ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರಕಳೆದ ೪೫ ವರ್ಷಗಳಿಂದ ಶ್ರೀನಿವಾಸಪುರ ತಾಲೂಕಿನಲ್ಲಿಯೇ ರಾಜಕೀಯ ಮಾಡಿಕೊಂಡು ಬಂದಿದ್ದೇನೆ, ಶ್ರೀನಿವಾಸಪುರ ಜನರು ಸೋಲಿಸಿಯೂ ಇದ್ದಾರೆ, ಗೆಲ್ಲಿಸಿಯೂ ಇದ್ದಾರೆ. ಆದರೆ, ಗೆಲುವು ಮತ್ತು ಸೋಲನ್ನು ಸಮಚ್ಚಿತ್ತವಾಗಿ ಸ್ವೀಕರಿಸಿ ಅವಕಾಶ ಸಿಕ್ಕಾಗಲೆಲ್ಲಾ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆಯೇ ಹೊರೆತು ನನ್ನನ್ನು ಗೆಲ್ಲಿಸಿಕೊಟ್ಟ ಯಾವುದೇ ರೀತಿಯ ಕಳಂಕ ತರುವಂತಹ ಕೆಲಸ ಮಾಡಿಲ್ಲ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಶ್ರೀನಿವಾಸಪುರ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಕೋಲಾರ ಲೋಕಸಭಾ ಎನ್‌ಡಿಎ ಅಭ್ಯರ್ಥಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಜೆಡಿಎಸ್ ಪಕ್ಷ ಯಾವತ್ತೂ ಸಭ್ಯಸ್ಥರಿಗೆ ಉತ್ತಮ ಅವಕಾಶ ಕೊಡುತ್ತದೆ, ಇದೀಗ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಸಭ್ಯಸ್ಥ ಅಭ್ಯರ್ಥಿಯನ್ನು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಾಯಕರು ಕೊಟ್ಟಿದ್ದಾರೆ, ಈ ಭಾರಿ ಲೋಕಸಭೆ ಚುನಾವಣೆಯಲ್ಲಿ ಸಭ್ಯಸ್ಥ ವ್ಯಕ್ತಿಯನ್ನು ಲೋಕಸಭೆಗೆ ಗೆಲ್ಲಿಸಿ ಕೊಡಬೇಕಿದೆ ಎಂದು ಮನವಿ ಮಾಡಿದರು.ಪ್ರಪಂಚದಲ್ಲಿಯೇ ಮಾವುಗೆ ಹೆಸರುವಾಸಿಯಾಗಿರುವ ಮಾವಿನ ನಗರಿಯ ಮೊಮ್ಮಗ ಇದೀಗ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾರೆ, ತಾಲೂಕಿನ ಜನತೆ ೪೫ ವರ್ಷದಿಂದ ನಿಮ್ಮ ತಾಲೂಕಿನ ಮಗ ನನ್ನನ್ನು ರಾಜಕೀಯವಾಗಿ ಆಶೀರ್ವದಿಸುತ್ತಾ ಬಂದಿದ್ದೀರಾ, ಇದೀಗ ನಿಮ್ಮ ತಾಲೂಕಿನ ಮೊಮ್ಮಗ ಲೋಕಸಭೆಗೆ ಸ್ಪರ್ಧಿಸಿದ್ದಾನೆ ನನಗೆ ಯಾವ ರೀತಿ ಆಶೀರ್ವಾದ ಮಾಡಿದ್ದೀರೋ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಲ್ಲೇಶ್‌ಬಾಬುಗೆ ಆಶೀರ್ವದಿಸಿ ಲೋಕಸಭೆಗೆ ಕಳಿಸಿಕೊಡಬೇಕಾಗಿ ಮನವಿ ಮಾಡಿದರು. ಲೋಕಸಭೆಗೆ ಆಯ್ಕೆಯಾಗುವ ಭರವಸೆ ಇದೆ:
ಮಲ್ಲೇಶ್ ಬಾಬು ಜಿಲ್ಲೆಯ ಜನರ ಆಶೀರ್ವಾದದಿಂದ ಲೋಕಸಭಗೆ ಆಯ್ಕೆಯಾಗುವ ಭರವಸೆ ಇದೆ, ಅವರು ಲೋಕಸಭೆಗೆ ಆಯ್ಕೆಯಾದರೆ ರಾಜ್ಯ ಸರ್ಕಾರದ ಅನುದಾನಗಳನ್ನು ನಾನು ತಂದರೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನಗಳನ್ನು ಮಲ್ಲೇಶ್ ಬಾಬು ತರುವ ಮೂಲಕ ಶ್ರೀನಿವಾಸಪುರದಲ್ಲಿ ಆಗಬೇಕಾಗಿರುವ ಎಲ್ಲಾ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗುತ್ತವೆ, ಶಾಸಕನಾಗಿ ಆಯ್ಕೆಯಾಗಿ ಈಗಾಗಲೇ 10 ತಿಂಗಳು ಕಳೆದಿದೆ, ಇನ್ನೂ 5 ವರ್ಷ ಶಾಸಕನಾಗಿ ಮುಂದುವರೆಯುವ ಅದೃಷ್ಟ ನನಗೆ ಬಂದಿದೆ, ಮುಂದಿನ 5 ವರ್ಷ ನಾನು ಮತ್ತು ಮಲ್ಲೇಶ್ ಬಾಬು ಜೋಡೆತ್ತುಗಳ ರೀತಿ ಅಧಿಕಾರ ಮಾಡಲು ಸಹಕಾರಿಯಾಗುತ್ತದೆ ಎಂದರು.ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ನಮ್ಮ ಹಿರಿಯರು ಆದಂತಹ ವೆಂಕಟಶಿವಾರೆಡ್ಡಿ ನನಗೆ ರಾಜಕೀಯ ಮಾರ್ಗದರ್ಶಕರು. ಅವರ ಹಾದಿಯಲ್ಲಿ ಜನರ ಮಧ್ಯೆ ಬೆರೆತು ರಾಜಕೀಯ ಮಾಡಬೇಕು ಎಂದು ಬಯಸುತ್ತೇನೆ, 5 ಬಾರಿ ಶಾಸಕರಾಗಿ ಯಾವುದೇ ಕಳಂಕವಿಲ್ಲದೆ ರಾಜಕೀಯ ಮಾಡಿರುವ ರಾಜಕಾರಣಿಯಿದ್ದರೆ ಅದು ನಮ್ಮ ವೆಂಕಟಶಿವಾರೆಡ್ಡಿ, ರಾಜ್ಯದಲ್ಲಿಯೇ ಇಂತಹ ಪ್ರಬುದ್ಧ ರಾಜಕಾರಣಿಯನ್ನು ಹುಡುಕಿದರೂ ಸಿಗಲ್ಲ, ಅವರ ಅವಧಿಯಲ್ಲಿ ನಾನು ರಾಜಕೀಯಕ್ಕೆ ಬಂದಿರುವುದು ನನ್ನ ಅದೃಷ್ಟ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲಾ ಆಶೀರ್ವಾದ ಮಾಡಿದರೆ ವೆಂಕಟಶಿವಾರೆಡ್ಡಿ ಸಲಹೆಗಳನ್ನು ಪಡೆದು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ತಾಲೂಕು ಅಧ್ಯಕ್ಷ ಆರ್.ಚಂದ್ರಶೇಖರ್, ಜೆಡಿಎಸ್ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ, ಪುರಸಭಾ ಸದಸ್ಯರಾದ ಏಜಾಜ್, ಶಬ್ಬೀರ್ ಅಹಮದ್, ರಾಜು, ಏಜು ಮಾಜಿ ಸದಸ್ಯ ಶ್ರೀನಿವಾಸ್, ತಾಪಂ ಮಾಜಿ ಸದಸ್ಯ ಹಳೆಪೇಟೆ ಮಂಜುನಾಥ್, ಕಾರ್ ಬಾಬು, ಪೂಲು ಶಿವಾರೆಡ್ಡಿ, ಬಿಜೆಪಿ ಶಿವಣ್ಣ ಹಾಜರಿದ್ದರು.