ಪರ್ಯಾಯ ಸ್ಥಳ ದೊರಕಿದಲ್ಲೇ ಇಂದಿರಾ ಕ್ಯಾಂಟೀನ್‌ ನಿರ್ಮಾಣ

| Published : Jan 16 2025, 12:46 AM IST

ಪರ್ಯಾಯ ಸ್ಥಳ ದೊರಕಿದಲ್ಲೇ ಇಂದಿರಾ ಕ್ಯಾಂಟೀನ್‌ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಪುರಸಭೆ ಸಾಮಾನ್ಯ ಸಭೆ ಅಧ್ಯಕ್ಷ ಹನುಮಂತಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಸಭೆಯಲ್ಲಿ ಇಂದಿರಾ ಕ್ಯಾಂಟೀನ್, ಬಾಪೂಜಿ ಭವನ ಮತ್ತು ಸ್ವಾಗತ ಕಮಾನು ನಿರ್ಮಾಣ ಬಗ್ಗೆ ಸುದೀರ್ಘ ಚರ್ಚೆ ಮಲೇಬೆನ್ನೂರಲ್ಲಿ ನಡೆಯಿತು.

- ಡಿಸಿ ಪತ್ರ ಮಾಹಿತಿ ತಿಳಿಸಿದ ಮುಖ್ಯಾಧಿಕಾರಿ ಭಜಕ್ಕನವರ್‌ । ಮಲೇಬೆನ್ನೂರು ಪುರಸಭೆ ಸಾಮಾನ್ಯ ಸಭೆ

- - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಪಟ್ಟಣದ ಪುರಸಭೆ ಸಾಮಾನ್ಯ ಸಭೆ ಅಧ್ಯಕ್ಷ ಹನುಮಂತಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಸಭೆಯಲ್ಲಿ ಇಂದಿರಾ ಕ್ಯಾಂಟೀನ್, ಬಾಪೂಜಿ ಭವನ ಮತ್ತು ಸ್ವಾಗತ ಕಮಾನು ನಿರ್ಮಾಣ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಮುಖ್ಯಾಧಿಕಾರಿ ಎಚ್‌.ಎನ್‌. ಭಜಕ್ಕನವರ್ ಮಾತನಾಡಿ, ಪಟ್ಟಣದ ಬಾಲಕರ ಮಾಧ್ಯಮಿಕ ಶಾಲೆ ಆವರಣದಲ್ಲಿ ಆರಂಭಿಸಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್ ವಿಷಯಕ್ಕೆ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯಡಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಈ ಹಿನ್ನೆಲೆ ಪರ್‍ಯಾಯ ಸ್ಥಳ ದೊರಕಿದಲ್ಲಿ ಬೇರೆಡೆ ಕ್ಯಾಂಟೀನ್ ಆರಂಭಿಸುವುದು ಹಾಗೂ ಬೇರೆ ಸ್ಥಳ ಲಭ್ಯವಿರದಿದ್ದಲ್ಲಿ ಅದೇ ಶಾಲೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಜಿಲ್ಲಾಧಿಕಾರಿ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಸಭೆಗೆ ತಿಳಿಸಿದರು.

ಮುಖ್ಯಾಧಿಕಾರಿ ಮಾತಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯರಾದ ನಯಾಜ್, ಸಾಬಿರ್‌ ಅಲಿ, ದಾದಾವಲಿ, ಆರೀಫ್, ಶಿವು, ಶಬ್ಬೀರ್ ಮಾತನಾಡಿ, ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ನಿಗದಿಯಾದ ಶಾಲಾವರಣವು ಸ್ಥಳವು ಸೂಕ್ತವಾಗಿದೆ. ಶೀಘ್ರವೇ ಅಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು. ಆಗ ಭಾಜಪ ಸದಸ್ಯ ರೇವಣಸಿದ್ದಪ್ಪ ಆಕ್ಷೇಪ ವ್ಯಕ್ತಪಡಿಸಿ, ಇಂದಿರಾ ಕ್ಯಾಂಟೀನ್ ವಿಷಯ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ನ್ಯಾಯಾಲಯದಲ್ಲಿದೆ. ಆದ್ದರಿಂದ ಈ ಬಗ್ಗೆ ಚರ್ಚೆ ಅನಗತ್ಯ ಎಂದರು.

ಪಟ್ಟಣಕ್ಕೆ ಸ್ವಾಗತ ಕಮಾನು ಅಳವಡಿಸಲು ಅನುದಾನ ಮೀಸಲಿದ್ದು, ವಿಳಂಬವೇಕೆ? ವಿದ್ಯುತ್ ಕಂಬ, ಕೇಬಲ್‌ಗಳು ಅಡ್ಡಿಯಾಗಿದ್ದು, ಬೆಸ್ಕಾಂ ಎಂಜಿನಿಯರ್‌ಗೆ ಪತ್ರ ಬರೆದು, ತೆರವುಗೊಳಿಸಿ ಎಂದು ಸಭೆಯಲ್ಲಿನ ಸದಸ್ಯರು ಮುಖ್ಯಾಧಿಕಾರಿ ಅವರಿಗೆ ತಾಕೀತು ಮಾಡಿದರು.

ಸದಸ್ಯ ಷಾ ಅಬ್ರಾರ್ ಮಾತನಾಡಿ, ಆಸ್ಪತ್ರೆಯಲ್ಲಿ ಒಳರೋಗಿಗಳು ಸಿಬ್ಬಂದಿ ಬಳಿಯೇ ಹೊರರೋಗಿಗಳಂತೆ ತೆರಳಿ ಇಂಜೆಕ್ಷನ್ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಅಗತ್ಯವೇನಿದೆ? ಅಲ್ಲದೇ, ವಾರ್ಡ್‌ಗಳಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆ ವೈದ್ಯರಿಗೆ ಪತ್ರ ಬರೆಯಿರಿ ಎಂದು ಆಗ್ರಹಿಸಿದರು.

ಮಲತ್ಯಾಜ್ಯ ಘಟಕಕ್ಕೆ ಸ.ನಂ. ೨೯ರಲ್ಲಿ ೩೪ ಗುಂಟೆ ಜಮೀನು ಸರ್ಕಾರದಿಂದ ಮಂಜೂರಾಗಿದೆ ಎಂದು ಸಹಾಯಕ ಎಂಜಿನಿಯರ್ ರಾಘವೇಂದ್ರ ಸಭೆ ಗಮನಕ್ಕೆ ತಂದರು.

ಶಿವಮೊಗ್ಗ-ಹರಿಹರ ರಸ್ತೆ ಅಗಲೀಕರಣದ ಕುರಿತು ಸದಸ್ಯ ಶಿವು ಮಾತನಾಡಿ, ವಿದ್ಯಾರ್ಥಿಗಳು, ವಯೋವೃದ್ಧರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯ ರಸ್ತೆ ಕೊರತೆಯಿಂದ ತೊಂದರೆಯಾಗುತ್ತಿದೆ. ಆ ಕಾರಣಕ್ಕಾಗಿ ರಸ್ತೆ ಅಗಲೀಕರಣ ಕ್ರಮ ಸೂಕ್ತವಿದೆ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಸಾರ್ವಜನಿಕ ಶೌಚಾಲಯ. ಬೀದಿದೀಪ, ಸರ್ಕಾರಿ ಕಾಲೇಜು ಆವರಣದಲ್ಲಿನ ಗಾಂಧಿ ಭವನದ ಕಟ್ಟಡ ತೆರವು, ಮಿನಿ ಟ್ಯಾಂಕ್‌ಗೆ ಪೈಪ್ ಲೈನ್ ಅಳವಡಿಸುವುದು, ವಿವಿಧ ಕಾಮಗಾರಿಗಳ ಬಗ್ಗೆ ಸಭೆ ಚರ್ಚೆ ನಡೆಸಿತು. ಅಧಿಕಾರಿ ಶಿವರಾಜ್ ಕೂಸಗಟ್ಟಿ ಸಭೆಯ ಅಜೆಂಡಾಗಳನ್ನು ಓದಿದರು.

ಪುರಸಭೆ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷೆ ನಫ್ಷಿಯಾ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಹಾಗೂ ಸದಸ್ಯರು ಹಾಜರಿದ್ದರು.

- - - -೧೫-ಎಂಬಿಆರ್೪:

ಮಲೇಬೆನ್ನೂರಲ್ಲಿ ಬುಧವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ, ಸದಸ್ಯರು, ಅಧಿಕಾರಿಗಳು ವಿವಿಧ ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆ ನಡೆಸಿದರು.