ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಪ್ರಸ್ತುತ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಪ್ರಾಥಮಿಕ ಶಿಕ್ಷಣ, ಶಿಕ್ಷಣ ಹಕ್ಕು ಕಾಯ್ದೆಯ ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಕುರಿತು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಬೇಕು ಎಂದು ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಆಗ್ರಹಿಸಿದರು.ಗುರುವಾರ ಇಬ್ರಾಹಿಂ ಮಸೀದಿ ಕೆಳಮಹಡಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ಸಿದ್ಧಪಡಿಸಿರುವ ವಿದ್ಯಾರ್ಥಿ-ಯುವಜನ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ - ಯುವಜನರ ಬೇಡಿಕೆಯ ವಿಚಾರಗಳನ್ನು ಸೇರಿಸಲು ಮತ್ತು ಈ ಹಕ್ಕೊತ್ತಾಯಗಳೇ ಚುನಾವಣೆಯ ಚರ್ಚಾ ವಿಷಯವಾಗಬೇಕು. ಜೊತೆಗೆ ವಿದ್ಯಾರ್ಥಿ-ಯುವಜನರ ಮತಗಳನ್ನು ನಿರ್ಣಯಿಸುವಂತೆ ಜನಾಭಿಪ್ರಾಯ ಮೂಡಿಸಲು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟವು ವಿದ್ಯಾರ್ಥಿ-ಯುವಜನ ಪ್ರಣಾಳಿಕೆಯನ್ನು ತಯಾರುಗೊಳಿಸಿದೆ. ಇದರ ಪ್ರಕಾರ ಸಂವಿಧಾನದ ಶೆಡ್ಯೂಲ್ 7ರ ಸಮವರ್ತಿ ಪಟ್ಟಿಯಲ್ಲಿರುವ ಶಿಕ್ಷಣದ ವಿಷಯವನ್ನು ಪುನಃ ರಾಜ್ಯ ಪಟ್ಟಿಗೆ ಸೇರಿಸಬೇಕು ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗಳನ್ನು ಮುಚ್ಚುವ/ವಿಲೀನಗೊಳಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ಜಾರಿಯಲ್ಲಿವೆ. ಇದು ಕೇವಲ ಸಾರ್ವಜನಿಕ ಶಾಲಾ ವ್ಯವಸ್ಥೆಯ ಮೇಲಿನ ಆಕ್ರಮಣವಲ್ಲ, ಬದಲಿಗೆ ಇದು ವಿದ್ಯಾರ್ಥಿಗಳನ್ನು, ವಿಶೇಷವಾಗಿ ಅಂಚಿನಲ್ಲಿರುವ ಸಮುದಾಯಗಳನ್ನು ಶಿಕ್ಷಣ ವ್ಯವಸ್ಥೆಯಿಂದ ಹೊರದೂಡುತ್ತದೆ. ಆದ್ದರಿಂದ, ಅಂತಹ ಯಾವುದೇ ಪ್ರಯತ್ನಗಳನ್ನು ತಕ್ಷಣವೇ ನಿಲ್ಲಿಸಬೇಕು, ಇದರ ಬದಲಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ನಾವು ಸರ್ಕಾರಗಳನ್ನು ಒತ್ತಾಯಿಸುತ್ತೇವೆ ಎಂದರು.ರಾಷ್ಟ್ರೀಯ ಶಿಕ್ಷಣ ನೀತಿ -2020 ಅನ್ನು ರದ್ದುಗೊಳಿಸಿ, ಆಯಾ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ರಾಜ್ಯ ಶಿಕ್ಷಣ ನೀತಿ ರೂಪಿಸಬೇಕು. ಮತ್ತು ಎನ್‌ಸಿಎಫ್ -2023 ಸೇರಿದಂತೆ ಎನ್‌ಇಪಿಯ ಎಲ್ಲಾ ಅಂಶಗಳ ಅನುಷ್ಠಾನವನ್ನು ಕೂಡಲೇ ರದ್ದುಗೊಳಿಸಬೇಕು. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಿಟ್ಟುಕೊಂಡೆ ಈ ಪ್ರಕ್ರಿಯೆಯನ್ನು ಜಾರಿಗೊಳಿಸಬೇಕು ಎಂದರು
ಈ ವೇಳೆ ಎಸ್.ಐ.ಒ ಜಿಲ್ಲಾಧ್ಯಕ್ಷ ಮುಜಮ್ಮಿಲ್, ಇಳಕಲ್ ನಗರದ ಅಧ್ಯಕ್ಷ ಆಸಿಫ್ ಹುಣಚಗಿ, ದಲಿತ ವಿದ್ಯಾರ್ಥಿ ಪರಿಷತ್‌ನ ಇಳಕಲ್ಲ ನಗರದ ಅಧ್ಯಕ್ಷ ಸಿದ್ದಾರ್ಥ ಚಲವಾದಿ, ಎಸ್‌ಐಒ ಸ್ಥಾನೀಯ ಕಾರ್ಯದರ್ಶಿ ಉಸ್ಮಾನ್ ಗನಿ ಶೀವನಗುತ್ತಿ, ಸದಸ್ಯ ಅತಿಕ್ ಬಿಳೇಕುದ್ರಿ ಮತ್ತಿತರರು ಇದ್ದರು.