈತ ವಿರೋಧಿ ನಿಲುವಾಗಿದೆ. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ಇದನ್ನು ರದ್ದುಗೊಳಿಸಲಾಗುತ್ತದೆ. ಸ್ವಾಮಿನಾಥನ್ ವರದಿ ಜಾರಿಗೆ ಬದ್ಧರಾಗಿದ್ದು, ಕನಿಷ್ಟ ಬೆಂಬಲ ಬೆಲೆ ಘೋಷಿಸಲಾಗುವುದು ಎಂದರಲ್ಲದೆ, ಈಗಾಗಲೇ ರಾಜ್ಯ ಸರ್ಕಾರವು ಏಪ್ರಿಲ್‌ನಿಂದಲೇ ಜಾರಿಗೆ ಬರುವಂತೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರು. ಸಾಲ ನೀಡುವ ಆದೇಶ ಹೊರಡಿಸಿದ್ದು, ಚುನಾವಣೆ ಕಾರಣಕ್ಕೆ ಇದು ಜೂನ್‌ನಿಂದ ಜಾರಿಗೆ ಬರಲಿದೆ. ಮಧ್ಯಮ ಮತ್ತು ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಮೂಲಕ 500 ಕೋಟಿ ರು. ನೀಡಿದೆ ಎಂದು ಹೇಳಿದರು.
ದೇಶದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಯಂತೆ ಎಲ್ಲ ಐದೂ ಗ್ಯಾರಂಟಿಗಳನ್ನು ಈಡೇರಿಸಿ ಕೊಟ್ಟು ಮಾತು ಉಳಿಸಿಕೊಳ್ಳಲಾಗಿದೆ ಎಂದು ಹೇಳಿದರು.ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಆಗಮಿಸಿದ್ದು, ಅವರ ಆಗಮನದಿಂದ ನಮ್ಮ ಅಭ್ಯರ್ಥಿಯ ಗೆಲುವಿನ ಗೆರೆ ಇನ್ನಷ್ಟು ಹತ್ತಿರವಾಗಿದೆ ಎಂದರು. ಗೋಷ್ಠಿಯಲ್ಲಿ ಕೆಪಿಸಿಸಿ ಮುಖ್ಯ ವಕ್ತಾರ ಆಯನೂರು ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಷಡಾಕ್ಷರಿ, ರಾಜ್ಯ ಭೋವಿ ಮಂಡಳಿ ಅಧ್ಯಕ್ಷ ರವಿಕುಮಾರ್, ಜಿಲ್ಲಾ ವಕ್ತಾರ ರಮೇಶ್ ಶೆಟ್ಟಿ, ಧೀರರಾಜ್ ಹೊನ್ನವಿಲೆ, ಶಿ. ಜು. ಪಾಶಾ, ಪದ್ಮನಾಭ, ರಮೇಶ್ ಹೆಗ್ಡೆ, ಶಶಿ ಮತ್ತಿತರರು ಉಪಸ್ಥಿತರಿದ್ದರು.