ಬಿಜಿಪಿ ಎಂದಿಗೂ ದಲಿತರ ವಿರೋಧಿಯಲ್ಲ

| Published : Jan 16 2025, 12:46 AM IST

ಸಾರಾಂಶ

ಶಿಕಾರಿಪುರ: ಭಾರತೀಯ ಜನತಾಪಕ್ಷ ಎಂದಿಗೂ ದಲಿತ ವಿರೋಧಿಯಲ್ಲ. ದಲಿತರ ಉದ್ಧಾರ ಪರಮಗುರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಶಿಕಾರಿಪುರ: ಭಾರತೀಯ ಜನತಾಪಕ್ಷ ಎಂದಿಗೂ ದಲಿತ ವಿರೋಧಿಯಲ್ಲ. ದಲಿತರ ಉದ್ಧಾರ ಪರಮಗುರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಬುಧವಾರ ಸಂವಿಧಾನ ಗೌರವ ಅಭಿಯಾನದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು ಕಾಂಗ್ರೆಸ್ ಪಕ್ಷ. ತನ್ನ ಅಧಿಕಾರಕ್ಕಾಗಿ ಹಿಂದುಳಿದವರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ, ಕಾಂಗ್ರೆಸ್ ಪಕ್ಷದ ಈ ಡೋಂಗಿ ಜಾತ್ಯಾತೀತ ವರ್ತನೆ ತಾವು ಹಿಂದುಳಿದವರ ಪರ ಎನ್ನುವ ನಾಟಕವಾಗಿದೆ ಎಂದು ದೂರಿದರು.

ಅಂಬೇಡ್ಕರ್ ರವರನ್ನು ರಾಜಕೀಯವಾಗಿ ಸೋಲಿಸಲು ಕಾಂಗ್ರೆಸ್ ಪಕ್ಷ ತಯಾರಿ ನಡೆಸಿತ್ತು. ಅಲ್ಲದೆ ಅವರು ತೀರಿಕೊಂಡಾಗ ದೆಹಲಿಯಲ್ಲಿ ಅವರ ಶವ ಸಂಸ್ಕಾರಕ್ಕೆ 3*6 ಜಾಗ ಕೊಡಲು ಯೋಚನೆ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.

ನಮ್ಮ ಕುಟುಂಬ ಯಾವತ್ತೂ ಕೂಡ ಜಾತಿ ವಿರೋಧಿ ಮಾಡಿಲ್ಲ. ನಮ್ಮ ತಾಯಿಯ ಕಾಲದಿಂದಲೂ ಎಲ್ಲಾ ಜಾತಿಯವರ ಜೊತೆ ಸಾಮರಸ್ಯ ಬೆಸುಗೆ ನಮ್ಮಲ್ಲಿ ಇದೆ ಎಂದ ಅವರು, ಇವತ್ತು ಕುಟುಂಬ ಸಮೇತರಾಗಿ ದಲಿತ ಸಮುದಾಯದ ತಾವೆಲ್ಲ ಬಂದು ನಮ್ಮ ಮನೆಯ ಆಥಿತ್ಯ ಸ್ವೀಕರಿಸಿರುವುದು ತುಂಬಾ ಸಂತೋಷವಾಗಿದೆ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮಸ್ಥಳ, ಶಿಕ್ಷಣ ಕ್ಷೇತ್ರ ಸೇರಿದಂತೆ ನಮ್ಮ ಸರ್ಕಾರ ಪಂಚ ಕ್ಷೇತ್ರ ಪರಿವರ್ತನೆ ಮಾಡಿದೆ ಎಂದು ತಿಳಿಸಿದರು.

ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ಇಂದು ದೇಶಾದ್ಯಂತ ವರ್ಷ ಪೂರ್ತಿ ಶಾಸಕರ ಗೃಹದಲ್ಲಿ ಭೀಮ ಪರಿವಾರದವರನ್ನು ಸನ್ಮಾನಿಸಿ ಗೌರವಿಸಿ ಸಂವಿಧಾನದ ಬಗ್ಗೆ ತಿಳುವಳಿಕೆ ಕೊಡುವ ವಿಚಾರವಾಗಿ ಭಾರತೀಯ ಜನತಾ ಪಾರ್ಟಿ ಕೈಗೊಂಡಿರುವ ಈ ಕಾರ್ಯಕ್ರಮ ಹೆಮ್ಮೆಯ ಸಂಗತಿ ಎಂದರು.

ತಾಲೂಕು ಬಿಜೆಪಿ ಉಪಾಧ್ಯಕ್ಷ ಶಿವಣ್ಣ ಬಿಎಸ್ಎನ್ಎಲ್ ಮಾತನಾಡಿ, ಸಂವಿಧಾನಕ್ಕೆ ಚ್ಯುತಿ ಬಂದಾಗ ನಾವೆಲ್ಲ ಹೇಗೆ ಜಾಗೃತರಾಗಬೇಕು ಎಂಬುದೇ ಈ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.

ಇದೆ ವೇಳೆ ಸಂವಿಧಾನ ಪೀಠಿಕೆಯನ್ನು ಪ್ರಮಾಣ ಮಾಡುವುದರ ಮೂಲಕ ಬೋಧಿಸಲಾಯಿತು. ಬಳಿಕ ಭೀಮ ಬಳಗದ ದಂಪತಿಗಳನ್ನು ಶಾಸಕರ ಗೃಹದಲ್ಲಿ ಉಡಿತುಂಬುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ಪುರಸಭಾ ಅಧ್ಯಕ್ಷೆ ಶೈಲಜಾ ಯೋಗೀಶ್ ಮಡ್ಡಿ, ನಿವೃತ್ತ ಶಿಕ್ಷಕ ಚಂದ್ರಪ್ಪ, ಮಾಜಿ ಪುರಸಭಾ ಅಧ್ಯಕ್ಷ ವಸಂತಗೌಡ, ಮುಖಂಡ ಬೂದ್ಯಪ್ಪ, ಎಸ್ಸಿ ಬಿಜೆಪಿ ಮೋರ್ಚಾ ಅಧ್ಯಕ್ಷ ಈಶ್ವರಪ್ಪ ಹಾಗೂ ಭೀಮ ಪರಿವಾರದ ಮುಖಂಡರು ಹಾಗೂ ಸದಸ್ಯರು ಈ ಇದ್ದರು.